ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ ಎಸಿಬಿ

ಟಿಡಿಆರ್‌ ವಂಚನೆ: ಕೃಷ್ಣಲಾಲ್‌, ಇನ್ನೂ ನಾಲ್ವರ ವಿರುದ್ಧ ಕಾನೂನು ಪ್ರಕ್ರಿಯೆ
Last Updated 4 ಜನವರಿ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌ಸಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಮತ್ತು ಇತರ ಕೆಲವು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ರಮೇಶ್‌, ಸಹಾಯಕ ಕಂದಾಯ ಅಧಿಕಾರಿ ಈಶ್ವರ ಪ್ರಸನ್ನಯ್ಯ, ರೆವಿನ್ಯೂ ಇನ್‌ಸ್ಪೆಕ್ಟರ್‌ ಜಗನ್ನಾಥ ರೆಡ್ಡಿ ಹಾಗೂ ಗ್ರಾಮ ಸಹಾಯಕ ಚಂದ್ರಶೇಖರ್‌ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಲು ಒಪ್ಪಿಗೆ ನೀಡುವಂತೆ ಕೇಳಲಾಗಿದೆ. ತನಿಖೆಯನ್ನು ಎಸಿಬಿ ಎಸ್‌ಪಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ನಡೆಸುತ್ತಿದೆ. ಐಜಿಪಿ ಚಂದ್ರಶೇಖರ್‌ ಮಾರ್ಗದರ್ಶನ ಮಾಡುತ್ತಿದ್ದಾರೆ.

ಕೃಷ್ಣಲಾಲ್‌ ವಿರುದ್ಧ ಕಾನೂನು ಪ್ರಕ್ರಿಯೆ ನಡೆಸಲು ಅನುಮತಿ ನೀಡುವಂತೆ ಕೇಳಿ ಎಸಿಬಿ ಪತ್ರ ಬರೆದಿದೆ. ಪತ್ರವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಬಿಬಿಎಂಪಿ ಕಮಿಷನರ್‌ ಬಿ.ಎಚ್‌. ಅನಿಲ್‌ ಕುಮಾರ್‌ ಖಚಿತಪಡಿಸಿದರು. ‘ಪ್ರಜಾವಾಣಿ’ಗೆ ತಿಳಿಸಿದರು.

ಟಿಡಿಆರ್‌ ಪ್ರಕರಣ ದಾಖಲಾದ ಬಳಿಕ ಆರು ತಿಂಗಳು ತಲೆಮರೆಸಿಕೊಂಡು ಎಸಿಬಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಕೃಷ್ಣಲಾಲ್‌ ಅವರನ್ನು ಅಂತಿಮವಾಗಿ ನವೆಂಬರ್‌ 12ರಂದು ಕೋರಮಂಗಲದ ಬಳಿ ಬಂಧಿಸಲಾಗಿತ್ತು. ಸಂಪೂರ್ಣ ವಿಚಾರಣೆ ಬಳಿಕ ನವೆಂಬರ್‌ 26ರಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ರಸ್ತೆ ವಿಸ್ತರಣೆಗಾಗಿ ಕೌದೇನಹಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಜಮೀನು ಮತ್ತು ಕಟ್ಟಡಗಳಿಗೆ ಪರ್ಯಾಯವಾಗಿ ಕೊಡುವ ಟಿಡಿಆರ್‌ಸಿ ಅನ್ನು ನಿಜವಾದ ಮಾಲೀಕರನ್ನು ಬಿಟ್ಟು ಬೇರೆಯವರಿಗೆ ವಿತರಿಸಿದ ಆರೋಪ ಕೃಷ್ಣಲಾಲ್‌ ಮೇಲಿದೆ. ಅಲ್ಲದೆ, ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚುವರಿಯಾಗಿ ಟಿಡಿಆರ್‌ಸಿ ನೀಡಲಾಗಿದೆ ಎಂದೂ ಎಸಿಬಿ ದೂರಿದೆ.

ಕೃಷ್ಣಲಾಲ್‌ ಬಿಬಿಎಂಪಿ ಮಹದೇವಪುರ ವಲಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದಾಗ ಟಿಡಿಆರ್‌ಗೆ ಸಂಬಂಧಿಸಿದ 47 ಕಡತಗಳು ನಾಪತ್ತೆ ಆಗಿದ್ದು, ಈ ಸಂಬಂಧ ಇನ್ನೊಂದು ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಅನುಮತಿ ಸಿಕ್ಕ ಬಳಿಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಟಿಡಿಆರ್‌ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಟಿಡಿಆರ್‌ ವಂಚನೆ ಪ್ರಕರಣದಲ್ಲಿ ಇನ್ನೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಮಧ್ಯವರ್ತಿಗಳು ಪ್ರಕರಣದಲ್ಲಿ ಕೈಜೋಡಿಸಿದ್ದು, ಕೆಲವರನ್ನು ಮೊದಲೇ ಬಂಧಿಸಲಾಗಿತ್ತು. ಇಂತಹದೇ ಪ್ರಕ ರಣದಲ್ಲಿ ಬಿಬಿಎಂಪಿ ಸಹಾಯಕ ಎಂಜಿನಿಯರ್‌ ದೇವರಾಜ್‌ ಅವರನ್ನೂ ಬಂಧಿಸಲಾಗಿತ್ತು. ಅವರೂ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಸಾವಿರಾರು ಕೋಟಿ ಹಗರಣ?

ಬೆಂಗಳೂರು ನಗರದಲ್ಲಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಜಮೀನು ಹಾಗೂ ಕಟ್ಟಡಕ್ಕೆ ಬದಲಾಗಿ ವಿತರಿಸುವ ಟಿಡಿಆರ್‌ಸಿ ಅನ್ನು ಜುಜುಬಿ ಮೊತ್ತಕ್ಕೆ ಖರೀದಿಸಿರುವ ಕೆಲವು ಮಧ್ಯವರ್ತಿಗಳು ಭಾರಿ ಹಣಕ್ಕೆ ಮಾರಾಟ ಮಾಡಿದ್ದಾರೆ. ಈ ವ್ಯವಹಾರದಲ್ಲಿ ಸಾವಿರಾರು ಕೋಟಿ ಹಣ ಕೈ ಬದಲಾವಣೆ ಆಗಿದೆ ಎಂದು ಎಸಿಬಿ ಮೂಲಗಳು ಸ್ಪಷ್ಪಪಡಿಸಿವೆ.

ಅತ್ಯಂತ ಪ್ರಭಾವಿ ಕುಳಗಳು ಈ ವ್ಯವಹಾರದಲ್ಲಿ ಭಾಗಿಯಾಗಿವೆ. ಈ ಪ್ರಕರಣಗಳ ತನಿಖೆ ಮುಂದುವರಿಸುವುದನ್ನು ತಪ್ಪಿಸಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT