ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಹಣ ದುರ್ಬಳಕೆ: ಇಬ್ಬರ ವಿರುದ್ಧ ಎಫ್‌ಐಆರ್

Last Updated 8 ಜನವರಿ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್‌ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ (ಸಿಬಿಎಸ್‌ಎಂಎಸ್) ಸಂಜೆ ಕಾಲೇಜಿಗೆ 2018-19 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕ ಮೊತ್ತ ₹ 13.73 ಲಕ್ಷ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಎಸ್‌ಎಂಎಸ್‌ನ ಮಾಜಿ ನಿರ್ದೇಶಕರಾಗಿದ್ದ ಪ್ರೊ. ಜನಾರ್ದನಮ್ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಶಿವಶಂಕರ್ ಭೈರವ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿ. ಶಿವರಾಂ ನೀಡಿರುವ ದೂರಿನ ಅನ್ವಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಹಾಲಿ ಕುಲಸಚಿವ (ಮೌಲ್ಯಮಾಪನ) ಆಗಿರುವ ಪ್ರೊ. ಜನಾರ್ದನಮ್ ಮತ್ತು ಶಿವಶಂಕರ್ ಭೈರವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘2018-19ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಪ್ರೊ. ಜನಾರ್ದನಮ್ ಅವರು ಸಿಬಿಎಸ್‌ಎಂಎಸ್‌ನ ನಿರ್ದೇಶಕರಾಗಿದ್ದರು. ಪರೀಕ್ಷಾ ವಿಭಾಗದ ನಿರ್ವಾಹಕರಾಗಿ ಶಿವಶಂಕರ್ ಕಾರ್ಯನಿರ್ವಹಿಸುತ್ತಿದ್ದರು. ಆ ವರ್ಷ ಎಂಬಿಎಗೆ ಪ್ರವೇಶ ಪಡೆದಿದ್ದ 52 ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕದಲ್ಲಿ ₹ 13.73 ಲಕ್ಷವನ್ನು ಇವರಿಬ್ಬರೂ ತಮ್ಮ ವೈಯಕ್ತಿಕ ಬ್ಯಾಂಕ್‌ ಖಾತೆಗಳಿಗೆ ಜಮೆ
ಮಾಡಿಸಿಕೊಂಡಿದ್ದರು. ಅಲ್ಲದೆ, ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಿದ್ದ ಶುಲ್ಕದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಆರೋಪದ ಕುರಿತು ವಿಶ್ವವಿದ್ಯಾಲಯದಲ್ಲಿ ಆಂತರಿಕ ತನಿಖೆ ನಡೆಸಿದಾಗ ಇಬ್ಬರೂ ಕೂಡ ಶುಲ್ಕದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದರು’ ಎಂದು ಶಿವರಾಂ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT