ಬುಧವಾರ, ಜೂನ್ 29, 2022
23 °C

ಬಂದ್ ಆಗಲಿದೆ ಗಂಗಮ್ಮ ಸರ್ಕಲ್, ಎಂ.ಎಸ್.ಪಾಳ್ಯ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯದಾಸರಹಳ್ಳಿ: ಜಾಲಹಳ್ಳಿಯ ಗಂಗಮ್ಮ ಸರ್ಕಲ್‌ನಿಂದ ವಾಯುಪಡೆ ಸ್ಟೇಷನ್ ಒಳಗಿನಿಂದ ಹಾದು ಹೋಗಿರುವ ರಸ್ತೆ ಇನ್ನೊಂದು ವಾರದಲ್ಲಿ ಬಂದ್ ಆಗಲಿದೆ. ಇದರಿಂದಾಗಿ ಎಂ.ಎಸ್. ಪಾಳ್ಯ, ಯಲಹಂಕ, ಪೀಣ್ಯ ಭಾಗಕ್ಕೆ ಸಂಚಾರ ಮಾಡುವ ಲಕ್ಷಾಂತರ ಜನರಿಗೆ ತೊಂದರೆ ಎದುರಾಗಲಿದೆ.

ಭದ್ರತೆ ಕಾರಣಕ್ಕೆ ಜಾಲಹಳ್ಳಿ ವಾಯುಪಡೆ ಈ ರಸ್ತೆ ಬಂದ್ ಮಾಡಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂಚಾರ ನಿರ್ಬಂಧಿಸಲು ಹೈಕೋರ್ಟ್ ಅನುಮತಿ ನೀಡಿದ್ದು, ಫಲಕವನ್ನು ವಾಯುಪಡೆ ಅಳವಡಿಸಿದೆ. ‘ಜುಮ್‌ಜುಮ್‌ ಗೇಟ್ ಮೂಲಕ ಹಾದು ಹೋಗುವ ರಸ್ತೆಯನ್ನು ಬಂದ್ ಮಾಡಲಾಗುವುದು’ ಎಂಬ ತಿಳಿಸಿದೆ.

ಒಮ್ಮೆಲೆ ಮುಚ್ಚಿದರೆ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 10 ದಿನಗಳ ಸಮಯಾವಕಾಶ ನೀಡಿ ಸೂಚನಾ ಫಲಕ ಅಳವಡಿಸಿದೆ.

ಎಂ.ಎಸ್. ಪಾಳ್ಯ, ಯಲಹಂಕ ಕಡೆಗೆ ಹೋಗುವವರಿಗೆ ಈ ರಸ್ತೆ ಅನುಕೂಲವಾಗಿತ್ತು. ಪೀಣ್ಯ, ಕೆಂಗೇರಿ ಕಡೆಯಿಂದ ಯಲಹಂಕ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಮೆಜೆಸ್ಟಿಕ್, ಮಲ್ಲೇಶ್ವರ, ಯಶವಂತಪುರ ಕಡೆಯಿಂದ ಬರುವವರು ರಾಮಚಂದ್ರಪುರ ಕ್ರಾಸ್ ಮೂಲಕ ಅಥವಾ ಬಿಇಎಲ್ ವೃತ್ತದಿಂದ ದೊಡ್ಡ ಬೊಮ್ಮಸಂದ್ರ ಮಾರ್ಗವಾಗಿ ವಿದ್ಯಾರಣ್ಯಪುರದ ಮಾರ್ಗದಲ್ಲಿ ಎಂ.ಎಸ್. ಪಾಳ್ಯ ತಲುಪಬೇಕಾಗುತ್ತದೆ. ಇದರಿಂದ ಸುಮಾರು 5 ಕಿ.ಮೀ ಸುತ್ತಾಡಿದಂತೆ ಆಗಲಿದೆ. ಜಾಲಹಳ್ಳಿ ಕ್ರಾಸ್ ಕಡೆಯಿಂದ ಬರುವವರಂತೂ ಪರದಾಡಬೇಕಾಗುತ್ತದೆ.

ಈ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ವಿಸ್ತರಿಸಿದ್ದರಿಂದ ವಾಹನಗಳ ಸಂಚಾರ ಸುಗಮವಾಗಿತ್ತು. ಆದರೆ, ರಾಮಚಂದ್ರಪುರ ಮಾರ್ಗ ಮತ್ತು ದೊಡ್ಡಬೊಮ್ಮಸಂದ್ರ ಮಾರ್ಗದ ರಸ್ತೆಗಳು ತೀರಾ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಕಿರಿಕಿರಿಯಾಗಲಿದೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ವಾಯು‍ಪಡೆ ಈ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿತ್ತು. ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಭದ್ರತೆ ಕಾರಣ ತೋರಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ರಸ್ತೆ ಬಂದ್ ಆದರೆ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು