ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರಾಜೇಶ್ವರಿನಗರ: ನಾಲ್ಕು ದಶಕಗಳಿಂದ ನೆರಳು ನೀಡುತ್ತಿದ್ದ ಮರ ಕೆಡವಿದ ಬಿಬಿಎಂಪಿ?

Published 18 ಆಗಸ್ಟ್ 2024, 17:43 IST
Last Updated 18 ಆಗಸ್ಟ್ 2024, 17:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ನಾಲ್ಕು ದಶಕಗಳಿಂದ ನೆರಳು ನೀಡುತ್ತಿದ್ದ ಮಳೆ ಮರವನ್ನು ಕೆಡವಿ ಹಾಕುವ ಮೂಲಕ ಬಿಬಿಎಂಪಿ ಪರಿಸರ ನಾಶ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮರ ಯಾರಿಗೂ ತೊಂದರೆ ನೀಡುವ ಪ್ರದೇಶದಲ್ಲಿ ಇರಲಿಲ್ಲ, ಆರೋಗ್ಯಕರವಾಗಿತ್ತು. ಆದರೂ ಮರ ಕಡಿಯುವಂತೆ ಬಿಬಿಎಂಪಿ ಅರಣ್ಯ ಕೋಶದ ಅಧಿಕಾರಿಗಳು ಆದೇಶ ಮಾಡಿದ್ದು, ಶನಿವಾರ ಕಡಿದು ಹಾಕಲಾಗಿದೆ.

74 ವರ್ಷದ ಶಂಕರ ನಾರಾಯಣ್ ನೇತೃತ್ವದಲ್ಲಿ ಸ್ಥಳೀಯರು ಮರ ಉಳಿಸಲು ಪ್ರಯತ್ನಿಸಿದರೂ ಗುತ್ತಿಗೆದಾರರು ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ.

ಅಧಿಕಾರಿಗಳು ಮರ ಪರೀಕ್ಷಿಸಿ ವರದಿ ನೀಡಬೇಕು. ಅಪಾಯಕಾರಿ ಎಂಬುದು ವರದಿಯಲ್ಲಿದ್ದರಷ್ಟೇ ಕಡಿಯಬಹುದು. ಆದರೆ, ಇಂಥ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಬಿಬಿಎಂಪಿ ಅರಣ್ಯ ಕೋಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಮನಕ್ಕೆ ತರಲಾಯಿತು. ಅವರು ಕಿರಿಯ ಅಧಿಕಾರಿಯನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದರು. ಗುತ್ತಿಗೆದಾರರೊಬ್ಬರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಒತ್ತಾಯಪೂರ್ವಕವಾಗಿ ಮರ ಕಡಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಬಿಎಂಪಿ ಅರಣ್ಯ ಕೋಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಪರಿಸರ ಪ್ರೇಮಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ಯು ಬಿಬಿಎಂಪಿ ಅರಣ್ಯ ಕೋಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT