ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ: ಬಳಲಿದ ಅಂಗನವಾಡಿಗಳು!

ನಗರದಲ್ಲಿ 516 ಕಾರ್ಯಕರ್ತೆಯರು ಹಾಗೂ 833 ಸಹಾಯಕಿಯರ ಹುದ್ದೆಗಳು ಖಾಲಿ
Published 24 ಮೇ 2024, 0:47 IST
Last Updated 24 ಮೇ 2024, 0:47 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಲೇ ಇವೆ. ತೀರಾ ಅಗತ್ಯವಾಗಿರುವ ಸಿಬ್ಬಂದಿಯನ್ನೂ ಕೊಟ್ಟಿಲ್ಲ. ಇದರಿಂದ, ನಗರದಲ್ಲಿರುವ ಹಲವು ಕೇಂದ್ರಗಳು ಪ್ರಭಾರಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಅವಲಂಬಿತವಾಗಿವೆ.

‘ಬೆಂಗಳೂರು ನಗರದಲ್ಲಿ 516 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 833 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಅಕ್ಕಪಕ್ಕದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರೇ ಪ್ರಭಾರ ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸರ್ಕಾರ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಇದ್ದು ₹6,500 ವೇತನ ನಿಗದಿಗೊಳಿಸಿದೆ. ಬೆಂಗಳೂರು ನಗರದಲ್ಲಿ ಈ ವೇತನ ಪಡೆದು ಕಾರ್ಯನಿರ್ವಹಿಸಲು ಯಾರೂ ಬರುತ್ತಿಲ್ಲ. ಆದ್ದರಿಂದ, ಸಹಾಯಕಿಯರ ಹುದ್ದೆಗೆ ಯಾರು ಅರ್ಜಿ ಸಲ್ಲಿಸುವುದಿಲ್ಲ. ಕಳೆದ ಐದಾರು ವರ್ಷಗಳಿಂದ ಸಹಾಯಕಿಯರಿಲ್ಲದೇ ಕಾರ್ಯಕರ್ತೆಯರೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ರಾಜ್ಯ ಕಾರ್ಯದರ್ಶಿ ಜಯಮ್ಮ ತಿಳಿಸಿದರು.

ನಗರದಲ್ಲಿ ಒಟ್ಟು 2,877 ಅಂಗನವಾಡಿಗಳು ಕೇಂದ್ರಗಳಿದ್ದು, ಅದರಲ್ಲಿ 840 ಕೇಂದ್ರಗಳು ಬಾಡಿಗೆ ಕಟ್ಟಡಗಳನ್ನು ಅವಲಂಬಿಸಿವೆ. ಕೆಲವು ಅಂಗನವಾಡಿಗಳಿಗೆ  ಸ್ವಂತ ಕಟ್ಟಡವಿದ್ದರೂ ಬಹಳಷ್ಟು ಶಿಥಿಲಾವಸ್ಥೆಯಲ್ಲೇ ಇವೆ. ಈಗ ಮಳೆಗಾಲ ಪ್ರಾರಂಭವಾಗಿದ್ದು, ಕಟ್ಟಡಗಳನ್ನು ದುರಸ್ತಿಗೊಳಿಸಬೇಕೆಂಬುದು ಪಾಲಕರು ಒತ್ತಾಯಿಸುತ್ತಿದ್ದಾರೆ.

‘ಸ್ವಂತ ಕಟ್ಟಡ ಹೊಂದಿರದ ಅಂಗನವಾಡಿಗಳಿಗೆ ಬಾಡಿಗೆ ಹಣ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಕಟ್ಟಡ ಬಾಡಿಗೆ ಬಿಡುಗಡೆಯಾಗಿಲ್ಲ. ಕಟ್ಟಡಗಳ ಮಾಲೀಕರು ಬಾಡಿಗೆಗಾಗಿ ಕಾಯುತ್ತಿದ್ದಾರೆ. ಕಾರ್ಯಕರ್ತೆಯರು ಕಚೇರಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ. ಕಾರ್ಯಕರ್ತೆಯರು, ಸಹಾಯಕಿಯರ ಸ್ಥಿತಿಯಂತೂ ಶೋಚನೀಯವಾಗಿದೆ’ ಎಂದು ಜಯಮ್ಮ ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳಿಗೆ ₹8 ಸಾವಿರ ಬಾಡಿಗೆ ನೀಡುತ್ತೇವೆಂದು ಇಲಾಖೆ ಹೇಳುತ್ತಿದೆ. ಆದರೆ, ಆ ಮನೆಗೆ ಮುಂಗಡವಾಗಿ ₹60 ಸಾವಿರದಿಂದ ₹80 ಸಾವಿರ ಹಣ ಕಾರ್ಯಕರ್ತೆಯರು ಎಲ್ಲಿಂದ ನೀಡಬೇಕು’ ಎಂದು ಪ್ರಶ್ನಿಸಿದರು. 

‘ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತೃಪೂರ್ಣ ಯೋಜನೆ ಸೇರಿದಂತೆ ಸರ್ಕಾರ ನಡೆಸುವ ಸಮೀಕ್ಷೆಗಳಿಗೂ ಕಾರ್ಯಕರ್ತೆಯರನ್ನು ಬಳಿಸಿಕೊಳ್ಳುತ್ತಿದ್ದಾರೆ. ಆದರೆ, ವೇತನ ಮಾತ್ರ ಹೆಚ್ಚಿಸಿಲ್ಲ. ಹೀಗೆ, ಹೇಳುತ್ತಾ ಹೋದರೆ ಸಾಲು ಸಾಲು ಕೊರತೆಗಳು ಇದ್ದರೂ ಸಹ ಸರ್ಕಾರ ಇದರತ್ತ ಗಮನಹರಿಸುತ್ತಿಲ್ಲ’ ಎಂದು ದೂರಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪ್ರಭಾರ ಹೊಣೆ ಹೊತ್ತು ಕಾರ್ಯನಿರ್ವಹಿಸುವ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಕೇವಲ ₹50 ಹೆಚ್ಚುವರಿ ವೇತನ ನೀಡಲಾಗುತ್ತದೆ.
ಜಯಮ್ಮ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT