ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ಅಗತ್ಯ: ಪೋಷಕ ಕಲಾವಿದರ ಅಭಿಮತ

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪೋಷಕ ಕಲಾವಿದರು ಅಭಿಮತ
Published 27 ಮಾರ್ಚ್ 2024, 21:52 IST
Last Updated 27 ಮಾರ್ಚ್ 2024, 21:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಲಾವಿದರಲ್ಲಿ ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕಲಾವಿದರಿಗೆ ಸರ್ಕಾರಿ ಸೌಲಭ್ಯಗಳು ಹಾಗೂ ಆರ್ಥಿಕ ನೆರವು ಸಿಗುವಂತಾಗಬೇಕು’ ಎಂದು ಚಲನಚಿತ್ರ ಪೋಷಕ ಕಲಾವಿದರು ಅಭಿಮತ ವ್ಯಕ್ತಪಡಿಸಿದರು. 

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘ ನಗರದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪೋಷಕ ಕಲಾವಿದರು ರಂಗ ನೆನಪುಗಳನ್ನು ಮೆಲುಕು ಹಾಕಿದರು. ಸಂಘದ ಅಧ್ಯಕ್ಷೆ ಪದ್ಮಿನಿ ನಂದ, ‘ಕೆಲ ಕಲಾವಿದರು ಕಷ್ಟದಲ್ಲಿ ಇದ್ದಾರೆ. ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಚಿಕಿತ್ಸೆಗೆ ಅಗತ್ಯ ನೆರವು ಒದಗಿಸಬೇಕಿದೆ’ ಎಂದರು. 

ಸಂಗೀತ ನಿರ್ದೇಶಕ ಹಂಸಲೇಖ, ‘ಪೋಷಕ ಕಲಾವಿದರು ಸಂಘಟಿತರಾಗಬೇಕು. ಕಲಾವಿದರಿಗೆ ಸದಾ ಬೆಂಬಲ ಇರುತ್ತದೆ’ ಎಂದು ತಿಳಿಸಿ, ಸಂಘಕ್ಕೆ ₹ 50 ಸಾವಿರ ದೇಣಿಗೆ ನೀಡಿದರು. 

ನಟ ಸುಂದರ್‌ರಾಜ್, ‘ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕಲಾವಿದರು ಅನಾಥರಲ್ಲ ಎಂಬ ಭರವಸೆ ಮೂಡಿಸಬೇಕು. ಕಲಾವಿದರು ತಮ್ಮ ಮೂಲವನ್ನು ಮರೆಯಬಾರದು. ರಂಗಭೂಮಿಯು ಶುದ್ಧ ಮತ್ತು ಶಕ್ತಿಶಾಲಿ ವೇದಿಕೆಯಾಗಿದೆ. ನಮ್ಮ ಇಡೀ ದೇಹದ ಅಭಿನಯವನ್ನು ರಂಗಭೂಮಿಯಲ್ಲಿ ಮಾತ್ರ ಕಾಣಬಹುದು’ ಎಂದು ಹೇಳಿದರು. 

ನಟ ರಮೇಶ್ ಭಟ್, ‘ರಂಗಭೂಮಿ ಒಡನಾಟದಿಂದ ನನ್ನ ಬದುಕು ಸಾರ್ಥಕವಾಗಿದೆ. ರಂಗಭೂಮಿಯು ಬದುಕನ್ನು ಕಟ್ಟಿಕೊಡುವ ಜತೆಗೆ ಬದುಕು ಏನು ಅನ್ನುವುದನ್ನು ತಿಳಿಸಿತು’ ಎಂದರು. 

ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘ರಂಗಭೂಮಿಯಿಂದ ಸಿನಿಮಾಕ್ಕೆ ಹೋದವರು ರಂಗಭೂಮಿಯ ಒಡನಾಟವನ್ನು ಬಿಡಬಾರದು. ರಾಜ್‌ಕುಮಾರ್, ಲೋಕೇಶ್, ಶಂಕರ್‌ನಾಗ್ ಮೊದಲಾದವರು ಚಲನಚಿತ್ರದಲ್ಲಿ ದೊಡ್ಡ ಹೆಸರು ಮಾಡಿದರೂ ಮತ್ತೆ ರಂಗಭೂಮಿಗೆ ಬಂದಿದ್ದರು’ ಎಂದು ಸ್ಮರಿಸಿಕೊಂಡರು.

ಕರ್ನಾಟಕ ನಾಟಕ ಅಕಾಡೆಮಿ ನಿಯೋಜಿತ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ಕಲಾವಿದರು ಸಂವೇದನಾಶೀಲರು. ನಟನೆ ಮನೋರಂಜನೆ ಮಾತ್ರವಾಗದೆ, ಜನರ ಬದುಕನ್ನು ಹಸನಗೊಳಿಸಲಿದೆ. ರಾಜ್‌ಕುಮಾರ್ ಮೊದಲಾದ ಕಲಾವಿದರು ಇದನ್ನೇ ಮಾಡಿ, ರಂಗಭೂಮಿಯನ್ನು ಪ್ರೀತಿಯಿಂದ ಬೆಳೆಸಿದ್ದಾರೆ’ ಎಂದು ಹೇಳಿದರು.

ಕಾರ್ಯನಿರ್ವಹಿಸದ ಕನ್ನಡ ಭವನದ ಲಿಫ್ಟ್ 

ಕನ್ನಡ ಭವದಲ್ಲಿನ ಎರಡೂ ಲಿಫ್ಟ್‌ಗಳೂ ಕೆಟ್ಟು ಹೋಗಿದ್ದವು. ಕನ್ನಡ ಭವನದ ಎರಡನೇ ಮಹಡಿಯಲ್ಲಿರುವ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಪೋಷಕ ಕಲಾವಿದರು ಪ‍ರದಾಟ ನಡೆಸಿದರು. ಎಂ.ಎನ್. ಲಕ್ಷ್ಮೀದೇವಿ ಮೊದಲಾದವರು ಏದುಸಿರು ಬಿಡುತ್ತಾ ಎರಡು ಮಹಡಿಗಳನ್ನು ಹತ್ತಿದರು. ಕನ್ನಡ ಭವನದಲ್ಲಿನ ವ್ಯವಸ್ಥೆಯ ಬಗ್ಗೆಯೂ ಪೋಷಕ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT