ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಷಿಪ್ತಗೊಂಡಿರುವ ಜಗತ್ತು

‘ಸಾಹಿತ್ಯ ಸಮೀರ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೊಡ್ಡರಂಗೇಗೌಡ
Published 7 ಫೆಬ್ರುವರಿ 2024, 18:21 IST
Last Updated 7 ಫೆಬ್ರುವರಿ 2024, 18:21 IST
ಅಕ್ಷರ ಗಾತ್ರ

ಬೆಂಗಳೂರು: ‘ಸುತ್ತಲ ಜಗತ್ತು ವಿಕ್ಷಿಪ್ತಗೊಂಡಿದ್ದು, ಅಪಮೌಲ್ಯಗಳೇ ತುಂಬಿ ತುಳುಕುತ್ತಿವೆ. ಶ್ರೇಷ್ಠವಾದುದನ್ನು ಅರಸುವ ಬದಲು ಕನಿಷ್ಠದ ಕಡೆಗೆ ಜನರು ಹೋಗುತ್ತಿದ್ದಾರೆ‘ ಎಂದು ಕವಿ ದೊಡ್ಡರಂಗೇಗೌಡ ವಿಷಾದಿಸಿದರು.

ನಗರದಲ್ಲಿ ಬುಧವಾರ ನಡೆದ ದೊಡ್ಡರಂಗೇಗೌಡರ ಸಮಗ್ರ ಸಾಹಿತ್ಯ ಕೃತಿ ‘ಸಾಹಿತ್ಯ ಸಮೀರ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೊಬೈಲ್‌ ಬಂದ ಬಳಿಕ ಎಲ್ಲರೂ ಅಕ್ಷರಶಃ ದ್ವೀಪಗಳಾಗಿ ಬಿಟ್ಟಿದ್ದೇವೆ. ಮಾನವೀಯ ಸಂಬಂಧಗಳು ನಶಿಸಿಹೋಗಿವೆ. ಈ ವ್ಯವಸ್ಥೆಯನ್ನು ಸತ್ಸಂಗ, ಸದಾಶಯ, ಶ್ರದ್ಧೆಯಿಂದ ತಿಳಿಗೊಳಿಸಲು ಸಾಧ್ಯ. ಆದರೆ, ಅದಕ್ಕೆ ಬಹಳ ಸಮಯ ಬೇಕು‘ ಎಂದು ವಿವರಿಸಿದರು.

ಸಂಶೋಧಕ ಬೈರಮಂಗಲ ರಾಮೇಗೌಡ ಮಾತನಾಡಿ, ‘ಚಲನಚಿತ್ರದ ಹಾಡುಗಳ ಮೂಲಕ ದೊಡ್ಡರಂಗೇಗೌಡರು ಮನೆಗಳಿಗೆ, ಮನಗಳಿಗೆ ತಲುಪಿದರು. ಚಿತ್ರಗೀತೆಗಳೆಂದರೆ ಅರ್ಥಹೀನ ಪ್ರಾಸಗಳು ಎಂಬಂತಾಗಿದ್ದ ಕಾಲದಲ್ಲಿ ಗಟ್ಟಿ ಸಾಹಿತ್ಯವನ್ನು ಅವರು ನೀಡಿದರು’ ಎಂದು ಶ್ಲಾಘಿಸಿದರು.

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ‘ಮೂರು ವರ್ಷಗಳಿಂದ ಸರ್ಕಾರದಿಂದ ಪುಸ್ತಕ ಖರೀದಿ ನಡೆದಿಲ್ಲ. ಸನ್ಮಾನ, ಸಮ್ಮೇಳನ, ಪ್ರಶಸ್ತಿ ಪ್ರದಾನಗಳಷ್ಟೇ ಆಗುತ್ತಿವೆ. ಪುಸ್ತಕ ಖರೀದಿ ಮಾಡುವ ಮೂಲಕ ಸರ್ಕಾರವು ಪುಸ್ತಕ ಸಂಸ್ಕೃತಿಯನ್ನು ಉಳಿಸಬೇಕು’ ಎಂದು ಆಗ್ರಹಿಸಿದರು.

ನಟ ಸುಚೇಂದ್ರ ಪ್ರಸಾದ್‌, ಕೆ.ಸಿ. ಜನರಲ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೋಹನ್‌ ರಾಜಣ್ಣ, ಸಂಗೀತ ನಿರ್ದೇಶಕ ವಿ. ಮನೋಹರ್‌, ಪ್ರಕಾಶಕ ಭದ್ರಾವತಿ ರಾಮಾಚಾರಿ, ಕವಿ ಶಾಂತರಾಮ ಶೆಟ್ಟಿ, ಬಿಎಂಶ್ರೀ ಪ್ರತಿಷ್ಠಾನದ ಶಾಂತರಾಮ್‌, ದೊಡ್ಡರಂಗೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಉಪೇಂದ್ರ ಕುಮಾರ್‌, ಸಂಚಾಲಕ ಪರಮ್‌ ಗುಬ್ಬಿ ಭಾಗವಹಿಸಿದ್ದರು.

Cut-off box - ‘ಸೌಲಭ್ಯದ ಬದಲು ಗ್ಯಾರಂಟಿ‘ ‘ರಸ್ತೆ ಚರಂಡಿ ನೀರು ಮನೆ ಸಹಿತ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿರುವ ಸರ್ಕಾರ ‘ಗ್ಯಾರಂಟಿ’ಗಳನ್ನು ನೀಡಿ ಅದರ ಮರೆಯಲ್ಲಿ ಹಣವನ್ನು ಅಕ್ರಮವಾಗಿ ಕೂಡಿಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಹೊರಗೆ ಬರುತ್ತದೆ. ಮತ ಗಳಿಸುವುದೂ ಒಂದು ಕಲೆ. ಎಲ್ಲರೂ ಆ ಲೆಕ್ಕಾಚಾರದಲ್ಲಿಯೇ ಮುಳುಗಿದ್ದಾರೆ’ ಎಂದು ದೊಡ್ಡರಂಗೇಗೌಡ ಆರೋಪಿಸಿದರು.

- ಪುಸ್ತಕ ಪರಿಚಯ ಸಂಪುಟ: ಸಾಹಿತ್ಯ ಸಮೀರ ಪ್ರಕಾಶನ: ಮಹಿಮಾ ಪ್ರಕಾಶನ ಪುಟ: 892 ದರ: ₹ 1000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT