ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳಕ್ಕೆ ಸಂಭ್ರಮದ ತೆರೆ: 17 ಲಕ್ಷ ಜನರಿಂದ ವೀಕ್ಷಣೆ

Last Updated 6 ನವೆಂಬರ್ 2022, 21:22 IST
ಅಕ್ಷರ ಗಾತ್ರ

ಯಲಹಂಕ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆದ ಕೃಷಿಮೇಳಕ್ಕೆ ಭಾನುವಾರ ಸಂಭ್ರಮದ ತೆರೆ ಬಿತ್ತು.

ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮಾತನಾಡಿದ ಕುಲಪತಿ ಡಾ.ಎಸ್.ವಿ.ಸುರೇಶ್, ‘ಮೇಳಕ್ಕೆ ನಾಲ್ಕು ದಿನಗಳಲ್ಲಿ ಸುಮಾರು 17 ಲಕ್ಷ ಜನರು ಭೇಟಿ ನೀಡಿದ್ದರು. ಸುಮಾರು ₹ 9 ಕೋಟಿ ವಹಿವಾಟು ನಡೆದಿದೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ರೈತಸ್ನೇಹಿ ಸಂಶೋಧನೆಗಳನ್ನು ಕೃಷಿಕರ ಹೊಲಗಳಲ್ಲಿಯೂ ಕೈಗೊಳ್ಳುವ ಮೂಲಕ ನಮ್ಮ ಆವರಣದಿಂದ ಹೊರಗೂ ಕೃಷಿ ಕಾರ್ಯ ಚಟುವಟಿಕೆ ನಡೆಸಲಾಗುವುದು’ ಎಂದು ಹೇಳಿದರು.

‘ವಿವಿಧ ಪ್ರಶಸ್ತಿಗಳನ್ನು ಪಡೆದ ಪ್ರಗತಿಪರ ರೈತರು, ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಇತರೆ ರೈತರಿಗೂ ತಲುಪಿಸುವ ಮೂಲಕ ಕೃಷಿ ವಿಶ್ವವಿದ್ಯಾಲಯದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

‘ಕೃಷಿಕರು ಕೇವಲ ಕೃಷಿ ಮಾಡಿದರೆ ಸಾಲದು. ಉತ್ತಮ ಉದ್ಯಮಿಗಳಾಗಬೇಕೆಂಬುದು ಕೃಷಿ ವಿಶ್ವವಿದ್ಯಾಲಯದ ಆಶಯವಾಗಿದೆ. ಉತ್ಪಾದನೆ ಮಾಡುವವರು ತಮ್ಮ ಬೆಳೆಗಳನ್ನು ಸಂಸ್ಕರಿಸಿ, ಅದರಿಂದ ಉತ್ತಮವಾದ ಪದಾರ್ಥಗಳನ್ನು ತಯಾರು ಮಾಡುವ ಮೂಲಕ ಮೌಲ್ಯವರ್ಧನೆ ವೃದ್ಧೀಕರಿಸಿಕೊಳ್ಳಬೇಕು. ಇದರಿಂದ ರೈತರ ಆದಾಯವೂ ಹೆಚ್ಚಾಗಲು ಸಾಧ್ಯವಾಗುತ್ತದೆ’ ಎಂದರು.

ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ’ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತರು ಮಾಡಿರುವ ಹೊಸ ಸಂಶೋಧನೆಗಳನ್ನು ಕಷ್ಟಪಟ್ಟು ವ್ಯವಸಾಯ ಮಾಡುತ್ತಿರುವ ಅವಿ ದ್ಯಾವಂತ ರೈತರಿಗೂ ತಲುಪಿಸಬೇಕು. ಆ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಿ, ಅವರ ಜೀವನಮಟ್ಟ ಸುಧಾರಣೆಯಾಗಲು ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಸಂಶೋಧನಾ ನಿರ್ದೇಶಕ ಡಾ.ಕೆ.ಬಿ.ಉಮೇಶ್ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ವಸ್ತು ಪ್ರದರ್ಶನ ಮಳಿಗೆಗಳಿಗೆ ಹಾಗೂ ಕೃಷಿ ಮೇಳದ ವಿಶಿಷ್ಟ ಪ್ರಶಸ್ತಿಗಳನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT