ಮಂಗಳವಾರ, ಮೇ 24, 2022
27 °C
ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಪ್ರತಿಭಟನೆ

ಗೌರವಧನ ಬಾಕಿ ಪಾವತಿಗೆ ಆಶಾ ಕಾರ್ಯಕರ್ತೆಯರ ಒತ್ತಾಯ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೌರವ ಧನವನ್ನು ಆಯಾ ತಿಂಗಳು ಪಾವತಿ ಮಾಡದೇ ಇರುವುದನ್ನು ಖಂಡಿಸಿ, ಗೌರವ ಧನ ಮತ್ತು ಹಾಗೂ ಪ್ರೋತ್ಸಾಹ ಧನಗಳ ಬಾಕಿ ಮೊತ್ತವನ್ನು ತಕ್ಷಣವೇ ಪಾವತಿಸಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಎಐಟಿಯುಸಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ರಮಾ. ಟಿ.ಸಿ, ‘ಒಂದೂವರೆ ವರ್ಷದಿಂದ ಕೊರೋನಾ ನಿಯಂತ್ರಣಕ್ಕಾಗಿ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್‍ ಲಸಿಕೆ ವಿತರಣೆ, ಆರೋಗ್ಯ ಸಮೀಕ್ಷೆಗಳ ಜೊತೆಗೆ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆ, ನೈರ್ಮಲ್ಯ ಜಾಗೃತಿಯ ಹೊಣೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಆದರೂ ಇವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಗೌರವಧನ ಪಾವತಿಗೆ ಮೂರು ನಾಲ್ಕು ತಿಂಗಳು ಕಾಯಿಸಲಾಗುತ್ತದೆ. ಪ್ರೋತ್ಸಾಹ ಧನವನ್ನೂ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ’ ಎಂದರು.

‘ಆಶಾ ಕಾರ್ಯಕರ್ತೆ ದಿನಕ್ಕೆ 2 ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿದ್ದ ಸರ್ಕಾರ ಈಗ ಅವರನ್ನು ದಿನವಿಡೀ ದುಡಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯು ಆಶಾ ಕಾರ್ಯಕರ್ತೆಯರಿಗೆ ಹೊಸ ಹೊಸ ಹೊಣೆಗಳನ್ನು ಹೇರುತ್ತಿದೆ. ಆದರೂ ಆಶಾ ಕಾರ್ಯಕರ್ತೆಯರು ಆ ಜವಾಬ್ದಾರಿಗಳನ್ನು ಸ್ಫೂರ್ತಿಯಿಂದ ನಿರ್ವಹಿಸುತ್ತಿದ್ದಾರೆ. ಇವರ ಶ್ರಮಕ್ಕೆ ನ್ಯಾಯ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

‘ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉಚಿತ ಬಸ್ ಪಾಸ್ ನೀಡಬೇಕು. ಗೌರವ ಧನವನ್ನು ತಿಂಗಳಿಗೆ ₹ 5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. 

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ ಅವರು ಪ್ರತಿಭಟನಾಕಾರಿಂದ ಮನವಿಪತ್ರ ಸ್ವೀಕರಿಸಿದರು. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರವೇ ಸಭೆಯನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.  

ಸಂಘಟನೆಯ ಪ್ರಮುಖರಾದ ಶೀಕಾಂತ್, ನಾಗಲಕ್ಷ್ಮಿ, ಫರ್ಹಾನಾ ಹಾಗೂ ದುರ್ಗೇಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು