ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ–ಸಂತ್ರಸ್ತರ ನೋವಿಗೆ ಮಿಡಿಯುವ ರಮೇಶ್

ಬೆಳೆಗಾರರಿಂದ ತರಕಾರಿಗಳನ್ನು ಕೊಂಡು ಬಡವರಿಗೆ ಉಚಿತವಾಗಿ ವಿತರಣೆ l ನಡೆಯುತ್ತಿದೆ 60 ಸಾವಿರ ದಿನಸಿ ಕಿಟ್‌ ವಿತರಣೆ ಕಾರ್ಯ
Last Updated 26 ಏಪ್ರಿಲ್ 2020, 20:38 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಲಾಗಿರುವ ಲಾಕ್‌ಡೌನ್‌ನಿಂದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಕೋಟ್ಯಂತರ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಎರಡು ಹೊತ್ತು ಊಟವೂ ಸಿಗದೆ ನರಳುತ್ತಿದ್ದಾರೆ. ಇದಕ್ಕೆ ಆನೇಕಲ್‌ ತಾಲ್ಲೂಕು ಕೂಡ ಹೊರತಲ್ಲ. ಆದರೆ, ಹೀಗೆ ಸಂಕಷ್ಟದಲ್ಲಿರುವ ಜನರ, ರೈತರ ಪಾಲಿಗೆ ಆಶಾಕಿರಣವಾಗಿದ್ದಾರೆ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್.ಕೆ. ರಮೇಶ್.

ತಾಲ್ಲೂಕಿನ ನೂರಾರು ಎಕರೆಯಲ್ಲಿ ರೈತರು ತರಕಾರಿ ಬೆಳೆದಿದ್ದರು. ಆದರೆ, ಲಾಕ್‌ಡೌನ್‌ ಇರುವುದರಿಂದ ಮಾರುಕಟ್ಟೆ ಇಲ್ಲದೆ ಅವರ ಬದುಕು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿತ್ತು. ರೈತರು ಬೆಳೆದ ತರಕಾರಿಗಳನ್ನು ಕೊಂಡು ಉಚಿತವಾಗಿ ವಿತರಣೆ ಮಾಡುವ ಮೂಲಕ ಜನ ಮತ್ತು ರೈತರ ಹಿತ ಕಾಯುತ್ತಿದ್ದಾರೆ ಬಮೂಲ್‌ ಮಾಜಿ ಅಧ್ಯಕ್ಷರೂ ಆಗಿರುವ ರಮೇಶ್. ಇವರ ಸಹೋದರ ಆರ್.ಕೆ. ಕೇಶವರೆಡ್ಡಿ ಅವರು 100ಕ್ಕೂ ಹೆಚ್ಚು ಯುವಕರೊಂದಿಗೆ ತಾಲ್ಲೂಕಿನ ವಿವಿಧ ಭಾಗಗಳ ಮುಖಂಡರನ್ನು ಒಗ್ಗೂಡಿಸಿಕೊಂಡು ತರಕಾರಿ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಆನೇಕಲ್‌ ತಾಲ್ಲೂಕಿನ ಹಿನ್ನಕ್ಕಿ, ಮಾರನಾಯಕನಹಳ್ಳಿ, ತಿಂಡ್ಲು, ಅತ್ತಿಬೆಲೆ, ಮಾಯಸಂದ್ರ, ಹುಸ್ಕೂರು, ಕಾಡಅಗ್ರಹಾರ, ಚಿಂತಲಮಡಿವಾಳ, ಮಂಚನಹಳ್ಳಿ, ಕೊಪ್ಪ, ಹಾರಗದ್ದೆ, ಹೆನ್ನಾಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಕೊಂಡು ಅವುಗಳನ್ನು ಸಂಗ್ರಹಿಸಿ ಎಲ್ಲ ತರಕಾರಿಗಳನ್ನು ಜೋಡಿಸಿ ಕುಟುಂಬಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ರೈತರ ಕುಟುಂಬ:‘ನಾನು ರೈತರ ಕುಟುಂಬಕ್ಕೆ ಸೇರಿದವನು. ಈ ಸಂಕಷ್ಟ ಕಾಲದಲ್ಲಿ ಅನ್ನದಾತರ ಕೈ ಹಿಡಿಯುವುದು ನನ್ನ ಕರ್ತವ್ಯ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್ ಮತ್ತು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಮಾಡುತ್ತಿದ್ದೇನೆ’ ಎನ್ನುತ್ತಾರೆ ರಮೇಶ್.

‘ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ರೈತರು ಸಂಕಷ್ಟದಲ್ಲಿದ್ದರು. ಲಾಭ ದೊರೆಯದಿದ್ದರೂ ಕನಿಷ್ಠ ವೆಚ್ಚವಾದರೂ ಬಂದರೆ ಸಾಕು ಎಂಬ ಮನೋಭಾವನೆ ಅವರದ್ದಾಯಿತು. ಅದರಂತೆ ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ತರಕಾರಿ ಬೆಳೆಗಳನ್ನು ಕೊಂಡು ಬಡವರಿಗೆ, ಕಾರ್ಮಿಕರಿಗೆ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಮನೆ–ಮನೆಗೆ ಕಿಟ್: ‘ಪ್ರತಿದಿನ ತರಕಾರಿಗಳನ್ನು ಕಿಟ್‌ಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ. ಸುಮಾರು 250-300 ಕಾರ್ಯಕರ್ತರು ತರಕಾರಿ ಕಿಟ್‌ ಸಿದ್ದಪಡಿಸುವಲ್ಲಿ ಭಾಗಿಗಳಾಗಿದ್ದಾರೆ. ತಾಜಾ ತರಕಾರಿಗಳನ್ನು ಕಿಟ್‌ಗಳಲ್ಲಿ ಜೋಡಿಸಿ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ಕಾರ್ಯಕರ್ತರು, ಮುಖಂಡರು ತೊಡಗಿಸಿಕೊಂಡಿದ್ದಾರೆ’ ಎಂದು ರಮೇಶ್ ಹೇಳಿದರು.

60 ಸಾವಿರ ದಿನಸಿ ಕಿಟ್‌:ಕ್ಷೇತ್ರದಲ್ಲಿ ವಿವಿಧ ಮುಖಂಡರ ಸಹಕಾರದೊಂದಿಗೆ 60 ಸಾವಿರ ದಿನಸಿ ಕಿಟ್‌ ವಿತರಿಸಲು ರಮೇಶ್‌ ಮುಂದಾಗಿದ್ದಾರೆ. ಈಗಾಗಲೇ, 15 ಸಾವಿರ ದಿನಸಿ ಕಿಟ್‌ಗಳನ್ನು ಸಿದ್ಧಪಡಿಸಿ, ಕ್ಷೇತ್ರದ ವಿವಿಧ ಭಾಗಗಳಿಗೆ ಕಳುಹಿಸಿಕೊಡಲಾಗಿದೆ.

ಊಟದ ಕೇಂದ್ರಗಳು:ಕ್ಷೇತ್ರದಲ್ಲಿ ಕಾರ್ಮಿಕರು, ಬಡವರು ಆಹಾರವಿಲ್ಲದೆ ಪರಿತಪಿಸುತ್ತಿರುವುದನ್ನು ಕಂಡು ಮನನೊಂದ ರಮೇಶ್,ಬಂಡೆನಲ್ಲಸಂದ್ರ, ವಾಬಸಂದ್ರ, ಜಿಗಣಿ, ಹೆನ್ನಾಗರ, ಕಾಚನಾಯಕನಹಳ್ಳಿ ಸೇರಿದಂತೆ ಸುಮಾರು 20 ಸ್ಥಳಗಳಲ್ಲಿ ಊಟದ ಕೇಂದ್ರಗಳನ್ನು ತೆರೆಯುವ ಮೂಲಕ ದಾಸೋಹ ಕಾರ್ಯ ಕೈಗೊಂಡಿದ್ದಾರೆ.

600 ಟನ್‌ ತರಕಾರಿ ಖರೀದಿ
ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ತರಕಾರಿಯನ್ನು ರಮೇಶ್‌ ಅವರ ತಂಡ ನೀಡುತ್ತಿದೆ. ಇದಕ್ಕಾಗಿ, ವಿವಿಧ ಗ್ರಾಮಗಳ ರೈತರಿಂದ 600 ಟನ್‌ ತರಕಾರಿಯನ್ನು ಖರೀದಿಸಿದ್ದಾರೆ. ಸುಮಾರು 60 ಸಾವಿರ ಕುಟುಂಬಗಳಿಗೆ ತರಕಾರಿಗಳನ್ನು ವಿತರಿಸಲು ಅವರು ಮುಂದಾಗಿದ್ದಾರೆ.

100 ಟನ್‌ ಟೊಮೆಟೊ, 100 ಟನ್‌ ಕ್ಯಾರೆಟ್‌, 50 ಟನ್‌ ಆಲೂಗಡ್ಡೆ, 50 ಟನ್‌ ದೊಡ್ಡಮೆಣಸಿನಕಾಯಿ‌, 100 ಟನ್‌ ಕೋಸು, 50 ಟನ್‌ ಬೀಟ್‌ರೂಟ್‌, 100 ಟನ್‌ ಈರುಳ್ಳಿಯನ್ನು ರಮೇಶ್‌ ಖರೀದಿಸಿದ್ದಾರೆ.

‘ಅನ್ನದಾತನಿಗೆ ಕಿರುಸಹಾಯ’
‘ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯ ನಡುವೆಯೂ ರೈತರು ಉತ್ತಮ ಬೆಳೆ ಬೆಳೆದಿದ್ದರು. ಆದರೆ ಮಾರುಕಟ್ಟೆಯಿಲ್ಲದೇ ಬೆಳೆಗಳನ್ನು ತೋಟದಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ಅಳಲು ತೋಡಿಕೊಂಡರು. ಆ ತರಕಾರಿಗಳನ್ನು ಕೊಳ್ಳುವ ಮೂಲಕ ರೈತರಿಗೆ ಕಿರುಸಹಾಯ ಮಾಡಿದ್ದೇನೆ’ ಎಂದು ಸರಳತೆ ಮೆರೆಯುತ್ತಾರೆ ರಮೇಶ್.

‘ಅಂದಾಜು ₹70 ಲಕ್ಷ ಖರ್ಚು ಮಾಡಿ 600 ಟನ್‌ ತರಕಾರಿ ಖರೀದಿಸಿದ್ದೇನೆ. ಅದನ್ನು ಉಚಿತವಾಗಿ ಹಂಚುವ ಮೂಲಕ ನನ್ನ ಕೈಯಲ್ಲಾದ ಸಹಾಯವನ್ನು ರೈತರಿಗೆ ಮತ್ತು ಜನರಿಗೆ ಮಾಡುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ತರಕಾರಿ ಉತ್ಪಾದನೆಯಲ್ಲಿ ಅಧಿಪತ್ಯ
ರಾಗಿ ಕಣಜವೆಂದೇ ಹೆಸರಾಗಿದ್ದ ಆನೇಕಲ್‌ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ಪುಷ್ಪೋದ್ಯಮ ಮತ್ತು ತರಕಾರಿ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಬೆಳೆ ಬೆಳೆಯುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ, ಲಾಕ್‌ಡೌನ್‌ನಿಂದ ಸೂಕ್ತ ಮಾರುಕಟ್ಟೆ ದೊರೆಯದೇ ಪರದಾಡುವಂತಾಗಿತ್ತು. ರಮೇಶ್‌ ಅವರ ಸಹಾಯ ಈಗ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮುಖಗವಸು, ಸ್ಯಾನಿಟೈಸರ್‌ ವಿತರಣೆ
ತರಕಾರಿ, ಆಹಾರ ಮಾತ್ರವಲ್ಲದೆ, ಈ ಸಂದರ್ಭದಲ್ಲಿ ತೀರಾ ಅಗತ್ಯವಾಗಿ ಬೇಕಿರುವ ಮುಖಗವಸು ಹಾಗೂ ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನೂ ರಮೇಶ್‌ ಕೈಗೊಂಡಿದ್ದಾರೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30 ಸಾವಿರ ಮುಖಗವಸು, 30 ಸಾವಿರ ಸ್ಯಾನಿಟೈಸರ್‌ಗಳನ್ನು ವಿತರಿಸುವ ಮೂಲಕ ಜನರಿಗೆ ನೆರವಾಗಿದ್ದಾರೆ.

ಪ್ರಸ್ತುತಿ: ಪಿ.ವಿ. ಬ್ರ್ಯಾಂಡ್ ಸ್ಪಾಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT