ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಬಳಿಕ ‘ಬೆಂಗಳೂರು ಹಬ್ಬ’ದ ಹಣ ಸಂದಾಯ

ಪೂರ್ತಿ ಹಣ ಪಾವತಿಸದೆ ಕಂತು ರೂಪದಲ್ಲಿ ನೀಡಿದಕ್ಕೆ ಕಲಾವಿದರ ವಲಯದಲ್ಲಿ ಅಸಮಾಧಾನ
Published 21 ಏಪ್ರಿಲ್ 2024, 23:48 IST
Last Updated 21 ಏಪ್ರಿಲ್ 2024, 23:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ‘ನಮ್ಮ ಬೆಂಗಳೂರು ಹಬ್ಬ’ ನಡೆದು ವರ್ಷ ಕಳೆದ ಬಳಿಕ ಕಲಾವಿದರಿಗೆ ಪ್ರದರ್ಶನದ ಹಣ ಸಂದಾಯವಾಗಿದೆ. ಆದರೆ, ಅಲ್ಪ ಹಣವನ್ನು ‘ಧನಸಹಾಯ’ದಂತೆ ಕಂತು ರೂಪದಲ್ಲಿ ನೀಡಿರುವುದು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ. 

ಬೆಂಗಳೂರಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಇಲ್ಲಿ ನೆಲೆಸಿರುವವರಿಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಹಬ್ಬ ನಡೆಸಲಾಗಿತ್ತು. ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ 2023ರ ಮಾರ್ಚ್ 25 ಮತ್ತು 26ರಂದು ಕಬ್ಬನ್ ಉದ್ಯಾನ ಹಾಗೂ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿತ್ತು. ಎರಡು ದಿನಗಳ ಉತ್ಸವದ ನಿರ್ವಹಣೆಯನ್ನು ಇಲಾಖೆಯು ‘ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್‌’ ಸಂಸ್ಥೆಗೆ ನೀಡಿತ್ತು. ಸಂಸ್ಥೆಯು ಈ ಉತ್ಸವಕ್ಕೆ ಒಟ್ಟು ₹ 5.59 ಕೋಟಿ ಹಣ ವೆಚ್ಚವಾಗಿರುವುದಾಗಿ ದರಪಟ್ಟಿಯನ್ನು ಇಲಾಖೆಗೆ ಸಲ್ಲಿಸಿತ್ತು. ಕುರ್ಚಿ, ಟೇಬಲ್ ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳಿಗೆ ದುಪ್ಪಟ್ಟು ಹಣ ನಿಗದಿಪಡಿಸಲಾಗಿದೆ ಎಂದು ಕಲಾ ಸಂಘಟನೆಗಳು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದವು. ಇದರಿಂದಾಗಿ ಹಣ ಪಾವತಿಗೆ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿತ್ತು. 

ವಿವಿಧ ಜಾನಪದ ಕಲಾ ತಂಡಗಳು, ಚಲನಚಿತ್ರ ಗಾಯಕರ ಬ್ಯಾಂಡ್‌ಗಳು, ರಿಯಾಲಿಟಿ ಶೋಗಳ ಗಾಯಕರು ಉತ್ಸವದಲ್ಲಿ ಪ್ರದರ್ಶನ ನೀಡಿದ್ದರು. ಸಂಸ್ಥೆಯು ಇಲಾಖಾ ತನಿಖೆ ಬಳಿಕ ಜಾನಪದ ಗಾಯನ, ನೃತ್ಯ ಸೇರಿ ವಿವಿಧ ಪ್ರದರ್ಶನಗಳಿಗೆ ಗೌರವ ಧನ ಪರಿಷ್ಕರಿಸಿದ್ದು, ಜಾನಪದ ಗಾಯಕರಿಗೆ ನಿಗದಿ ಮಾಡಿದ್ದ ₹ 5 ಸಾವಿರದಲ್ಲಿ ₹ 3,500 ಮಾತ್ರ ಪಾವತಿಸಿದೆ. ಇದೇ ರೀತಿ, ಕಲಾ ತಂಡ ಹಾಗೂ ಕಲಾವಿದರಿಗೆ ನಿಗದಿಪಡಿಸಿದ್ದ ಗೌರವಧನದಲ್ಲಿ ಶೇ 75 ರಷ್ಟು ಹಣ ಸಂದಾಯ ಮಾಡಿದೆ. 

ಕಲಾವಿದರ ಅಸಮಾಧಾನ: ಅನುದಾನದ ಕೊರತೆಯಿಂದಾಗಿ ಸಂಸ್ಕೃತಿ ಇಲಾಖೆಯು ಈ ಬಾರಿ ಧನಸಹಾಯವನ್ನು ಸಂಘ–ಸಂಸ್ಥೆಗಳಿಗೆ ಕಂತು ರೂಪದಲ್ಲಿ ಬಿಡುಗಡೆ ಮಾಡಿತ್ತು. ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಶೇ 31ರಷ್ಟು, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದವರಿಗೆ ಶೇ 33ರಷ್ಟು ಹಾಗೂ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರಿಗೆ ಶೇ 40ರಷ್ಟು ಅನುದಾನ ಒದಗಿಸಿತ್ತು. ಈಗ ನಮ್ಮ ಬೆಂಗಳೂರು ಹಬ್ಬದ ಗೌರವಧನವನ್ನೂ ಪೂರ್ಣ ಪ್ರಮಾಣದಲ್ಲಿ ಪಾವತಿಸದಿರುವುದು ಕಲಾವಿದರನ್ನು ಕೆರಳಿಸಿದೆ. 

‘ಕಲಾವಿದರಿಗೆ ಇತ್ತೀಚೆಗೆ ಅವಕಾಶಗಳು ಸಿಗುವುದೇ ಅಪರೂಪ. ಸಿಕ್ಕ ಅವಕಾಶಗಳಿಗೂ ಗೌರವಧನ ಪಾವತಿಸದಿದ್ದರೆ ಜೀವನ ನಡೆಸುವುದು ಕಷ್ಟಸಾಧ್ಯ. ಕಳೆದೊಂದು ವರ್ಷದಿಂದ ಕನ್ನಡ ಭವನಕ್ಕೆ ಅಲೆದಾಟ ನಡೆಸಲಾಗಿತ್ತು. ಈಗ ಗೌರವಧನ ಪಾವತಿಯಾದರೂ ಪೂರ್ಣ ಹಣ ನೀಡಿಲ್ಲ. ಇನ್ನುಳಿದ ಹಣವನ್ನು ಯಾವಾಗ ನೀಡುತ್ತಾರೆ ಎನ್ನುವ ಖಚಿತತೆಯೂ ಇಲ್ಲವಾಗಿದೆ’ ಎಂದು ಬೆಂಗಳೂರು ಹಬ್ಬದಲ್ಲಿ ಪ್ರದರ್ಶನ ನೀಡಿದ ಕಲಾ ಸಂಘಟನೆಯ ಮುಖ್ಯಸ್ಥರೊಬ್ಬರು ತಿಳಿಸಿದರು.

ತನಿಖೆ ಬಳಿಕ ಹಣ ಕಡಿತ

ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಸಂಸ್ಕೃತಿ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯದ ಕಾರ್ಯಕ್ರಮಗಳಿಗೂ ದರಪಟ್ಟಿ ಸಲ್ಲಿಸಿರುವುದು ದೃಢಪಟ್ಟಿತ್ತು. ಇದರಿಂದಾಗಿ ಹಬ್ಬ ನಿರ್ವಹಣೆ ಮಾಡಿದ್ದ ಸಂಸ್ಥೆಗೆ ₹ 44.27 ಲಕ್ಷವನ್ನು ತಡೆ ಹಿಡಿದು ಉಳಿದ ಹಣವನ್ನು ಆರ್ಥಿಕ ಇಲಾಖೆ ಬಿಡುಗಡೆ ಮಾಡಿತ್ತು.

‘ವಿವಿಧ ಸಂಗೀತ ಬ್ಯಾಂಡ್‌ಗಳಿಗೆ ಲಕ್ಷಾಂತರ ರೂಪಾಯಿಯನ್ನು ಸಂಸ್ಥೆಯ ಮೂಲಕ ಪಾವತಿಸಿರುವ ಸಂಸ್ಕೃತಿ ಇಲಾಖೆ ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರದ ಕಲಾವಿದರನ್ನು ಕಡೆಗಣಿಸಿದೆ. ನಿಗದಿಪಡಿಸಿದ ಗೌರವಧನದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡದಿರುವುದು ವಿಪರ್ಯಾಸ. ಕಲಾವಿದರಿಗೆ ನಿರಂತರ ಅನ್ಯಾಯ ಆಗುತ್ತಿದೆ’ ಎಂದು ಕಲಾವಿದ ಜಯಸಿಂಹ ಎಸ್. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT