ಗುರುವಾರ , ಮೇ 13, 2021
18 °C
* ನಾಲ್ವರು ಆರೋಪಿಗಳ ಬಂಧನ * 150 ಕ್ಯಾಮೆರಾ ಪರಿಶೀಲನೆ

ಆಟೊ ಅಡ್ಡಗಟ್ಟಿ ₹ 16.60 ಲಕ್ಷ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತಿನಗರ ಠಾಣೆ ವ್ಯಾಪ್ತಿಯಲ್ಲಿ ಆಟೊ ಅಡ್ಡಗಟ್ಟಿ ₹ 16.60 ಲಕ್ಷ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ಡಿ.ಜೆ.ಹಳ್ಳಿಯ ಅಪ್ಸರ್ ಪಾಷಾ (34), ಶಿವಾಜಿನಗರದ ಸೈಯದ್ ತೌಸಿಫ್ (32), ಮೊಹಮ್ಮದ್ ಅಲಿ (30) ಹಾಗೂ ಕೆ.ಜಿ.ಹಳ್ಳಿಯ ಮೊಹಮ್ಮದ್ ಅಜರುಲ್ಲಾ (30) ಬಂಧಿತರು. ಅವರಿಂದ ₹ 4 ಲಕ್ಷ ನಗದು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಮುನೀರ್, ಟ್ಯಾನರಿ ರಸ್ತೆ ಹಾಗೂ ಡಿ.ಜೆ. ಹಳ್ಳಿ ಬಳಿಯ ಬೀಫ್ ಮಾರಾಟ ಮಳಿಗೆಗಳಿಂದ ₹ 16.60 ಲಕ್ಷ ಸಂಗ್ರಹಿಸಿದ್ದರು. ಅದೇ ಹಣವನ್ನು ತಮ್ಮ ಬಳಿ ಇಟ್ಟುಕೊಂಡು ಸಹೋದರ ಲತೀಫ್ ಆಟೊದಲ್ಲಿ ರಾತ್ರಿ ಮೆಜೆಸ್ಟಿಕ್‌ಗೆ ಹೊರಟಿದ್ದರು. ಬೈಕ್‌ನಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಕಾಕ್‌ಬರ್ನ್‌ ರಸ್ತೆಯಲ್ಲಿ ಆಟೊವನ್ನು ಅಡ್ಡಗಟ್ಟಿದ್ದರು.’

‘ಆಟೊ ಚಾಲಕ ಲತೀಫ್‌ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದರು. ಲಾಂಗ್ ತೋರಿಸಿ ಮುನೀರ್‌ ಅವರನ್ನು ಹೆದರಿಸಿದ್ದರು. ಅವರ ಬಳಿಯ ಹಣ ಸುಲಿಗೆ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮುನೀರ್ ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸರು ತಿಳಿಸಿದರು.

ಮಳಿಗೆ ಕೆಲಸಗಾರನ ಸಂಚು: ‘ಆರೋಪಿ ಅಪ್ಸರ್ ಖಾನ್, ಡಿ.ಜೆ.ಹಳ್ಳಿಯ ಮಾಂಸ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೀಫ್‌ ಮಾರಾಟ ಮಳಿಗೆಗಳಿಂದ ಮುನೀರ್ ಹಣ ಸಂಗ್ರಹಿಸಿಕೊಂಡು ಹೋಗುವ ಸಂಗತಿ ಆತನಿಗೆ ಗೊತ್ತಿತ್ತು. ಅದೇ ಹಣವನ್ನು ಸುಲಿಗೆ ಮಾಡಲು ಇತರೆ ಆರೋಪಿಗಳ ಜೊತೆ ಸೇರಿ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ 150ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಮೂರು ತಿಂಗಳು ನಿರಂತರವಾಗಿ ತನಿಖೆ ನಡೆಸಿ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ.’

‘ಆರೋಪಿಗಳ ಬಳಿ ₹ 4 ಲಕ್ಷ ಮಾತ್ರ ಸಿಕ್ಕಿದೆ. ಉಳಿದ ಹಣವನ್ನು ಇತರೆಡೆ ಖರ್ಚು ಮಾಡಿರುವುದಾಗಿ ಹೇಳುತ್ತಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.