ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರಜೆ ಅಪಹರಣ | ಆರು ಆರೋಪಿಗಳ ಬಂಧನ

Published 26 ಫೆಬ್ರುವರಿ 2024, 0:50 IST
Last Updated 26 ಫೆಬ್ರುವರಿ 2024, 0:50 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆಯೊಬ್ಬರನ್ನು ಅಪಹರಿಸಿ ₹1.50 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಆರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವ ನಗರದ ಮೋನಿಶ್ ಅಲಿಯಾಸ್ ಮನು (24), ಹೊಂಗಸಂದ್ರದ ಲೋಕೇಶ್ (24), ಬೊಮ್ಮನಹಳ್ಳಿಯ ಕಿಶೋರ್ ಶಿವ (19), ಎಂ.ಆದಿ (21), ಜಯನಗರದ ದಿಲೀಪ್ ಕುಮಾರ್ (26) ಹಾಗೂ ತಿಲಕನಗರದ ಸತೀಶ್ (25) ಬಂಧಿತರು.

‘ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಅವರನ್ನು ಫೆ. 5ರಂದು ಅಪಹರಿಸಿದ್ದ ಆರೋಪಿಗಳು, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು. ಕೃತ್ಯದ ಸಂಬಂಧ ಸಹೋದರ ಬೆಂಗಳೂರಿನ ಅಮಿತ್ ಅವರು ದೂರು ನೀಡಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಗಾಂಜಾ ಖರೀದಿಸುತ್ತಿದ್ದ ಸಂತ್ರಸ್ತ:

‘ಬೆಂಗಳೂರಿನ ಅಲೋಕ್‌ ರಾಣಾ, ಸುಮಾರು ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಗೆ ಹೋಗಿ ನೆಲೆಸಿದ್ದಾರೆ. ಅಲ್ಲಿಯ ಪೌರತ್ವವನ್ನೂ ಪಡೆದಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧಿತ ಆರೋಪಿ ಮೋನಿಶ್, ಕಾಲ್‌ ಸೆಂಟರ್ ಉದ್ಯೋಗಿ. ಈತ ಗಾಂಜಾ ಸಹ ಮಾರುತ್ತಿದ್ದ. ಬೆಂಗಳೂರಿಗೆ ಬಂದಾಗಲೆಲ್ಲ ಮೋನಿಶ್‌ನಿಂದ ಅಲೋಕ್ ರಾಣಾ ಗಾಂಜಾ ಖರೀದಿಸುತ್ತಿದ್ದರು. ಕೇಳಿದಷ್ಟು ಹಣವನ್ನೂ ನೀಡುತ್ತಿದ್ದರು. ಅಲೋಕ್ ಬಳಿ ಹೆಚ್ಚಿನ ಹಣ ಇರಬಹುದೆಂದು ತಿಳಿದು ಮೋನಿಶ್ ಹಾಗೂ ಇತರರು ಸುಲಿಗೆ ಮಾಡಲು ಸಂಚು ರೂಪಿಸಿದ್ದರು’ ಎಂದು ಹೇಳಿವೆ.

ಕಾರಿನ ಜಿಪಿಎಸ್ ಸುಳಿವು:

‘ಗಾಂಜಾ ನೀಡುವುದಾಗಿ ಅಲೋಕ್‌ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ಅವರದ್ದೇ ಕಾರಿನಲ್ಲಿ ಅಪಹರಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದರು. ಹಣ ನೀಡುವಂತೆ ಪೀಡಿಸಿ ಹಲ್ಲೆ ಮಾಡಿದ್ದರು. ₹ 1.50 ಲಕ್ಷ ಸುಲಿಗೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಹೋದರ ಮನೆಗೆ ಬಾರದಿದ್ದರಿಂದ ಅನುಮಾನಗೊಂಡಿದ್ದ ದೂರುದಾರ ಅಮಿತ್, ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ಹೋಗಿದ್ದರು. ಅವರನ್ನು ನೋಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಸಹೋದರನಿಗೆ ಚಿಕಿತ್ಸೆ ಕೊಡಿಸಿದ ನಂತರವೇ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

ಗಾಂಜಾ ಪೆಡ್ಲರ್ ಬಂಧನ:

‘ಆರೋಪಿ ಮೋನಿಶ್ ನೀಡಿದ್ದ ಮಾಹಿತಿ ಆಧರಿಸಿ ಡ್ರಗ್ಸ್ ಪೆಡ್ಲರ್ ಸತ್ಯನಾರಾಯಣ ಮೆಹತೊನನ್ನು (25) ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿಹಾರದ ಸತ್ಯನಾರಾಯಣನಿಂದ 410 ಗ್ರಾಂ ಗಾಂಜಾ, ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಈತ, ಗಾಂಜಾ ಮಾರುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಈತನ ಬಳಿಯೇ ಮೋನಿಶ್‌ ಗಾಂಜಾ ಖರೀದಿಸಿ ಗ್ರಾಹಕರಿಗೆ ಮಾರುತ್ತಿದ್ದ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT