ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮದ ಕಾರಣಕ್ಕೆ ಕಿತ್ತಾಟ: ಬರಗೂರು ವಿಷಾದ

ಎಂಎಲ್‌ಎ ಕಾಲೇಜಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ
Last Updated 29 ಜುಲೈ 2022, 21:29 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾಜದಲ್ಲಿ ಜಾತಿ ಹಾಗೂ ಧರ್ಮದ ವಿಷಯದಲ್ಲಿ ಕಿತ್ತಾಟಗಳು ನಡೆಯುತ್ತಿದ್ದು, ಹತ್ಯೆಯಂತಹ ಅಮಾನುಷವಾದ ಕೃತ್ಯಗಳು ಜರುಗುತ್ತಿವೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.

ಎಂಎಲ್‌ಎ ಅಕಾಡೆಮಿ ಆಫ್‌ ಹೈಯರ್‌ ಲರ್ನಿಂಗ್‌, ಎಂಎಲ್‌ಎ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ವಿಚಾರಸಂಕಿರಣ
ದಲ್ಲಿ ‘ಕನ್ನಡ ಸಾಹಿತ್ಯ ಮತ್ತು ಜೀವನ ಮೌಲ್ಯಗಳು’ ಎಂಬ ವಿಷಯ ಕುರಿತು ಮಾತನಾಡಿದರು.

‘ಮನುಷ್ಯರಾದ ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಾದ ಕಾಲ ಬಂದಿದೆ’ ಎಂದು ಎಚ್ಚರಿಸಿದರು. ‘ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪದ ವಿದ್ಯಾರ್ಥಿಗಳಿಗೂ ಸಾಹಿತ್ಯದ ಸ್ಪರ್ಶ ಇರಬೇಕು. ಸಾಹಿತ್ಯದ ಓದಿನಿಂದ ಮೃಗೀಯತೆ ದೂರವಾಗಿ ಮನುಷ್ಯತ್ವ ಬೆಳೆಯಲಿದೆ’ ಎಂದು ಪ್ರತಿಪಾದಿಸಿದರು.

‘ಸಮಾಜದಲ್ಲಿನ ಬದಲಾವಣೆಗಳಿಂದ ಶಾಂತಿ ಕದಡುವಿಕೆ ಆಗಬಾರದು, ಮೌಲ್ಯಗಳೂ ದೂರವಾಗಬಾರದು. ನಟ ಪುನೀತ್‌ರಾಜಕುಮಾರ್‌ ಸಾವಿನ ನಂತರವೂ ಬದುಕಿದ್ದಾರೆ. ಅವರು ಮಾಡಿದ್ದ ಸಾಮಾಜಿಕ ಕೆಲಸಗಳಿಂದ ಅದು ಸಾಧ್ಯವಾಗಿದೆ. ತಂದೆ ಡಾ.ರಾಜ್‌ಕುಮಾರ್‌ ಅವರೇ ಪುನೀತ್‌ಗೆ ಪ್ರೇರಣೆ’ ಎಂದು ವಿಶ್ಲೇಷಿಸಿದರು.

ಉಪನ್ಯಾಸಕರು ಜೀವನ ಮೌಲ್ಯದ ಪ್ರತಿನಿಧಿಗಳು ಆಗಬೇಕು. ಅವರು ಕಲಿಸುತ್ತಲೇ ಕಲಿಯಬೇಕು ಎಂದ ಅವರು, ಮನುಷ್ಯ ಸಂಬಂಧ ದೂರವಾಗಿ ವ್ಯಾಪಾರಿ ಸಂಬಂಧ ಮುನ್ನೆಲೆಗೆ ಬಂದಿದೆ ಎಂದು ವಿಷಾದಿಸಿದರು.

ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಬೆಳಕೆರೆ ಲಿಂಗರಾಜಯ್ಯ, ‘ಹುಟ್ಟುತ್ತ ವಿಶ್ವಮಾನವರಾಗಿ, ಬೆಳೆಯುತ್ತ ಅಲ್ಪಮಾನವ ಆಗುತ್ತಿದ್ದೇವೆ. ಶಿಕ್ಷಣ ವ್ಯವಸ್ಥೆಯು ವಿಶ್ವಮಾನವ ಆಗಿಸಬೇಕು. ಅಂತಹ ಶಿಕ್ಷಣ ಬೇಕಿದೆ. ರಾಷ್ಟ್ರಕವಿ ಕುವೆಂಪು ಸಹ ಇದನ್ನೇ ಹೇಳಿದ್ದರು’ ಎಂದು ಸ್ಮರಿಸಿದರು.

ಪ್ರಾಂಶುಪಾಲೆ ಡಾ.ಪಿ.ವಿ.ಪದ್ಮಜಾ, ಮಲ್ಲೇಶ್ವರ ಮಹಿಳಾ ಸಂಘದ ಗೌರವ ಕಾರ್ಯದರ್ಶಿ ಲಕ್ಷ್ಮಿ ನಾಗೇಶ್ವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT