ಡಿಜಿಟಲ್‌ ಪಾಸ್‌: ₹ 10 ನಗದು ವಾಪಸ್‌

7

ಡಿಜಿಟಲ್‌ ಪಾಸ್‌: ₹ 10 ನಗದು ವಾಪಸ್‌

Published:
Updated:
ಡಿಜಿಟಲ್‌ ಪಾಸ್‌: ₹ 10 ನಗದು ವಾಪಸ್‌

ಬೆಂಗಳೂರು: ಬಿಎಂಟಿಸಿಯ ವಾಯು ವಜ್ರ ಪ್ರಯಾಣಿಕರು ಫೋನ್‌ಪೆ ಆ್ಯಪ್‌ ಮೂಲಕ ದಿನದ ಡಿಜಿಟಲ್‌ ಪಾಸ್‌ ಪಡೆದರೆ ₹10 ನಗದು ವಾಪಸ್‌ ಪಡೆಯಬಹುದು. ಸೋಮವಾರದಿಂದ ಈ ಸೌಲಭ್ಯ ಜಾರಿಗೆ ಬರಲಿದೆ.

ನಮ್ಮ ಪಾಸ್‌ ಡಿಜಿಟಲ್‌ ಪ್ಲ್ಯಾಟ್‌ಫಾರಂ ಮೂಲಕ (https://nammapass.series-5.com) ಈ ಪಾಸ್‌ಗಳನ್ನು ಪಡೆಯಬಹುದು. ನಗರದ ಸಿರೀಸ್‌ –5 ಲ್ಯಾಬ್ಸ್‌ ಎಂಬ ಟಿಕೆಟ್‌ ವ್ಯವಸ್ಥೆಗಳನ್ನು ಪೂರೈಸುವ ನವೋದ್ಯಮ ಸಂಸ್ಥೆ ಇದನ್ನು ನಿರ್ವಹಿಸುತ್ತಿದೆ. ಈ ಕಂಪನಿ ಮೇ 28ರಿಂದ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು ನಿಧಾನಗತಿಯಲ್ಲಿ ಜನಪ್ರಿಯತೆ ಪಡೆಯುತ್ತಿದೆ.

ನಗದು ವಾಪಸ್‌ ಕೊಡುಗೆಯ ಮೂಲಕ ‘ಫೋನ್‌ಪೆ’ಯು ಪ್ರಯಾಣಿಕರನ್ನು ಡಿಜಿಟಲ್‌ ಪಾಸ್‌ನತ್ತ ಆಕರ್ಷಿಸುವ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ಶೇ 100ರಷ್ಟು ನಗದು ರಹಿತ ವ್ಯವಹಾರದತ್ತ ಹೊರಳುವಲ್ಲಿ ಬಿಎಂಟಿಸಿ ಮುಂಚೂಣಿಯಲ್ಲಿದೆ.

‘ಪ್ರಯಾಣಿಕರು ಬಸ್‌ನೊಳಗೆ ಅಂಟಿಸಲಾದ ಫೋನ್‌ಪೆಯ ಪೋಸ್ಟರ್‌ನಲ್ಲಿರುವ ಕ್ಯೂಆರ್‌ ಕೋಡನ್ನು ಸ್ಕ್ಯಾನ್‌ ಮಾಡಬೇಕು. ಫೋನ್‌ಪೆ ಮೂಲಕ ಹಣ ಪಾವತಿಸಬೇಕು. ಆಗ ₹10ರ ನಗದು ವಾಪಸ್‌ ಸೌಲಭ್ಯ ಪಡೆಯಬಹುದು. ಈ ಸೌಲಭ್ಯ ಪ್ರಯಾಣಿಕ ಪಡೆಯುವ ಮೊದಲ ಪಾಸ್‌ಗೆ ಮಾತ್ರ ಅನ್ವಯಿಸುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು. 

‘ಸಾಕಷ್ಟು ಜನರು ನಮ್ಮ ವೆಬ್‌ಸೈಟ್‌ ಮೂಲಕ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸರಾಸರಿ 500 ಜನರು ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಸೋಮವಾರ 100 ಪಾಸ್‌ಗಳನ್ನು ನಾವು ವಿತರಿಸುತ್ತೇವೆ. ಮುಂದೆ ಈ ಸಂಖ್ಯೆಯನ್ನು ಬೇಡಿಕೆ ಆಧಾರದಲ್ಲಿ ಹೆಚ್ಚಿಸುತ್ತೇವೆ’ ಎಂದು ಸಿರೀಸ್‌ –5 ಲ್ಯಾಬ್ಸ್‌ನ ಸಿಇಒ ಸರೋ ಚಂದ್ರಭೂಷಣ್ ತಿಳಿಸಿದರು.

ಮುಂದೆ ಈ ಪಾಸ್‌ ಇನ್ನಷ್ಟು ಡಿಜಿಟಲೀಕರಣಗೊಳ್ಳಲಿದೆ. ಪ್ರಯಾಣಿಕರು ಪಾಸ್‌ನಲ್ಲಿ ತಮ್ಮ ಸೆಲ್ಫೀ ಚಿತ್ರವನ್ನು ಅಳವಡಿಸಿಕೊಳ್ಳಬಹುದು. ಬಿಎಂಟಿಸಿಯ ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್‌ಫೇಸ್‌ (ಎಪಿಐ) ವ್ಯವಸ್ಥೆಯನ್ನು ನಾವು ಇನ್ನಷ್ಟೇ ಪಡೆಯಬೇಕಿದೆ. ಒಮ್ಮೆ ಚತುರ ಸಾರಿಗೆ ವ್ಯವಸ್ಥೆ ಮತ್ತು ಟಿಕೆಟ್‌ ವ್ಯವಸ್ಥೆಯನ್ನು ಒಂದೆಡೆ ಸಂಯೋಜಿಸಿದರೆ ನಾವು ಎರಡನೇ ಹಂತದ ಡಿಜಿಟಲೀಕರಣಕ್ಕೆ ಮುಂದುವರಿಯಬಹುದು ಎಂದು ಅವರು ತಿಳಿಸಿದರು.

ಈ ಯೋಜನೆಯನ್ನು ವಿಸ್ತರಿಸುವುದಕ್ಕೆ ಬಿಎಂಟಿಸಿಯೂ ಆಸಕ್ತಿ ತೋರಿಸಿದೆ. ಎರಡು ತಿಂಗಳ ಒಳಗೆ ಬಿಎಂಟಿಸಿಯ ಆ್ಯಪ್‌ ಜತೆಗೆ ‘ನಮ್ಮ ಪಾಸ್‌’ ಕೂಡಾ ಒಂದಾಗಿ ಬರಲಿದೆ ಎಂದು ಅವರು ಹೇಳಿದರು.

‘ಇದು ಕ್ಲೌಡ್‌ ಆಧಾರಿತ ತಂತ್ರಜ್ಞಾನವನ್ನು ಬಳಸುತ್ತಿದೆ. ಭೌತಿಕ ಮತ್ತು ವಾಸ್ತವ ಅವಕಾಶಗಳನ್ನು ನಗದೀಕರಿಸಿಕೊಳ್ಳಲು ನವೋದ್ಯಮ ಸಂಸ್ಥೆ ಮುಂದಾಗಿದೆ. ಜಾಹೀರಾತಿನಿಂದ ಬರುವ ಆದಾಯವು ನಿಗಮದ ವೆಚ್ಚಗಳನ್ನು ಭರಿಸಲು ಮತ್ತು ದರ ಇಳಿಸಲು ಸಹಾಯಕವಾಗಲಿದೆ’ ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry