ಬುಧವಾರ, ಮೇ 18, 2022
29 °C

‘ತೇಜಸ್'ನಲ್ಲಿ ತೇಜಸ್ವಿ ಸೂರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಗುರುವಾರ ಹಾರಾಟ ನಡೆಸಿದರು. 30 ನಿಮಿಷಗಳ ಬಾನಿನಲ್ಲಿ ಸುತ್ತಾಡಿದ ಬಳಿಕ ಅನುಭವ ಹಂಚಿಕೊಂಡ ಅವರು, 'ನೆಲದಿಂದ 15 ಸಾವಿರ ಮೀ. ಎ‌ತ್ತರದಲ್ಲಿ ಗಂಟೆಗೆ 1 ಸಾವಿರ ಕಿ.ಮೀ. ವೇಗದಲ್ಲಿ ಹಾರಾಟ ನಡೆಸಿದ್ದು ರೋಮಾಂಚನಕಾರಿ ಅನುಭವ. ಇದನ್ನು ಪದಗಳಲ್ಲಿ ವರ್ಣಿಸಲಾಗದು’ ಎಂದರು.

‘ಹಾರಾಟಕ್ಕೆ ಮುನ್ನ ಒಂಟು ಗಂಟೆಯ ಪೂರ್ವತಯಾರಿ ನಡೆಸಿದ್ದೆ. ತುರ್ತು ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡಿದ್ದರು. ಗುರುತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ಅತಿವೇಗದಲ್ಲಿ ಸಾಗಬೇಕಾಗುತ್ತದೆ. ಹಾಗಾಗಿ ಹೆಚ್ಚು ಆಹಾರ ಸೇವಿಸಬೇಡಿ ಎಂದು ಮೊದಲೇ ಹೇಳಿದ್ದರು. ನಿತ್ಯವೂ ಓಡುವ ಮೂಲಕ ನಾನು ದೈಹಿಕ ಸಾಮರ್ಥ್ಯ ಕಾಪಾಡಿಕೊಂಡಿದ್ದೇನೆ. ಹಾಗಾಗಿ ಈ ಹಾರಾಟದ ವೇಳೆ ಯಾವುದೇ ಸಮಸ್ಯೆ ಆಗಲಿಲ್ಲ’  ಎಂದರು. 

‘ಎಚ್ಎಎಲ್‌ ನಿಂದ 83 ವಿಮಾನಗಳನ್ನು ಖರೀದಿಸಲು ₹ 48,000 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ತೇಜಸ್‌ನಲ್ಲಿ ಹಾರಾಟ ನಡೆಸಿದ್ದೇನೆ. ಈ ಯುದ್ಧವಿಮಾನದ ನಿರ್ಮಾಣದಲ್ಲಿ ಭಾಗಿಯಾದ ವಿಜ್ಞಾನಿಗಳಿಗೆ ಹಾಗೂ ಸಿಬ್ಬಂದಿಗೂ ಗೌರವ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

'ತೇಜಸ್ ಜಾಗತಿಕ ಮಟ್ಟದ ಬ್ರಾಂಡ್ ಆಗಿ ಪರಿವರ್ತನೆಯಾಗಲಿದೆ. ಈ ಯುದ್ಧ ವಿಮಾನ ನಮ್ಮ ಬೆಂಗಳೂರಿನ ಹೆಮ್ಮೆ. ಈ ವಿಮಾನಗಳ ರಫ್ತಿನ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ದೇಶವು ಸೂಪರ್ ಪವರ್ ಆಗಲಿದೆ. ಈ ವಿಮಾನಗಳ ಉತ್ಪಾದನೆಯಿಂದಾಗಿ ನಗರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ’ ಎಂದು ತಿಳಿಸಿದರು.

'ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಒತ್ತನ್ನು ನೀಡುತ್ತಿದೆ. ತನ್ಮೂಲಕ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 'ಆತ್ಮ ನಿರ್ಭರತೆ' ಸಾಧಿಸಲಾಗುತ್ತಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ವಿದೇಶಿ ಅವಲಂಬನೆಯನ್ನು ತಪ್ಪಲಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು