ಇಲಿ ಕಾಟ: ನೌಕರರ ಹೆಣಗಾಟ!

7
ಶೋಚನೀಯ ಸ್ಥಿತಿಯಲ್ಲಿ ನಗರದ ಅಂಗನವಾಡಿಗಳು

ಇಲಿ ಕಾಟ: ನೌಕರರ ಹೆಣಗಾಟ!

Published:
Updated:
Deccan Herald

ಬೆಂಗಳೂರು: ಶೌಚಾಲಯ ಇಲ್ಲದಿರುವ ಕಾರಣ ಬಯಲಿಗೆ ಹೋಗಬೇಕು, ಇಲಿ–ಹೆಗ್ಗಣಗಳ ಕಾಟ, ದೂರದಿಂದ ನೀರು ಹೊತ್ತು ತರಬೇಕು, ಮಳೆ ಬಂದರೆ ನುಗ್ಗುವ ನೀರಿನಲ್ಲಿ ನೆನೆಯಬೇಕು... ಹೀಗೆ ಹತ್ತು ಹಲವು ಸಮಸ್ಯೆಗಳ ವರ್ತುಲದೊಳಗೆ ಸಿಕ್ಕಿಕೊಂಡ ನಗರದ ಅಂಗನವಾಡಿ ನೌಕರರು ಹೈರಾಣ!

ಹೌದು, ಒಂದೊಂದು ಪ್ರದೇಶದಲ್ಲಿರುವ ಕೇಂದ್ರಗಳ ಹೊಣೆ ಹೊತ್ತಿರುವ ನೌಕರರು ಒಂದೊಂದು ವಿಧದ ಸಮಸ್ಯೆ ಎದುರಿಸುತ್ತಿದ್ದಾರೆ.

‘ಇಲ್ಲಿಯ ಅಂಗನವಾಡಿಯಲ್ಲಿ ಶೌಚಾಲಯ ಇಲ್ಲ. ಮಕ್ಕಳು ಎದುರಿಗಿರುವ ಮೈದಾನದಲ್ಲಿ ಶೌಚಕ್ಕೆ ಹೋಗುತ್ತಾರೆ. ನೌಕರರು ಹಾಗೂ ಅವರ ಸಹಾಯಕಿಯರು ಅಕ್ಕಪಕ್ಕದ ಮನೆಯವರನ್ನು ಬೇಡಿಕೊಂಡು ಹೋಗಬೇಕು. ಮಳೆ ಬಂದರೆ ನೀರು ನುಗ್ಗುತ್ತದೆ. ಅಷ್ಟೇ ಅಲ್ಲ ಹೆಗ್ಗಣಗಳ ಕಾಟ ಮಿತಿಮೀರಿದೆ. ಒಂದು ನಿಮಿಷ ಮೈಮರೆತರೂ ಊಟವನ್ನೇ ತಿಂದು ಹಾಕುತ್ತವೆ’ ಎಂದು ದಾಸರಹಳ್ಳಿ ಕೆರೆ ಪಕ್ಕದ ಕೊಳೆಗೇರಿಯಲ್ಲಿರುವ ಅಂಗನವಾಡಿ ಸ್ಥಿತಿಯನ್ನು ಸ್ಥಳೀಯರು ಬಿಚ್ಚಿಟ್ಟರು.

‘ಮೂರು ದಿನಕ್ಕೊಮ್ಮೆ ಕಾವೇರಿ ನೀರು ಬಂದಾಗ ಸರತಿ ನಿಂತು, ಕಾದು ಹೊತ್ತುಕೊಂಡು ಬರಬೇಕು. ತುಂಬಾ ಸಮಸ್ಯೆಗಳಿದ್ದರೂ ಮೌನವಾಗಿ ಎದುರಿಸುತ್ತಿದ್ದಾರೆ. ಅವರು ಗಟ್ಟಿಗಿತ್ತಿಯರೇ ಬಿಡಿ’ ಎಂದು ಬೆನ್ನುತಟ್ಟಿದರು.

‘ಇಂತಹ ಗಲೀಜು ಪ್ರದೇಶದಲ್ಲಿಯೂ ಅವರು ಸಾಧ್ಯವಾದಷ್ಟು ಸ್ವಚ್ಛವಾಗಿಯೇ ಅಂಗನವಾಡಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಚಿಕ್ಕ ಚಿಕ್ಕ ಮಕ್ಕಳು ಪಾಠ ಕಲಿಯುವ ಸ್ಥಳದ ಎದುರಿಗೆ ಲಾರಿ, ವಾಹನಗಳನ್ನು ನಿಲ್ಲಿಸುತ್ತಾರೆ. ಶಬ್ದ ಮಾಲಿನ್ಯ ಕೂಡ ಮಿತಿ ಮೀರಿದೆ’ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿದರು.

‘ನಗರದಲ್ಲಿ ಅಂಗನವಾಡಿ ಕಟ್ಟಡಕ್ಕಾಗಿ ಮುಂಗಡ ಹಣವನ್ನು (ಅಡ್ವಾನ್ಸ್‌) ನಾವೇ ಕೊಡಬೇಕು. ₹50 ಸಾವಿರದಿಂದ ₹60 ಸಾವಿರ ನಮ್ಮ ಕೈಯಿಂದಲೇ ಕಟ್ಟಬೇಕು. ಅದನ್ನು ಸರ್ಕಾರ ನಮಗೆ ಕೊಡುತ್ತಿಲ್ಲ. ನಗರದಲ್ಲಿ 500ಕ್ಕೂ ಹೆಚ್ಚು ಬಾಡಿಗೆ ಕಟ್ಟಡಗಳಿವೆ. ಇಲ್ಲಿ ವಿದ್ಯುತ್‌ ಬಿಲ್‌ ಕೂಡ ಹೆಚ್ಚು. ತಿಂಗಳಿಗೆ ₹300ರವರೆಗೆ ಬರುತ್ತದೆ. ಅದನ್ನು ಬೇರೆಯವರ ಕೈ ಕಾಲು ಹಿಡಿದು ಹೊಂದಿಸಬೇಕು’ ಎಂದರು ಚೊಕ್ಕಸಂದ್ರ ಅಂಗನವಾಡಿ ಕೇಂದ್ರದ ಎಂ.ಜಯಮ್ಮ.

**

ನಗರದಲ್ಲಿ ಸ್ಥಿತಿ ಶೋಚನೀಯ: ವರಲಕ್ಷ್ಮಿ

‘ನಗರದ ಜನರಿಗೆ ಅಂಗನವಾಡಿ ವ್ಯವಸ್ಥೆಯನ್ನು ಅರ್ಥಮಾಡಿಸುವುದೇ ಕಷ್ಟ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ಅಪೌಷ್ಟಿಕತೆ ಪ್ರಮಾಣ ಇಲ್ಲಿಯೇ ಹೆಚ್ಚು. ಆದರೂ ಇಲ್ಲಿನ ಜನರು ಮಾನವೀಯ ನೆಲೆಗಳನ್ನು ಮರೆತಿದ್ದಾರೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಮೊದಲು ಅಂಗನವಾಡಿಗೆ ಆದ್ಯತೆ ನೀಡಬೇಕು ಎಂದು ಈಗಾಗಲೇ ನಾವು ಆಗ್ರಹಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಹೇಳಿದರು.

‘ಕೂಲಿಕಾರರು ಹಾಗೂ ಕೊಳೆಗೇರಿಗಳಲ್ಲಿರುವ ಮಕ್ಕಳು ಹೆಚ್ಚಾಗಿ ಅಂಗನವಾಡಿಗಳಿಗೆ ಬರುತ್ತಾರೆ. ಪ್ರತೀ ವಾರ್ಡ್‌ಗಳಲ್ಲಿರುವ ಪಾಲಿಕೆ ಕಚೇರಿಯಲ್ಲಿ ಅಂಗನವಾಡಿ ನಡೆಸಲು ಸ್ವಲ್ಪ ಜಾಗ ಕೊಡಬಹುದು. ಆದರೆ ಅವರು ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಕೊಡುತ್ತಾರೆ’ ಎಂದು ದೂರಿದರು.

**

ತಿಂಗಳ ನಿರ್ವಹಣೆಗೆ ₹84

ನಗರದ ಪ್ರತಿ ಅಂಗನವಾಡಿಯ ನಿರ್ವಹಣೆಗೆ ಸರ್ಕಾರ ಕೊಡುತ್ತಿರುವುದು ತಿಂಗಳಿಗೆ ₹84 ಮಾತ್ರ. ಇದರಲ್ಲೇ ಅವರು ಪೊರಕೆ, ಶೌಚಾಲಯಕ್ಕೆ ಬೇಕಾಗುವ ಸಾಮಗ್ರಿಗಳು, ಬಟ್ಟೆ ಹಾಗೂ ಪಾತ್ರೆ ತೊಳೆಯುವ ಸಾಬೂನು, ಸೀಮೆಸುಣ್ಣ ಸೇರಿ ಇನ್ನೂ ಕೆಲವು ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಬೇಕು.

**

2,137: ನಗರದಲ್ಲಿರುವ ಅಂಗನವಾಡಿ ಕೇಂದ್ರಗಳು

2,046: ಪೂರ್ಣಪ್ರಮಾಣದ ಅಂಗನವಾಡಿ ಕೇಂದ್ರಗಳು

91: ಮಿನಿ ಅಂಗನವಾಡಿ ಕೇಂದ್ರಗಳು

542: ಬಾಡಿಗೆ ಕಟ್ಟಡಗಳು ಇವೆ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !