ಹಸಿ ಬಿದಿರಿಗೂ ಕೊಡಲಿ ಪೆಟ್ಟು; ಕಬ್ಬನ್‌ ಪಾರ್ಕ್‌ನ 200 ಮೇಳೆಗಳು ಇನ್ನಿಲ್ಲ

7
ಪರಿಸರಪ್ರಿಯರ ಕೂಗು ಇಲಾಖೆಗೆ ಕೇಳುತ್ತಿಲ್ಲ

ಹಸಿ ಬಿದಿರಿಗೂ ಕೊಡಲಿ ಪೆಟ್ಟು; ಕಬ್ಬನ್‌ ಪಾರ್ಕ್‌ನ 200 ಮೇಳೆಗಳು ಇನ್ನಿಲ್ಲ

Published:
Updated:

ಬೆಂಗಳೂರು: ಕಬ್ಬನ್‌ ಉದ್ಯಾನದ ಬಿದಿರಿನ ಮೆಳೆಗಳಿಗೆ ಬುಧವಾರ ಕೊಡಲಿ ಪೆಟ್ಟು ಬಿದ್ದಿದೆ. ಒಣಗಿದ ಬಿದಿರು ತೆಗೆಯುವ ಭರದಲ್ಲಿ ಹಸಿ ಬಿದಿರನ್ನೂ ಬುಡಸಹಿತವಾಗಿ ಉರುಳಿಸಲಾಗಿದೆ.

ಉದ್ಯಾನದ ಅಂದ ಹೆಚ್ಚಿಸಿದ್ದ ಈ ಮೆಳೆಗಳು, ಇಲ್ಲಿನ ವಾತಾವರಣ ತಂಪಾಗಿರುವಂತೆಯೂ ನೋಡಿಕೊಂಡಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಗುಚ್ಛಗಳು ಒಣಗಿ, ರಸ್ತೆಯತ್ತ ವಾಲಿದ್ದಲ್ಲದೆ ಬೀಳುವ ಸ್ಥಿತಿಯಲ್ಲಿದ್ದವು.

ಉದ್ಯಾನದಲ್ಲಿ ವಿಹಾರ ಮಾಡುವವರು, ಪಾದಚಾರಿಗಳು ಹಾಗೂ ವಾಹನ ಸವಾರರ ಮೇಲೆ ಒಣಗಿದ ಬಿದಿರು ಬಿದ್ದು, ಅಪಾಯ ಸಂಭವಿಸಬಹುದು ಎಂಬ ಭೀತಿಯಿಂದ ಅದನ್ನು ತೆಗೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ. ಆದರೆ, ಒಣಗಿದ ಬಿದಿರಿನ ಜತೆ ಹಸಿರಾಗಿರುವ ಬಿದಿರನ್ನೂ ಕಡಿದು ಹಾಕುತ್ತಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.‌

‘ಪ್ರಜಾವಾಣಿ ಜತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ್‌ ಮುರುಗೋಡ, ‘ಅಪಾಯಕಾರಿಯಾಗಿರುವ ಬಿದಿರಿನ ಗುಚ್ಛವನ್ನು ಮಾತ್ರ ತೆಗೆಯಲು ಆದೇಶ ನೀಡಲಾಗಿದೆ. ಅರಣ್ಯ ಇಲಾಖೆ ಮಾತ್ರವಲ್ಲದೆ, ಪರಿಸರ ತಜ್ಞರ ಸಮಿತಿಯಿಂದಲೂ ಅನುಮತಿ ತೆಗೆದುಕೊಂಡೇ ಕಾರ್ಯಾದೇಶವನ್ನು ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಕಬ್ಬನ್‌ ಉದ್ಯಾನದಲ್ಲಿ ಶಿಥಿಲಾವಸ್ಥೆಯ ಒಟ್ಟು 200 ಬಿದಿರಿನ ಗುಚ್ಛಗಳನ್ನು ಗುರುತಿಸಲಾಗಿದೆ. ಈಗಾಗಲೇ ಇವುಗಳು ಹೂವು ಬಿಡುತ್ತಿದ್ದು, ಸ್ವಲ್ಪ ದಿನದಲ್ಲಿಯೇ ಬಿದ್ದು ಹೋಗುತ್ತವೆ. ಹಸಿರಾಗಿರುವ ಯಾವ ಬಿದಿರಿನ ಮೆಳೆಯನ್ನೂ ತೆಗೆಯುತ್ತಿಲ್ಲ’ ಎಂದು ತಿಳಿಸಿದರು.

‘ಮೆಳೆ ತೆಗೆದಿರುವ ಸ್ಥಳದಲ್ಲಿ ವಿವಿಧ ತಳಿಗಳ ಬಿದಿರಿನ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ಹೊಸ ಬಿದಿರಿನ ಸಸಿಗಳು ಕೆಂಪು, ಹಳದಿ, ಕಪ್ಪು ಬಣ್ಣದಿಂದ ಕೂಡಿರುತ್ತವೆ. ಇದರಿಂದ ಉದ್ಯಾನದ ಅಂದಕ್ಕೆ ಇನ್ನಷ್ಟು ಮೆರುಗು ಬರುತ್ತದೆ’ ಎಂದು ಮಾಹಿತಿ ನೀಡಿದರು.

‘ತೋಟಗಾರಿಕೆ ಇಲಾಖೆ ಕೈಗೊಂಡ ಕ್ರಮ ಸರಿಯಾಗಿಲ್ಲ’ ಎಂದು ನಿವೃತ್ತ ಅರಣ್ಯಾಧಿಕಾರಿ ಎ.ಸಿ. ಲಕ್ಷ್ಮಣ್‌ ಅಭಿಪ್ರಾಯಪಟ್ಟರು.

‘ಹೂವು ಬಿಟ್ಟ ಮಾತ್ರಕ್ಕೆ ಬಿದಿರು ಸಾಯುವ ಹಂತ ತಲುಪಿದೆ ಎಂದರ್ಥವಲ್ಲ. ಹೂವು ಬೀಜವಾಗಬೇಕು, ನಂತರ ಅದೇ ನೆಲದಲ್ಲಿ ಹೊಸ ಬಿದಿರು ಚಿಗುರಬೇಕು. ಹಳೆಯ ಬಿದಿರಿನ ರಕ್ಷಣೆಯಲ್ಲಿ ಹೊಸ ಚಿಗುರು ದಟ್ಟವಾಗಿ ಬೆಳೆಯುತ್ತದೆ’ ಎಂದು ಅವರು ವಿವರಿಸಿದರು.

ಪರಿಸರ ತಜ್ಞ ಸಮಿತಿಯ ಸದಸ್ಯ ಯಲ್ಲಪ್ಪ ರೆಡ್ಡಿ, ಮೆಳೆಯನ್ನು ತೆಗೆಯುತ್ತಿರುವ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡರು.

‘ಈಗಾಗಲೇ ಬಿದಿರಿನ ಬೀಜವನ್ನು ಸಂಗ್ರಹಿಸಲಾಗಿದೆ. ಹೊಸ ಬಿದಿರು ಚಿಗುರಲು ಸಾಕಷ್ಟು ಸಮಯ ಬೇಕು. ಒಂದು ವೇಳೆ ಹಳೆಯ ಮೆಳೆ ತೆಗೆಯದೇ ಇದ್ದಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು. ಏಳರಿಂದ ಎಂಟು ಬಗೆಯ ವೈವಿಧ್ಯಮಯ ಬಿದಿರಿನ ಸಸಿಗಳನ್ನು ನೋಡಿದ್ದೇವೆ. ಇದೇ ಸ್ಥಳದಲ್ಲಿ ಅವುಗಳನ್ನು ನೆಡುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಅಯ್ಯೋ, ₹ 50 ಸಾವಿರಕ್ಕೆ ಟೆಂಡರ್‌ ಆಗಿದೆ. ತೆರಿಗೆಯೆಲ್ಲ ಸೇರಿ ಒಟ್ಟು ₹ 66 ಸಾವಿರವನ್ನು ತೋಟಗಾರಿಕೆ ಇಲಾಖೆಗೆ ಕಟ್ಟಿದ್ದೇವೆ. ಈ ಬಿದಿರನ್ನು ಕಟಾವು ಮಾಡುವುದು ಅತ್ಯಂತ ಕಠಿಣ. ಮುಳ್ಳುಗಳೂ ಹೆಚ್ಚಿವೆ. ನಾವು ಯಾವ ಹಸಿ ಬಿದಿರನ್ನೂ ಕತ್ತರಿಸುವುದಿಲ್ಲ’ ಎಂದು ಟೆಂಡರ್‌ ತೆಗೆದುಕೊಂಡಿರುವ ಮಹಮ್ಮದ್‌ ಅಪ್ರೋಸ್‌ ಹೇಳಿದರು.
*****
ಎಷ್ಟೇ ಮಳೆ ಬಂದರೂ ಬಿದಿರು ಮುರಿಯುವುದು ಕಡಿಮೆ. ಒಣಗಿದ ಬಿದಿರಿನ ಮೆಳೆ ತೆಗೆಯುವುದರಲ್ಲಿ ಅರ್ಥವಿದೆ. ಆದರೆ ಹಸಿ ಬಿದಿರು ತೆಗೆಯುವುದು ಅನ್ಯಾಯ
–ಎ.ಸಿ. ಲಕ್ಷ್ಮಣ್‌, ನಿವೃತ್ತ ಅರಣ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !