ಆಗರ ಕೆರೆ ಪ್ರಕರಣ ಹೈಕೋರ್ಟ್‌ ಅಂಗಳಕ್ಕೆ

7
ಹೊಸೂರು ಲೇಔಟ್ ನಿವಾಸಿಗಳ ತೀವ್ರ ವಿರೋಧ

ಆಗರ ಕೆರೆ ಪ್ರಕರಣ ಹೈಕೋರ್ಟ್‌ ಅಂಗಳಕ್ಕೆ

Published:
Updated:
Deccan Herald

ಬೆಂಗಳೂರು: ಆಗರ ಕೆರೆಯನ್ನು ಖಾಸಗೀಕರಣಗೊಳಿಸಲು ಮುಂದಾದ ಪ್ರಕರಣ ಮತ್ತೆ ಹೈಕೋರ್ಟ್‌ ಮುಂದೆ ಬಂದಿದೆ. ಹೊಸೂರು ಲೇಔಟ್‌ನ ನಾಗರಿಕರು ಮತ್ತು ಚಳವಳಿಕಾರರು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.   

2007ರಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ಆಗರ, ಹೆಬ್ಬಾಳ, ವೆಂಗಯ್ಯನಕೆರೆ ಮತ್ತು ನಾಗವಾರ ಕೆರೆಗಳನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ವಹಿಸಿತ್ತು. 15 ವರ್ಷಗಳ ಅವಧಿಗೆ ಅವರಿಗೆ ಗುತ್ತಿಗೆ ವಹಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಕೆರೆ ಹೋರಾಟಗಾರರು ಮತ್ತು ಎಚ್‌ಎಸ್‌ಆರ್‌ ವಾರ್ಡ್‌ನ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. 

ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡ ಖಾಸಗಿ ಏಜೆನ್ಸಿಯು ಕೆರೆ ಪ್ರದೇಶದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸಲು ಮುಂದಾಗಿತ್ತು. 2009ರಲ್ಲಿ ಎನ್ವೈರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ ನೀಡಿದ ದೂರಿನ ಮೇಲೆ ಹೈಕೋರ್ಟ್‌ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ನಡೆಸದಂತೆ ತಡೆಯೊಡ್ಡಿತ್ತು.

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಖಾಸಗಿ ಕಂಪನಿ ನಡುವೆ ಆಂತರಿಕ ಭಿನ್ನಾಭಿಪ್ರಾಯವಿದೆ. ಈ ಕಾರಣಕ್ಕಾಗಿ ಕಂಪನಿಯು ಹೈಕೋರ್ಟ್‌ ಮೊರೆ ಹೋಗಿದೆ ಎಂದು ಆಗರ ಕೆರೆ ರಕ್ಷಣೆ ಮತ್ತು ನಿರ್ವಹಣಾ ಸಂಘದ ಸದಸ್ಯರು ಹೇಳಿದರು.

ಕಾನೂನು ಹೋರಾಟದಲ್ಲಿ ಖಾಸಗಿ ಕಂಪನಿ ಪರ ತೀರ್ಪು ಬರುವ ಸಾಧ್ಯತೆ ಇದೆ. ಆದರೆ, ಕೆರೆಯನ್ನು ಸಾರ್ವಜನಿಕರ ಹಣದಿಂದ ಪುನರುಜ್ಜೀವಗೊಳಿಸಲಾಗಿದೆ. ಈಗ ಅದು ಖಾಸಗಿ ಸಂಸ್ಥೆಯ ತೆಕ್ಕೆಗೆ ಹೋಗುತ್ತಿದೆ ಎಂದು ಈ ಕೆರೆಯ ಪುನರುಜ್ಜೀವನ ಕಾರ್ಯದಲ್ಲಿ ಸಕ್ರಿಯರಾಗಿದ್ದ ಹೋರಾಟಗಾರ್ತಿ ಕವಿತಾ ರೆಡ್ಡಿ ಹೇಳಿದರು.    ‍

ಆಗರ ಕೆರೆ ರಕ್ಷಣೆ ಮತ್ತು ನಿರ್ವಹಣಾ ಸಂಘವು ಒಂದು ವರ್ಷದ ಹಿಂದೆಯೇ ಕೆರೆಯನ್ನು ಸುಸ್ಥಿತಿಗೆ ತಂದಿತ್ತು. ಕೆರೆ ಇಂದಿನ ಸ್ವರೂಪಕ್ಕೆ ಬರಬೇಕಾದರೆ ನಮ್ಮೆಲ್ಲರ ಕಠಿಣ ಪರಿಶ್ರಮ ಇದೆ. ಒಂದು ವೇಳೆ ಈ ಪ್ರದೇಶ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡರೆ ಇಲ್ಲಿ ಸಸಿಗಳು ಮತ್ತು ಇತರ ಜೀವರಾಶಿ ಬದುಕಲು ಅವಕಾಶವೇ ಸಿಗುವುದಿಲ್ಲ. ಅದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕೆರೆ ಈಗ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಆದರೆ, ಅದರ ಪ್ರಸ್ತುತ ಸ್ಥಿತಿಗತಿ ಬಗ್ಗೆ ಇಲಾಖೆಗೇ ಗೊತ್ತಿಲ್ಲ ಎಂದು ಸಂಘದ ಸದಸ್ಯರೊಬ್ಬರು ಹೇಳಿದರು.

ಈ ವಿಷಯದ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಭೆ ನಡೆಸಲಿವೆ ಎಂದು ಮೂಲಗಳು ಹೇಳಿವೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !