ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಗುಣಮಟ್ಟದ ಅಂಕಪಟ್ಟಿ ವಿತರಣೆ ನಿರ್ಧಾರಕ್ಕೆ ವಿರೋಧ

Last Updated 31 ಆಗಸ್ಟ್ 2021, 23:22 IST
ಅಕ್ಷರ ಗಾತ್ರ

ಬೆಂಗಳೂರು: ಕಾಗದದ ಅಥವಾ ಸುಲಭವಾಗಿ ಹರಿದುಹೋಗಬಹುದಾದ ಅಂಕಪಟ್ಟಿಗಳ ವಿತರಣೆಗೆ ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

3 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಕಾಗದದ ಅಂಕಪಟ್ಟಿ (tearable marks card) ವಿತರಿಸುವ ಚಿಂತನೆ ನಡೆಯುತ್ತಿದೆ. ಈ ವಿದ್ಯಾರ್ಥಿಗಳು ಈಗ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ‌

‘1 ಮತ್ತು 2ನೇ ಸೆಮಿಸ್ಟರ್‌ನಲ್ಲಿ ಒಂದು ರೀತಿಯ ಅಂಕಪಟ್ಟಿಗಳನ್ನು ನೀಡಿದ್ದರು. ಉಳಿದ ಸೆಮಿಸ್ಟರ್‌ಗಳಿಗೆ ಕಳಪೆ ಗುಣಮಟ್ಟದ ಅಂಕಪಟ್ಟಿ ನೀಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ನಾವು ಕೆಲಸಕ್ಕೆ ಹೋದಾಗ ನಮ್ಮ ಅಂಕಪಟ್ಟಿ ನೋಡಿದವರು ಏನೆಂದುಕೊಳ್ಳುತ್ತಾರೆ?’ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

‘ಗುಣಮಟ್ಟದ ಅಂಕಪಟ್ಟಿಗಳ ಖರೀದಿಗೆ ತುಂಬಾ ಹಿಂದೆಯೇ ಟೆಂಡರ್ ಆಹ್ವಾನಿಸಲಾಗಿತ್ತು. ಪರೀಕ್ಷಾ ವಿಭಾಗದ ಅಧಿಕಾರಿಗಳು, ಅತಿ ಕಡಿಮೆ ದರ ನಮೂದಿಸಿದ ಕಂಪನಿಗಳ ವಿವರಗಳೊಂದಿಗೆ ಸಭೆಗೆ ಬಂದಿದ್ದರು. ಆದರೆ, ಕುಲಪತಿಯವರು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ’ ಸಿಂಡಿಕೇಟ್ ಸದಸ್ಯ ಉದಯ್ ಕುಮಾರ್‌ ದೂರಿದರು.

‘ವಿ.ವಿ ಅನುದಾನ ಆಯೋಗದ ಮಾರ್ಗಸೂಚಿಯ ಪ್ರಕಾರ, ಗುಣಮಟ್ಟದ ಅಂಕಪಟ್ಟಿಗಳನ್ನೇ ನೀಡುವಂತೆ ಸಿಂಡಿಕೇಟ್‌ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಆದರೂ ಈಗ ಕಳಪೆ ಗುಣಮಟ್ಟದ ಅಂಕಪಟ್ಟಿಗಳ ವಿತರಣೆಗೆ ಮಂದಾಗುವ ಮೂಲಕ ಕುಲಪತಿಯವರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ’ ಸಿಂಡಿಕೇಟ್ ಸದಸ್ಯ ಡಾ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

‘ಟೆಂಡರ್‌ ಪ್ರಕ್ರಿಯೆ ನಿಧಾನವಾಗುತ್ತಿದೆ. ಅದಕ್ಕಾಗಿ ನಾವು, 2.50 ಲಕ್ಷದಷ್ಟು ಕಾಗದದ ಅಂಕಪಟ್ಟಿಗಳನ್ನು ಖರೀ
ದಿಸಿದ್ದೇವೆ. ಈಗಾಗಲೇ ಅಂಕಪಟ್ಟಿ ವಿತರಣೆ ವಿಳಂಬವಾಗಿದೆ. ಇನ್ನೂ ವಿಳಂಬವಾದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಈ ಅಂಕಪಟ್ಟಿಗಳ ವಿತರಣೆಗೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಪರೀಕ್ಷಾ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು. ಪ್ರತಿ ವಿದ್ಯಾರ್ಥಿಯಿಂದ ಅಂಕಪಟ್ಟಿಗಾಗಿ ₹160 ಪಡೆಯಲಾಗಿದೆ. ಆದರೆ, ಈಗ ವಿತರಿಸಲು ಉದ್ದೇಶಿಸಲಾಗಿರುವ ಪ್ರತಿ ಒಂದು ಅಂಕಪಟ್ಟಿಗೆ ವೆಚ್ಚ ₹2 ಮಾತ್ರ!

‘ಮರು ಟೆಂಡರ್ ಕರೆಯಲಾಗಿದೆ’
‘ಮೊದಲು ಟೆಂಡರ್‌ ಕರೆದಾಗ, ಅಂಕಪಟ್ಟಿಗಳ ಖರೀದಿ ವೆಚ್ಚದಲ್ಲಿ ₹1.5 ಕೋಟಿಯವರೆಗೆ ವ್ಯತ್ಯಾಸ ಬರುತ್ತಿತ್ತು. ಗುಣಮಟ್ಟದ ಅಂಕಪಟ್ಟಿ ಒಂದಕ್ಕೆ ಕಂಪನಿಯೊಂದು ₹43 ನಮೂದಿಸಿ ಅರ್ಜಿ ಸಲ್ಲಿಸಿತ್ತು. ಆದರೆ, ಇದೇ ಅಂಕಪಟ್ಟಿಗಳನ್ನು ಬೇರೆ ವಿಶ್ವವಿದ್ಯಾಲಯಗಳಿಗೆ ₹36ರಂತೆ ನೀಡಲಾಗಿದೆ. ಪ್ರತಿ ಅಂಕಪಟ್ಟಿಗೆ ₹7 ವ್ಯತ್ಯಾಸವಾದರೆ, 10 ಲಕ್ಷ ಅಂಕಪಟ್ಟಿಗಳಿಗೆ ₹1.5 ಕೋಟಿಗೂ ಹೆಚ್ಚು ನೀಡಬೇಕಾಗುತ್ತಿತ್ತು. ನನ್ನ ವೃತ್ತಿ ಜೀವನದ ಕೊನೆಯ ವರ್ಷದಲ್ಲಿ ಯಾವುದೇ ಹಗರಣದಲ್ಲಿ ಸಿಲುಕಿಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕೆ ಆ ಟೆಂಡರ್ ರದ್ದು ಮಾಡಿದ್ದೇನೆ’ ಎಂದು ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿನ್ನೆಯೇ (ಸೋಮವಾರ) ಮರುಟೆಂಡರ್‌ ಕರೆಯಲಾಗಿದೆ. 20 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಂಕಪಟ್ಟಿಗಳನ್ನು ವಿತರಿಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT