ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸುಲಿಗೆ ಆರೋಪಿಗೆ ಗುಂಡೇಟು

Last Updated 1 ಡಿಸೆಂಬರ್ 2020, 5:06 IST
ಅಕ್ಷರ ಗಾತ್ರ

ಬೆಂಗಳೂರು: ಲಾರಿ ಚಾಲಕರನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿ ಅನುಬನ್ ಎಂಬುವರನ್ನು ನಂದಿನಿ ಲೇಔಟ್ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

‘ತಮ್ಮನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆರೋಪಿ ಅನುಬನ್ ಹಲ್ಲೆ ಮಾಡಿದ್ದರು. ಅವರ ಕಾಲಿಗೆ ಗುಂಡು ಹೊಡೆಯಲಾಗಿದೆ. ಗುಂಡೇಟಿನಿಂದ ಗಾಯಗೊಂಡಿರುವ ಅವರನ್ನು ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.

‘ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಚಾಲಕರೊಬ್ಬರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳ ತಂಡ, ಚಾಕುವಿನಿಂದ ಇರಿದು ಹಲ್ಲೆ ಮಾಡಿತ್ತು. ಚಾಲಕರ ಬಳಿ ಇದ್ದ ₹30,000 ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿತ್ತು. ಲಾರಿ ಚಾಲಕ‌ ನೀಡಿದ್ದ ದೂರು ಆಧರಿಸಿ ಆರೋಪಿ ಅನ್ವರ್ ಎಂಬುವರನ್ನು ಬಂಧಿಸಲಾಗಿತ್ತು. ಅವರು‌ ನೀಡಿದ್ದ ಮಾಹಿತಿಯಂತೆ ಅನುಬನ್ ಹಾಗೂ ಇತರೆ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿತ್ತು’ ಎಂದೂ ಅವರು ಹೇಳಿದರು.

‘ಠಾಣೆ ವ್ಯಾಪ್ತಿಯ ಮೇಲ್ಸೇತುವೆ ಬಳಿ ಆರೋಪಿ ಇರುವ ಮಾಹಿತಿ ಸಿಕ್ಕಿತ್ತು. ಪಿಎಸ್ಐ ಜೋಗಾನಂದ್ ನೇತೃತ್ವದ ತಂಡ, ಸ್ಥಳಕ್ಕೆ ಹೋಗಿತ್ತು. ಸಿಬ್ಬಂದಿ ಅಭಿಷೇಕ್ ಎಂಬುವರಿಗೆ ಡ್ರ್ಯಾಗರ್‌ನಿಂದ ಇರಿದಿದ್ದ ಆರೋಪಿ, ಪಿಎಸ್ಐ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಪಿಎಸ್ಐ ಜೋಗಾನಂದ್ ಅವರು ಆರೋಪಿಗೆ ಬಲಗಾಲಿಗೆ ಗುಂಡು ಹಾರಿಸಿದ್ದರು. ಕುಸಿದು ಬಿದ್ದ ಆರೋಪಿಯನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಡಿಸಿಪಿ ವಿವರಿಸಿದರು.

‘ಗಾಯಗೊಂಡಿರುವ ಸಿಬ್ಬಂದಿ ಅಭಿಷೇಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT