ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರ: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ
Last Updated 24 ಜನವರಿ 2023, 22:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಿನಲ್ಲಿ ಸಾಕ್ಷರತೆ ಪ್ರಮಾಣ ವೃದ್ಧಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಬೆಳವಣಿಗೆಗೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೊಡುಗೆ ಅಪಾರ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸ್ಮರಿಸಿದರು.

ಸುಂಕದಕಟ್ಟೆಯ ಗಂಗಾಧರಪ್ಪ ಕಾಂಪ್ಲೆಕ್ಸ್‌ ಬಳಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತ್ಯುತ್ಸವ ಹಾಗೂ ಸಂಸ್ಮರಣೋತ್ಸವಕ್ಕೆ ಚಾಲನೆ ನೀಡಿದರು.

‘ಶಿಕ್ಷಣದ ಮೂಲಕ ಸಮಾಜವನ್ನು ಸಮೃದ್ಧಗೊಳಿಸುವ ಕನಸು ಕಂಡ ಅವರು, ಅದನ್ನು ಸಾಕಾರಗೊಳಿಸಲು ಸುದೀರ್ಘ ಸೇವೆ ಸಲ್ಲಿಸಿದರು. ಅವರು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಅಗ್ರಗಣ್ಯರಾಗಿದ್ದಾರೆ. ಅನ್ನದಾಸೋಹದ ಜತೆಗೆ ಮನುಷ್ಯನ ವಿಕಾಸಕ್ಕೆ ಪೂರಕವಾದ ಉತ್ಕೃಷ್ಟ ಶಿಕ್ಷಣ ನೀಡುತ್ತಿರುವ ಮಠದ ಕಾರ್ಯವೈಖರಿ ಹಾಗೂ ಗುರುಗಳ ಸಾಮಾಜಿಕ ಕಳಕಳಿಗೆ ಅಬ್ದುಲ್ ಕಲಾಂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಮಠಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದರು’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ನೆನೆದರು.

ಶಾಂತಿಧಾಮ ಹಾಗೂ ಎನ್‌ಪಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಗಂಗಾಧರಯ್ಯ, ‘ಬಾಲಗಂಗಾಧರನಾಥ ಸ್ವಾಮೀಜಿ ಅವರು ಬದುಕಿನುದ್ದಕ್ಕೂ ನಿರಂತರ ಕಾಯಕದಲ್ಲಿ ನಿಷ್ಠೆ ಮೆರೆದು, ಸದ್ದಿಲ್ಲದೇ ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದರು. ಈ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಬೆಳಕಾದರು’ ಎಂದರು.

ಎನ್‌ಪಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಧನಂಜಯ ಗೌಡ, ‘ಮಠಮಾನ್ಯಗಳು ಇರುವುದು ಜನರ ಸೇವೆಗಾಗಿ, ಸಮಾಜದ ಒಳಿತಿಗಾಗಿ ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು ಬಾಲಗಂಗಾಧರನಾಥ ಸ್ವಾಮೀಜಿ. ಅವರ ಆಶಯದಂತೆ ಬಡವರಿಗೆ ಕೈಗೆಟುಕುವ ದರದಲ್ಲಿ ಶಿಕ್ಷಣ ಒದಗಿಸ‌ಲಾಗುತ್ತಿದೆ’ ಎಂದು ಹೇಳಿದರು.

ಸಂಸದ ಡಿ.ಕೆ. ಸುರೇಶ್, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿಜಯನಗರ ಶಾಖೆಯ ಸೌಮ್ಯನಾಥ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಅವರು ಇದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT