ಬಾರ್‌ನಲ್ಲಿ ಪೊಲೀಸರು, ಕಂಗಾಲಾದ ಕುಡುಕರು!

7
ಆರೋಪಿಗಳ ಮೇಲೆ ನಿಗಾ ಇಡಲು ಕಾರ್ಯಾಚರಣೆ

ಬಾರ್‌ನಲ್ಲಿ ಪೊಲೀಸರು, ಕಂಗಾಲಾದ ಕುಡುಕರು!

Published:
Updated:
ಬಾರ್‌ನಲ್ಲಿ ಪೊಲೀಸರು, ಕಂಗಾಲಾದ ಕುಡುಕರು!

ಬೆಂಗಳೂರು: ಸರಗಳ್ಳರು ಹಾಗೂ ಹಳೇ ಆರೋಪಿಗಳ ಮೇಲೆ ನಿಗಾ ಇಡಲು ಮಂಗಳವಾರದಿಂದ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ತಮ್ಮ ವ್ಯಾಪ್ತಿಯ ಬಾರ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಗ್ರಾಹಕರ ಪೂರ್ವಾಪರ ಪ‍ರಿಶೀಲಿಸುತ್ತಿದ್ದಾರೆ.

ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಜೂನ್ 1ರ ರಾತ್ರಿ ಕ್ಯಾಬ್ ಚಾಲಕ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ, ಭಾನುವಾರ ಮತ್ತು ಸೋಮವಾರ ವಿಭಾಗದ ವ್ಯಾಪ್ತಿಯಲ್ಲಿ ಸರಣಿ ಸರಗಳವು ಹಾಗೂ ಸುಲಿಗೆ ಪ್ರಕರಣಗಳು ವರದಿಯಾಗಿದ್ದವು. ಹೀಗೆ, ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿ ಆರೋಪಿಗಳ ಮೇಲೆ ನಿಗಾ ಇಡುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್‌ಗೆ ಸೂಚಿಸಿದ್ದರು.

ಸೂಚನೆಯ ಭಾಗವಾಗಿ ಮಂಗಳವಾರ ಸಂಜೆ 7 ಗಂಟೆಯಿಂದ ರಾತ್ರಿ 11.30ರವರೆಗೆ ವಿಭಾಗದ ವ್ಯಾಪ್ತಿಯ ಎಲ್ಲ ಬಾರ್‌ಗಳ ಮೇಲೂ ಪೊಲೀಸರು ದಾಳಿ ನಡೆಸಿದರು. ಚಾಕು ಹಾಗೂ ಗಾಂಜಾ ಪೊಟ್ಟಣಗಳು ಸಿಗಬಹುದೆಂದು ಪ್ರತಿಯೊಬ್ಬರ ಜೇಬುಗಳನ್ನೂ ಪರಿಶೀಲಿಸಿದರು. ಇದೇ ವೇಳೆ ಹೆಚ್ಚು ಕುಡಿದಿದ್ದವರಿಗೆ ಬೈದು ಬಾರ್‌ನಿಂದ ಕಳುಹಿಸಿದ ಪೊಲೀಸರು, ತಡರಾತ್ರಿವರೆಗೆ ವಹಿವಾಟು ನಡೆಸಿದರೆ ಕ್ರಮ ಜರುಗಿಸುವುದಾಗಿ ಬಾರ್ ಮಾಲೀಕರಿಗೂ ಎಚ್ಚರಿಕೆ ನೀಡಿದರು.

‘ಪ್ರಕರಣಗಳಲ್ಲಿ ಸರಗಳ್ಳರು, ಸುಲಿಗೆಕೋರರು ಬಾರ್‌ಗಳಲ್ಲೇ ಸಿಕ್ಕಿಬಿದ್ದಿದ್ದಾರೆ. ಬಾರ್‌ನಲ್ಲೇ ಸಂಚು ರೂಪಿಸಿರುವ ನಿದರ್ಶನಗಳು ತುಂಬ ಇವೆ. ಹೀಗಾಗಿ, ದಾಳಿ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದರು.

*

‘ಯಾರಿಗೂ ತೊಂದರೆ ಕೊಡಲ್ಲ’

‘ಒಂದೊಂದು ಬಾರ್‌ಗೆ ಮೂವರು ಸಿಬ್ಬಂದಿ ಹೋದೆವು. ಕುಡಿದ ಮತ್ತಿನಲ್ಲಿದ್ದವರು ನಮ್ಮನ್ನು ನೋಡುತ್ತಿದ್ದಂತೆಯೇ ದಿಕ್ಕ ತೋಚದಂತಾದರು. ಕೆಲವರು ನಿಧಾನವಾಗಿ ಅಲ್ಲಿಂದ ಕಾಲ್ಕೀಳಲು ಯತ್ನಿಸಿದರೆ, ಮತ್ತೆ ಕೆಲವರು ಬಾಟಲಿಗಳನ್ನು ಬಚ್ಚಿಡಲು ಮುಂದಾದರು. ‘ನಾವು ಯಾರಿಗೂ ತೊಂದರೆ ಕೊಡಲ್ಲ. ನಿಮ್ಮ ಕೆಲಸ ನೀವು ಮಾಡಿಕೊಳ್ಳಿ. ನಮ್ಮ ಕೆಲಸ ನಾವು ಮಾಡುತ್ತೇವೆ’ ಎಂದು ಪ್ರತಿಯೊಬ್ಬರನ್ನೂ ಪರಿಶೀಲಿಸಿದೆವು’ ಎಂದು ಪೊಲೀಸ್ ಸಿಬ್ಬಂದಿ ಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry