ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಘ್ಯರತ್ನ ರಾಜಕುಮಾರ್‌ಗೆ ಕಾವ್ಯ ಗೌರವ

Published 15 ಅಕ್ಟೋಬರ್ 2023, 15:42 IST
Last Updated 15 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಚಿತ್ರರಂಗದಲ್ಲಿ ಯಾವ ಕಲಾವಿದನ ಬಗ್ಗೆ ಇಲ್ಲಿವರೆಗೆ ಕಾವ್ಯ ಸಂಪುಟ ಬಂದಿದ್ದಿಲ್ಲ. ಭಾರತೀಯ ಚಿತ್ರರಂಗದ ಅನರ್ಘ್ಯರತ್ನ ರಾಜಕುಮಾರ್‌ ಅವರಿಗೆ ಕಾವ್ಯದ ಮೂಲಕ ಇಂದು ಗೌರವ ಸಲ್ಲಿಕೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ತಿಳಿಸಿದರು.

ಪೇರೂರು ಜಾರು ರಚಿಸಿರುವ ‘ಕನ್ನಡ ಕಣ್ಮಣಿ ಡಾ. ರಾಜಕುಮಾರ್‌’ ಕಾವ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಟರ ಬಗ್ಗೆ ಚಿತ್ರ, ಸಾಕ್ಷ್ಯಚಿತ್ರ, ಅನುಭವ ಕಥನ ಬಂದಿರಬಹುದು. ಆದರೆ, ಕಾವ್ಯ ಇಲ್ಲಿವರೆಗೆ ಬಂದಿರಲಿಲ್ಲ. ಅಂಥ ಗೌರವ ಕನ್ನಡದ ನಟನಿಗೆ ಸಿಕ್ಕಿರುವುದು ಚಿತ್ರರಂಗದ ಭಾಗ್ಯ ಎಂದು ಬಣ್ಣಿಸಿದರು.

ಗೋಕಾಕ ಚಳವಳಿಯನ್ನು ರಾಜಕುಮಾರ್ ಆರಂಭಿಸಿದ್ದಲ್ಲ. ಆದರೆ, ಅವರು ನೇತೃತ್ವವಹಿಸಿದ ಮೇಲೆ ಈ ಹೋರಾಟ ಜನಚಳವಳಿಯಾಗಿ ಪರಿವರ್ತನೆಗೊಂಡಿತು. ಲಕ್ಷಾಂತರ ಕನ್ನಡಿಗರು ಚಳವಳಿಯಲ್ಲಿ ಭಾಗವಹಿಸುವಂತಾಗಿತ್ತು. ರಾಜಕುಮಾರ್‌ ಹೊರತುಪಡಿಸಿದ ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತಾಂತ್ರಿಕತೆ ಬೆಳೆದಿಲ್ಲದ, ಹಣ ಹಾಕಿ ಚಿತ್ರ ಮಾಡುವುದು ಕಷ್ಟ ಇದ್ದ, ಕಪ್ಪು ಬಿಳುಪಿನ ಕಾಲದಲ್ಲಿ ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪ್ರವೇಶಿಸಿದ ರಾಜಕುಮಾರ್‌ ಕನ್ನಡ ಚಿತ್ರರಂಗ ಬೆಳೆಯಲು ಕಾರಣರಾದರು ಎಂದು ನೆನಪು ಮಾಡಿಕೊಂಡರು.

‘ಪುನೀತ್‌ ರಾಜಕುಮಾರ್‌ ನಿಧನರಾದಾಗ ಅವರು ಮಾಡುತ್ತಿದ್ದ ಸೇವೆಗಳು ಏನು ಎಂಬುದು ಗೊತ್ತಾಯಿತು. ಅಲ್ಲಿವರೆಗೆ ಯಾರಿಗೂ ಗೊತ್ತಿರಲಿಲ್ಲ. ಅದೇ ರೀತಿಯ ಸೇವೆಗಳನ್ನು ರಾಜಕುಮಾರ್‌ ಕೂಡ ಮಾಡುತ್ತಿದ್ದರು’ ಎಂದು ತಿಳಿಸಿದರು.

ಸಾಹಿತಿ ಕೆ. ಷರೀಫಾ ಮಾತನಾಡಿ, ‘ಹೊಸತನದ ಸಿನಿಮಾಗಳು ಬಹಳ ಬಂದಿರಬಹುದು. ಆದರೆ, ಸದಭಿರುಚಿಯ ಚಿತ್ರಗಳು ಬಹಳ ಇಲ್ಲ. ರಾಜಕುಮಾರ್‌ ಅವರ ಎಲ್ಲ ಚಿತ್ರಗಳು ಸದಭಿರುಚಿಯದ್ದಾಗಿದ್ದವು. ಶಿಕ್ಷಣವಿಲ್ಲದ, ಹಣವಿಲ್ಲದ, ಗಾಡ್‌ಫಾದರ್‌ಗಳಿಲ್ಲದ ರಾಜಕುಮಾರ್‌ ಸ್ವಂತ ಪ್ರತಿಭೆಯಿಂದಲೇ ಬೆಳೆದವರು’ ಎಂದು ಹೇಳಿದರು.

ರಾಜಕುಮಾರ್‌ ಅವರ ಮಗಳು ಲಕ್ಷ್ಮೀ ಗೋವಿಂದರಾಜ್‌, ‘ವಿಶಾಲ ಜನಸಂಕುಲ’ದ ಎ.ಕೆ. ಕರುಣಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT