ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ನಲ್ಲಿ ಪರಿಚಯ: ವಿಡಿಯೊ ಚಿತ್ರೀಕರಿಸಿ ಸುಲಿಗೆ- ಮಹಿಳೆ ಸೇರಿ ಇಬ್ಬರ ಬಂಧನ

ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ
Last Updated 7 ಜನವರಿ 2023, 20:01 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಆ್ಯಪ್‌ ಮೂಲಕ ಯುವಕರೊಬ್ಬರನ್ನು ಪರಿಚಯ ಮಾಡಿಕೊಂಡು ವಿಡಿಯೊ ಚಿತ್ರೀಕರಿಸಿ ಸುಲಿಗೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಲಕ್ಷ್ಮಿಪ್ರಿಯ (31) ಹಾಗೂ ಸುನೀಲ್‌ಕುಮಾರ್ (22) ಬಂಧಿತರು. ಇವರಿಬ್ಬರಿಂದ ₹ 2.20 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೆಸರಘಟ್ಟದ ನಿವಾಸಿಯಾದ ದೂರುದಾರ ಯುವಕ, ಡೇಟಿಂಗ್ ಆ್ಯಪ್‌ವೊಂದರಲ್ಲಿ ಖಾತೆ ತೆರೆದಿದ್ದರು. ಆರೋಪಿ ಸುನೀಲ್‌ಕುಮಾರ್ ಸಹ ಅದೇ ಆ್ಯಪ್‌ನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ. ಯುವತಿ ಇರಬಹುದೆಂದು ತಿಳಿದಿದ್ದ ದೂರುದಾರ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಸ್ವೀಕರಿಸಿದ್ದ ಸುನೀಲ್‌ಕುಮಾರ್, ಯುವತಿ ಹೆಸರಿನಲ್ಲಿ ಚಾಟಿಂಗ್ ಮಾಡಲಾರಂಭಿಸಿದ್ದ’ ಎಂದು ತಿಳಿಸಿದರು.

ತಂಗಿ ಹೆಸರಿನಲ್ಲಿ ಭೇಟಿ: ‘ಇತ್ತೀಚೆಗೆ ಖಾತೆಗೆ ಸಂದೇಶ ಕಳುಹಿಸಿದ್ದ ದೂರುದಾರ, ಭೇಟಿಯಾಗೋಣವೆಂದು ಹೇಳಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ, ‘ನನಗೆ ಬರಲು ಆಗುವುದಿಲ್ಲ. ಬೇಕಾದರೆ, ನನ್ನ ತಂಗಿಯನ್ನು ನಿನ್ನ ಮನೆಗೆ ಕಳುಹಿಸುತ್ತೇನೆ’ ಎಂದಿದ್ದ. ಅದಕ್ಕೆ ದೂರುದಾರ ಸಹ ಒಪ್ಪಿದ್ದ’ ಎಂದು ಪೊಲೀಸರು ಹೇಳಿದರು.

‘ಡಿ. 4ರಂದು ಮಧ್ಯಾಹ್ನ ಆರೋಪಿ ಲಕ್ಷ್ಮಿಪ್ರಿಯ ದೂರುದಾರರ ಮನೆಗೆ ಹೋಗಿ, ಕೆಲ ಹೊತ್ತು ಮಾತನಾಡಿ ಮನೆಯಿಂದ ಹೊರಗೆ ಬಂದಿದ್ದರು. ಅದೇ ಸಂದರ್ಭದಲ್ಲೇ ಸುನೀಲ್‌ಕುಮಾರ್ ಸ್ಥಳಕ್ಕೆ ಬಂದಿದ್ದ. ಇಬ್ಬರೂ ಪುನಃ ಮನೆಯೊಳಗೆ ಹೋಗಿದ್ದರು.’

‘ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೊವನ್ನು ಚಿತ್ರೀಕರಣ ಮಾಡಿದ್ದೇವೆ. ಇದೇ ವಿಡಿಯೊವನ್ನು ಪೊಲೀಸರಿಗೆ ಕೊಟ್ಟು ಜೈಲಿಗೆ ಕಳುಹಿಸುತ್ತೇವೆ’ ಎಂದು ಆರೋಪಿಗಳು ಬೆದರಿಸಿದ್ದರು. ನಂತರ, ದೂರುದಾರರ ಮೇಲೆ ಹಲ್ಲೆ ಮಾಡಿದ್ದರು. 45 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು. ಕೃತ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಬಂಧಿತ ಆರೋಪಿಗಳು, ಆ್ಯಪ್‌ ಮೂಲಕ ಹಲವು ಯುವಕರನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡಿರುವ ಮಾಹಿತಿ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT