ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕರಡು ಪ್ರಕಟ

Last Updated 23 ಜೂನ್ 2022, 19:36 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ವಾರದೊಳಗೆ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಚುನಾವಣೆಗೆ ಪೂರಕವಾಗಿ ವಾರ್ಡ್‌ಗಳ ಮರು ವಿಂಗಡಣೆಯ ಕರಡನ್ನು ಕೊನೆಗೂ ಪ್ರಕಟಿಸಿದೆ.

ಬಿಬಿಎಂಪಿಯ 8 ವಲಯಗಳ ವ್ಯಾಪ್ತಿಯೊಳಗೇ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಲಾಗಿದೆ. 2001ರಿಂದ 2011ರ ಅವಧಿಯಲ್ಲಿ ಜನಸಂಖ್ಯೆ ಶೇ 44ರಷ್ಟು ಹೆಚ್ಚಳವಾಗಿದೆ. 2011ರ ಜನಗಣತಿ ಪ್ರಕಾರ ಜನಸಂಖ್ಯೆ 84,43,675 ಇತ್ತು. ಈ ಜನಸಂಖ್ಯೆಯನ್ನೇ ಆಧರಿಸಿ ವಾರ್ಡ್‌ಗಳ ಮರುವಿಂಗಡಣೆಯನ್ನು ಬಿಬಿಎಂಪಿ ಮಾಡಿದೆ.

198 ವಾರ್ಡ್‌ಗಳಿದ್ದಾಗ ಕೆಲ ವಾರ್ಡ್‌ಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೆ, ಕೆಲವು ವಾರ್ಡ್‌ಗಳಲ್ಲಿ ಜಾಸ್ತಿ ಜನಸಂಖ್ಯೆ ಇತ್ತು. ಈ ಅಸಮಾನತೆ ಸರಿಪಡಿಸಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ವಿಧಾನಸಭಾ ಕ್ಷೇತ್ರ, ವಾರ್ಡಿನ ವಿಸ್ತೀರ್ಣ, ಸೇವಾ ಸೌಲಭ್ಯಗಳ ನಿರ್ವಹಣೆ, ಸರಳ ಆಡಳಿತಾತ್ಮಕ ಅನುಕೂಲತೆಗಳನ್ನು ಗಮನದಲ್ಲಿ ಇಟ್ಟುಕೊಂಡು ವಾರ್ಡ್‌ ವಿಂಗಡಣೆ ಮಾಡಲಾಗಿದೆ. ವಿಂಗಡಣೆಯಾದ ವಾರ್ಡ್‌ ಎರಡು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾಗದೆ ಒಂದೇ ಕ್ಷೇತ್ರಕ್ಕೆ ಸೀಮಿತ ಇರುವಂತೆ ನೋಡಿಕೊಳ್ಳಲಾಗಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿದ್ದರೂ, ಪಾಲಿಕೆ ವ್ಯಾಪ್ತಿಯನ್ನು ಮೀರಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿಂದಿದ್ದ ಪಾಲಿಕೆ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ಗೆ ಮುಕ್ತಾಯಗೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಗುರುವಾರದಿಂದ(ಜೂ.23) 15 ದಿನಗಳ ಕಾಲಾವಕಾಶ ನೀಡಲಾಗಿದೆ.

‘ಕೈ’ ಶಾಸಕರ ಕ್ಷೇತ್ರದಲ್ಲಿ ವಾರ್ಡ್ ಕಡಿತ

ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಮೂರು ಕ್ಷೇತ್ರಗಳಲ್ಲಿ ತಲಾ ಒಂದೊಂದು ವಾರ್ಡ್‌ಗಳನ್ನು ಕೈಬಿಡಲಾಗಿದೆ.

ಶಿವಾಜಿನಗರ, ಚಾಮರಾಜಪೇಟೆ ಮತ್ತು ಜಯನಗರ ಕ್ಷೇತ್ರಗಳಲ್ಲಿ ತಲಾ ಏಳು ವಾರ್ಡ್‌ಗಳಿದ್ದವು. ಅವುಗಳನ್ನು ತಲಾ ಆರಕ್ಕೆ ಇಳಿಕೆ ಮಾಡಲಾಗಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT