ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸೋಲಿಗೆ ಕಾರಣವಾದವರ ವಿರುದ್ಧ ಕ್ರಮವಾಗದಿದ್ದರೆ ಸಿಡಿದೇಳುವೆ: ಸೋಮಣ್ಣ

Published 6 ಜನವರಿ 2024, 16:30 IST
Last Updated 6 ಜನವರಿ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಸೋಲಿಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸುವುದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕರ್ತವ್ಯ. ಆ ಕೆಲಸ ಮಾಡದಿದ್ದರೆ ಸಿಡಿದೇಳುವೆ’ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ವಿಜಯೇಂದ್ರ ಅವರು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿರುವ ಕುರಿತು ‘ಪ್ರಜಾವಾಣಿ’ಗೆ ಜತೆ ಮಾತನಾಡಿದ ಅವರು, ‘ಅಪ್ಪ (ಬಿ.ಎಸ್‌. ಯಡಿಯೂರಪ್ಪ), ಮಗನ (ವಿಜಯೇಂದ್ರ) ಹೆಸರು ಹೇಳಿಕೊಂಡು ಊರೆಲ್ಲ ತಿರುಗಿದ ಕೆಲವರು ನನ್ನ ಸೋಲಿಗೆ ಕಾರಣರಾದರು. ನನ್ನ ಸೋಲಿಗೆ ಕಾರಣವಾದವರು ಯಾರು ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿದೆ. ಅಂತಹವರನ್ನೇ ಜತೆಗಿಟ್ಟುಕೊಂಡು ತಿರುಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿಜಯೇಂದ್ರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ. ಆತ ಎಲ್ಲಿ ಬೇಕಾದರೂ ಹೋಗಲಿ. ಅದು ನನಗೆ ಸಂಬಂಧಿಸಿದ ವಿಷಯವಲ್ಲ. ಆತ ಇನ್ನೂ ಯುವಕನಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಂಡು ನಮ್ಮಂತಹವರ ವಿರುದ್ಧ ಗದಾಪ್ರಹಾರ ನಡೆಸಲು ಮುಂದಾಗಬಾರದು. ಮನೆಹಾಳರು, ಅಯೋಗ್ಯರನ್ನು ಜತೆಗಿಟ್ಟುಕೊಂಡು ತಿರುಗುವುದನ್ನು ಬಿಟ್ಟರೆ ಒಳ್ಳೆಯದಾಗುತ್ತದೆ’ ಎಂದು ಹೇಳಿದರು.

‘ಆಗಿರುವ ಸಮಸ್ಯೆಗಳನ್ನು ಸರಿಪಡಿಸುವುದು ಅಥವಾ ಹಾಗೆಯೇ ಬಿಡುವುದು ಅವರಿಗೇ ಬಿಟ್ಟದ್ದು. ಯಾರು ತಪ್ಪು ಮಾಡಿದ್ದಾರೋ ಅವರನ್ನೇ ಜತೆಗಿಟ್ಟುಕೊಂಡು ಹೋಗುತ್ತೇನೆ ಎಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಆಗ ನಾನು ಕೂಡ ಬೇರೆ ಮಾತನಾಡಬೇಕಾಗುತ್ತದೆ. ಅವರು ಹಟ ಹಿಡಿದರೆ ಸಿಡಿದೇಳುವುದು ನನಗೂ ಗೊತ್ತಿದೆ’ ಎಂದರು.

ತಮ್ಮ ಸೋಲಿಗೆ ಕಾರಣರಾದ ಕೆಲವರ ವಿರುದ್ಧವಷ್ಟೇ ಅಸಮಾಧಾನ ಇದೆ. ಬೇರೆ ಯಾರ ಬಗ್ಗೆಯೂ ಬೇಸರ, ಅಸಮಾಧಾನ ಇಲ್ಲ ಎಂದು ಹೇಳಿದರು.

‘ಗೌಡರು ಸಮಾಧಾನ ಹೇಳಿದ್ದಾರೆ’: ‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಜತೆ 28 ವರ್ಷ ಇದ್ದೆ. ಅವರಿಗೂ ನನಗೂ ಹಳೆಯ ನಂಟು. ಗೌರವದಿಂದ ಅವರನ್ನು ಭೇಟಿಮಾಡಿದ್ದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕಿರುವುದರಿಂದ ಬಿಜೆಪಿಯಲ್ಲಿಯೇ ಮುಂದುವರಿಯುವಂತೆ ಸಮಾಧಾನ ಹೇಳಿದ್ದಾರೆ. ನನಗೆ ಆಗಿರುವ ತೊಂದರೆ, ನೋವನ್ನು ಅವರಿಗೂ ವಿವರಿಸಿದ್ದೇನೆ’ ಎಂದು ಸೋಮಣ್ಣ ತಿಳಿಸಿದರು.

‘ಶುಕ್ರವಾರ ಅವರನ್ನು ಭೇಟಿಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದೇನೆ. ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ ಕೂಡ ಇದ್ದರು. ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಮುಂದುವರಿಯುವಂತೆ ಸಲಹೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT