ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೆಂಗಳೂರು ವಿವಿ ಘಟಿಕೋತ್ಸವ

34,337 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ; ಕುಲಪತಿ ಜಯಕರ
Last Updated 3 ಡಿಸೆಂಬರ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣ ದಲ್ಲಿ ಡಿ.5ರಂದು ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವ ನಡೆಯಲಿದೆ.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಅವರು ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಉಪಸ್ಥಿತರಿರುವರು ಎಂದು ಕುಲಪತಿ ಎಸ್‌.ಎಂ.ಜಯಕರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಘಟಿಕೋತ್ಸವದಲ್ಲಿ 167 ವಿದ್ಯಾರ್ಥಿಗಳಿಗೆ 300 ಬಂಗಾರದ ಪದಕಗಳು, 73 ನಗದು ಬಹುಮಾನ ವಿತರಿಸಲಾಗುವುದು. 267 ಅಭ್ಯರ್ಥಿಗಳಿಗೆ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.34,337 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆಯುವರು ಎಂದು ತಿಳಿಸಿದರು.

ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಅಂಕಪಟ್ಟಿಗಳನ್ನೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪರೀಕ್ಷೆಯು ಮುಗಿದ ಒಂದು ವಾರದ ಒಳಗೆ ಫಲಿತಾಂಶ ಪ್ರಕಟಿಸಲಾಗುತ್ತಿದೆ.ಇದರಿಂದ ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‌ಗಳಿಗೆ ಬೇಗನೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿದೆ ಎಂದರು.

ವಿಜಯನಗರಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಕೀರ್ತಿ ನೇಗಿನ್ಹಾಲ್‌, ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಕೆ.ಅರ್ಚನಾ ಅವರು ತಲಾ ಏಳು ಚಿನ್ನದ ಪದಕ ಪಡೆದಿದ್ದಾರೆ.ಸಂಸ್ಕೃತ ವಿಭಾಗದ ಮಯೂರ ಆರು ಪದಕ, ಅರ್ಥಶಾಸ್ತ್ರ ವಿಭಾಗದ ಬಿ.ಎಚ್‌.ಚಂದ್ರಿಕಾ, ಭೌತಶಾಸ್ತ್ರ ವಿಭಾಗದ ಎಸ್. ಚೇತನ್‌ಸೂರ್ಯ, ಸಸ್ಯಶಾಸ್ತ್ರ ವಿಭಾಗದ ಎನ್‌.ಅರ್ಚನಾ, ಪ್ರಾಣಿಶಾಸ್ತ್ರ ವಿಭಾಗದ ಆರ್ಷಿಯಾ ನಾಜ್‌ ತಲಾ ಐದು ಪದಕ ಗಳಿಸಿದ್ದಾರೆ.

ಸ್ನಾತಕ ಪದವಿಯಲ್ಲಿ ಸೌಂದರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪಿ.ಸಿ. ರಾಮ್‌ ಕುಮಾರ್, ಜ್ಞಾನವಿಕಾಸದ ಆರ್.ಸ್ಫೂರ್ತಿ ತಲಾ ಆರು,ಸುರಾನ ಕಾಲೇಜಿನ ಎಂ.ಎನ್‌.ಧನುಷ್‌,ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಕೆ.ವಿ.ವಿನೋದ್‌ ಕುಮಾರ್ ತಲಾ ಐದು ಪದಕ ಪಡೆದಿದ್ದಾರೆ.

ಗೋಷ್ಠಿಯಲ್ಲಿ ಕುಲಸಚಿವ ಎನ್‌.ಮಹೇಶ್‌ ಬಾಬು, ಮೌಲ್ಯಮಾಪನ ಕುಲ ಸಚಿವ, ಜೆ.ಟಿ.ದೇವರಾಜ್, ಹಣಕಾಸು ಅಧಿಕಾರಿ ಎಸ್.ಅಜಿತ್‌ಕುಮಾರ್ ಹೆಗ್ಡೆ ಇದ್ದರು.

‘ಹಗರಣದ ನಂತರ ಹೊಸ ಅಂಕಪಟ್ಟಿ’

ಬೆಂಗಳೂರು: ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅಂಕಪಟ್ಟಿ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರು ಮೌಲ್ಯಮಾಪನ ಮಾಡಿಸಿ, ಆಯಾ ಕಾಲೇಜುಗಳಿಗೆ ಹೊಸ ಅಂಕಪಟ್ಟಿ ರವಾನಿಸಲಾಗಿದೆ ಎಂದು ಕುಲಪತಿ ಎಸ್‌.ಎಂ.ಜಯಕರ್ ಹೇಳಿದರು.

ಹೊರಗುತ್ತಿಗೆ ಪಡೆದಿದ್ದ ಕಂಪನಿ ಅಂಕಗಳನ್ನು ದಾಖಲಿಸುವಾಗ ಅನುತ್ತೀರ್ಣರಾದವರಿಗೂ ಅಧಿಕ ಅಂಕಗಳನ್ನು ನೀಡಿದೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು ಮೂರು ಸಾವಿರದಷ್ಟು ವಿದ್ಯಾರ್ಥಿಗಳ ಅಂಕಗಳು ಏರುಪೇರಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಿಐಡಿಗೆ ವಹಿಸಲಾಗಿತ್ತು. ಆರೋಪ ಕೇಳಿಬಂದ ವಿದ್ಯಾರ್ಥಿಗಳ ಪತ್ರಿಕೆಗಳ ಮರು ಮೌಲ್ಯಮಾಪನದ ನಂತರ ಶೇ 80ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ವಿವರ ನೀಡಿದರು.

ಮೃತ ವಿದ್ಯಾರ್ಥಿನಿಗೆ ಪರಿಹಾರ:ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದುಹೋಗುತ್ತಿದ್ದ ವಿದ್ಯಾರ್ಥಿನಿ ಶಿಲ್ಪಾ ಅವರ ಮೇಲೆ ಬಸ್‌ ಚಲಿಸಿ ಈಚೆಗೆ ಮೃತಪಟ್ಟಿದ್ದರು. ಅವರ ಪೋಷಕರಿಗೆ ಪರಿಹಾರ ನೀಡಲು ಸಿಂಡಿಕೇಟ್‌ ಸಭೆಯಲ್ಲಿ ಸಮ್ಮತಿ ಪಡೆಯಲಾಗಿದೆ. ಹೆಚ್ಚಿನ ಹಣ ಸಂಗ್ರಹಿಸಿ ಅವರ ಕುಟುಂಬಕ್ಕೆ ನೀಡಲಾಗುವುದು ಎಂದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಹಾದು ಹೋಗುವ ರಸ್ತೆ ಅಪಾಯಕಾರಿಯಾಗಿದೆ. ಹಲವು ಅಪಘಾತಗಳು ನಡೆಯುತ್ತಿವೆ. ಆವರಣದ ಗೇಟ್‌ ಬಂದ್‌ ಮಾಡಿ, ವಾಹನಗಳಿಗೆ ಪರ್ಯಾಯ ಮಾರ್ಗ ನೀಡುವಂತೆ ಬಿಬಿಎಂಪಿ, ಪೊಲೀಸರಿಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT