ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಹಳ್ಳಿ ಕೆರೆ: ₹5 ಕೋಟಿಯ ಕಲ್ಮಶ ಗುಂಡಿ

ಮರು ಅಭಿವೃದ್ಧಿಗೆ ಬಿಬಿಎಂಪಿಯಿಂದ ₹4 ಕೋಟಿ l ಒಳಚರಂಡಿ ನೀರಿಗಿಲ್ಲ ತಡೆ l ಮಾಡಿದ್ದ ಕಾಮಗಾರಿಗೆ ಮತ್ತೆ ವೆಚ್ಚ
Last Updated 3 ಜನವರಿ 2023, 21:20 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ವರ್ಷಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದ ಅಮೃತಹಳ್ಳಿ ಕೆರೆ ಕಸ–ಕಲ್ಮಶದ ಗುಂಡಿಯಾಗಿದ್ದು, ಬಿಬಿಎಂಪಿ ಮತ್ತೆ ₹4 ಕೋಟಿಯಲ್ಲಿ ಮತ್ತೆ ಅಭಿವೃದ್ಧಿ ಮಾಡಲು ಮುಂದಾಗಿದೆ.

ಸ್ಥಳೀಯರ ಸಾಕಷ್ಟು ಹೋರಾಟದ ನಂತರ ಬಿಡಿಎ 2015ರಲ್ಲಿ ಅಮೃತಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಯಿತು. ಒಂದಷ್ಟು ಒತ್ತುವರಿಯನ್ನು ಬಿಟ್ಟು ಬೇಲಿಯನ್ನು ಹಾಕಿ, ಏರಿ ನಿರ್ಮಿಸಿ, ವಾಕಿಂಗ್ ಪಾಥ್‌ ಅನ್ನೂ ಅಭಿವೃದ್ಧಿಪಡಿಸಿತು. ಬಿಡಿಎ ₹5 ಕೋಟಿಗೂ ಹೆಚ್ಚು ವೆಚ್ಚ ಮಾಡಿದ ನಂತರ ಕೆರೆಯನ್ನು ಅನಾಥವನ್ನಾಗಿ ಮಾಡಿತಾದರೂ ಒಳಚರಂಡಿ ನೀರು ಹರಿಯುವುದನ್ನು ತಡೆಯಲಿಲ್ಲ. ಹೀಗಾಗಿ ಅಭಿವೃದ್ಧಿ ಕಂಡಿದ್ದ ಕೆರೆ ನಿರ್ವಹಣೆ ಇಲ್ಲದೆ ವಿಷ ಉಣಿಸುವ ತಾಣವಾಯಿತು.

ಸ್ಥಳೀಯರು ಕೆರೆಯ ಸ್ವಚ್ಛತೆಗೆ ಸಾಕಷ್ಟು ಮನವಿ ಮಾಡಿಕೊಂಡರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಿವಿಗೊಟ್ಟಿರಲಿಲ್ಲ. ಆದರೆ, ಬಿಡಿಎಯಿಂದ ಕೆರೆ ಬಿಬಿಎಂಪಿಗೆ ವರ್ಗಾವಣೆಯಾಗಿದ್ದೇ ತಡ ಅಮೃತಹಳ್ಳಿ ಕೆರೆಯ ಅಭಿವೃದ್ಧಿ ಯೋಜನೆಗೆ ಚಾಲನೆ ಸಿಕ್ಕಿತು. 15ನೇ ಹಣಕಾಸು ಯೋಜನೆಯಡಿ ₹4 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಮುಂದಾಯಿತು. 2022ರ ಮೇನಲ್ಲಿ ತಾಂತ್ರಿಕವಾಗಿಯೂ ಯೋಜನೆಗೆ ಸಮ್ಮತಿ ಸಿಕ್ಕರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

‘ಬಿಡಿಎ ಅಭಿವೃದ್ಧಿಯ ನಂತರ ಟೇಪ್‌ ಕಟ್‌ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಕೆರೆಯಲ್ಲಿ ಒಳಚರಂಡಿ ನೀರು ನೇರವಾಗಿ ಹರಿಯುತ್ತಿದ್ದು, ಅದೇ ತುಂಬಿ ದುರ್ವಾಸೆ ಬೀರುತ್ತಿದೆ. ಜೊಂಡು ಪೂರ್ಣವಾಗಿ ಬೆಳೆದಿದೆ‌. ಇದೀಗ ಚುನಾವಣೆ ಬಂದಾಗ ಕೆರೆ ನೆನಪಾಗಿದೆ’ ಎಂದು ಸ್ಥಳೀಯರಾದ ಜಯಲಕ್ಷ್ಮಿ ದೂರಿದರು.

‘ಏರಿ, ಫೆನ್ಸಿಂಗ್‌, ಚೈನ್‌ ಲಿಂಕ್‌ ಸೇರಿ ಹಲವು ಸೌಲಭ್ಯಗಳನ್ನು ಬಿಡಿಎ ಅಭಿವೃದ್ಧಿ ಮಾಡಿದೆ. ಆದರೆ, ಮತ್ತೆ ಅದೇ ಸೌಲಭ್ಯಗಳಿಗೆ, ಅಂದರೆ ಆಗಿರುವ ಕೆಲಸಗಳನ್ನೇ ಮತ್ತೆ ಹಾಳುಗೆಡವಿ ಮಾಡಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ’ ಎಂದು ರಾಜೇಶ್‌ ದೂರಿದರು.

‘ಬಿಡಿಎ ಅಭಿವೃದ್ಧಿ ಮಾಡಿದ್ದು ಸರಿ ಇರಲಿಲ್ಲ. ಕೊಳಕು ಹರಿಯುತ್ತಿತ್ತು. ಮತ್ತೆ ಬಿಬಿಎಂಪಿಗೆ ಹಸ್ತಾಂತರಿಸಿ ಮತ್ತೆ ಅಭಿವೃದ್ಧಿ ಮಾಡುತ್ತಿದ್ದಾರೆ. ಇದೀಗ ಏನೋ ಕೆಲಸ ಆರಂಭವಾಗಿದೆ’ ಎಂದು ಅಮೃತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವರಾಜ್‌ಗೌಡ ಹೇಳಿದರು.

ಕಾಮಗಾರಿ ಆರಂಭ...

‘ಹಿಂದೆ ಬಿಡಿಎ ಅಭಿವೃದ್ಧಿ ಮಾಡಿತ್ತು. ಈಗ ಅಮೃತಹಳ್ಳಿ ಕೆರೆಯಲ್ಲಿ ಪೂರ್ಣ ಕೊಳಕಿದೆ. ಅದನ್ನು ಹೊರಹಾಕಿ, ಒಳಚರಂಡಿ ನೀರು ಹರಿಯದಂತೆ ಪೈಪ್‌ಲೈನ್‌ ಅಳವಡಿಸುತ್ತಿದ್ದೇವೆ. ನೀರನ್ನು ಹೊರಹಾಕುವ ಕೆಲಸ ಆರಂಭವಾಗಿದ್ದು, ಶೀಘ್ರ ಅಭಿವೃದ್ಧಿ ಕಾಮಗಾರಿ ಮುಗಿಸುತ್ತೇವೆ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಡಿಪಿಆರ್‌ ಅನುಮೋದನೆ ವಿಳಂಬವಾಯಿತು. ಹೀಗಾಗಿ ಕಾಮಗಾರಿ ಆರಂಭವೂ ತಡವಾಯಿತು’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಕ್ಷತ್‌ ಹೇಳಿದರು.

ಮತ್ತೆ ಡಿಪಿಆರ್‌ಗೆ ₹4.75 ಲಕ್ಷ

ಅಮೃತಹಳ್ಳಿ ಕೆರೆಯನ್ನು ಅಭಿವೃದ್ಧಿ ಮಾಡಲು ಬಿಡಿಎ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸೇರಿದಂತೆ ಎಲ್ಲದಕ್ಕೂ ವೆಚ್ಚ ಮಾಡಿತ್ತು. ಆದರೆ ಇದೀಗ ಬಿಬಿಎಂಪಿ ಮತ್ತೆ ಡಿಪಿಆರ್‌ ಮಾಡಿದೆ. ಅದಕ್ಕೆ ಜಿಎಸ್‌ಟಿ ಸೇರಿ ₹4.75 ಲಕ್ಷ ವೆಚ್ಚ ಮಾಡಿದೆ. ಆದರೆ ಇದರಲ್ಲೂ ಒಳಚರಂಡಿ ನೀರು ಕೆರೆಗೆ ಬರದಂತೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ.

‘ಅಮೃತಹಳ್ಳಿಗೆ ಇರುವುದೇ ಒಂದು ಒಳಹರಿವು. ಸಹಕಾರನಗರದಿಂದ ಬರುವ ರಾಜಕಾಲುವೆಯಲ್ಲಿ ಒಳಚರಂಡಿ ನೀರೇ ಇರುತ್ತದೆ. ಇದು ಬರದಂತೆ ತಡೆದರೆ ಕೆರೆಗೆ ನೀರು ಎಲ್ಲಿಂದಲೂ ಹರಿಯುವುದಿಲ್ಲ. ಇನ್ನೊಂದು ಹರಿವು ಕೆರೆಯ ಬದಿಯಲ್ಲಿ, ಅದನ್ನು ದಾಟಿ ಹೋಗುತ್ತದೆ. ಬಿಡಿಎ ಫೆನ್ಸಿಂಗ್‌ ಮಾಡಿತ್ತು. ಮತ್ತೆ ಅದನ್ನೇ ಮಾಡಲಾಗುತ್ತಿದೆ. ಮಾಡಿದ ಕೆಲಸಕ್ಕೇ ಮತ್ತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು, ನೀರು ಸಂಸ್ಕರಣೆ ಘಟಕವನ್ನು (ಎಸ್‌ಟಿಪಿ) ಹಾಕಿದ್ದರೆ ಸಾಕಿತ್ತು. ಇದಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಹೇಗೆ ಅನುಮತಿ ನೀಡಿದೆಯೋ ಗೊತ್ತಿಲ್ಲ’ ಎಂದು ಸ್ಥಳೀಯರಾದ ಕಿರಣ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT