ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ಸೃಷ್ಟಿ: ₹ 2 ಲಕ್ಷಕ್ಕೆ ಪಾಸ್‌ಪೋರ್ಟ್

ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ * ಶ್ರೀಲಂಕಾ ಪ್ರಜೆಗಳು ಸೇರಿ 9 ಮಂದಿ ಬಂಧನ
Last Updated 9 ನವೆಂಬರ್ 2022, 15:51 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪಾಸ್‌ಪೋರ್ಟ್ ಮಾಡಿಸಿಕೊಟ್ಟು ಕೇಂದ್ರ ಸರ್ಕಾರಕ್ಕೆ ವಂಚಿಸುತ್ತಿದ್ದ ಜಾಲ ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಶ್ರೀಲಂಕಾ ಪ್ರಜೆಗಳು ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ನಿವಾಸಿ ಅಮಿನ್ ಶೇಠ್, ಮಂಗಳೂರಿನ ನವಾಲ್, ಹೈದರ್, ಪಾಸ್‌ಪೋರ್ಟ್ ಪಡೆದಿದ್ದ ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಮಣಿವೇಲು, ಶೀಜು, ವಿಶಾಲ್ ನಾರಾಯಣ್, ನಿರೋಶಾ ಬಂಧಿತರು.

‘ಹಲವು ಅಪರಾದ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ಸಾದಿಕ್ ಪಾಷಾ ಎಂಬಾತನಿಗೆ ಮೊಹಮ್ಮದ್ ಕರೀಂ ಹೆಸರಿನಲ್ಲಿ ಪಾಸ್‌ಪೋರ್ಟ್ ಮಂಜೂರಾಗಿತ್ತು. ಆದರೆ, ಈತನ ವಿರುದ್ಧ ಹಾಸನ ಹಾಗೂ ಇತರೆ ಜಿಲ್ಲೆಗಳ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅ. 19ರಂದು ಬಸವನಗುಡಿ ಠಾಣೆಗೆ ಬಂದಿದ್ದ ಹಾಸನ ಪೊಲೀಸರು, ಸಾದಿಕ್ ಪಾಷಾ ಬಗ್ಗೆ ವಿಚಾರಿಸಿದ್ದರು. ಮಾಹಿತಿ ವಿನಿಮಯ ವೇಳೆಯಲ್ಲಿ ಪಾಸ್‌ಪೋರ್ಟ್‌ ಜಾಲದ ಸುಳಿವು ಲಭ್ಯವಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

’ಸಾದಿಕ್‌ ಪಾಷಾ ಹಾಗೂ ಇತರರ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡ ದಕ್ಷಿಣ ವಿಭಾಗದ ಮೂವರು ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ದಾಖಲೆಗಳು, ಕಾರುಗಳು ಹಾಗೂ ಇತರೆ ವಸ್ತುಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ’ ಎಂದರು.

20 ಮಂದಿಗೆ ಪಾಸ್‌ಪೋರ್ಟ್: ‘ವಿದೇಶಿ ಪ್ರಜೆಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳ 20 ಮಂದಿಗೆ ಈಗಾಗಲೇ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಪಾಸ್‌ಪೋರ್ಟ್ ಮಾಡಿಕೊಡಲು ತಯಾರಿ ನಡೆಸುತ್ತಿದ್ದರೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. ಪಾಸ್‌ಪೋರ್ಟ್‌ ಜಪ್ತಿ ಮಾಡಿ, ಅವುಗಳನ್ನು ರದ್ದು ಮಾಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ಶ್ರೀಲಂಕಾ ಪ್ರಜೆಗಳು, ತಲಾ ₹ 1.50 ಲಕ್ಷದಿಂದ ₹ 2 ಲಕ್ಷ ನೀಡಿದ್ದರು. ಉಳಿದಂತೆ ಅಪರಾಧ ಹಿನ್ನೆಲೆಯುಳ್ಳವರು, ₹ 2 ಲಕ್ಷಕ್ಕೂ ಹೆಚ್ಚು ಹಣ ನೀಡಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ಉದ್ಯೋಗಕ್ಕಾಗಿ ಪಾಸ್‌ಪೋರ್ಟ್: ‘ಹೊರದೇಶಗಳಲ್ಲಿ ಕೆಲಸ ಮಾಡಲು ಮುಂದಾಗಿದ್ದ ಶ್ರೀಲಂಕಾ ಪ್ರಜೆಗಳು, ಭಾರತೀಯ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಇಚ್ಛಿಸಿದ್ದರು. ಭಾರತೀಯರೆಂದು ಹೇಳಿಕೊಂಡು ಹೊರದೇಶದಲ್ಲಿ ಕೆಲಸ ಮಾಡುವುದು ಅವರ ಉದ್ದೇಶವಾಗಿತ್ತು. ಅವರೆಲ್ಲರೂ ಬೆಂಗಳೂರಿನ ಪ್ರಮುಖ ಆರೋಪಿ ಅಮಿನ್ ಶೇಠ್ ಹಾಗೂ ಇತರರನ್ನು ಸಂಪರ್ಕಿಸಿ ಹಣ ನೀಡಿ ಪಾಸ್‌ಪೋರ್ಟ್ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಲೆ, ಸುಲಿಗೆ, ದರೋಡೆ ಹಾಗೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಸಹ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದರು. 36 ಕಡೆ ಕಳ್ಳತನ ಮಾಡಿದ್ದ ಆರೋಪಿ ಸಾದಿಕ್ ಪಾಷಾ ಬಳಿಯೂ ಪಾಸ್‌ಪೋರ್ಟ್ ಇದೆ. ಸದ್ಯ ಸಾದಿಕ್ ಪಾಷಾ ತಲೆಮರೆಸಿಕೊಂಡಿದ್ದಾನೆ‘ ಎಂದು ಮೂಲಗಳು ತಿಳಿಸಿವೆ.

ಜೈಲಿಗೂ ಹೋಗಿ ಬಂದಿದ್ದ ಪ್ರಮುಖ ಆರೋಪಿಗಳು: ‘ಬಂಧಿತ ಪ್ರಮುಖ ಆರೋಪಿ ಅಮಿನ್ ಶೇಠ್ ಹಾಗೂ ಇತರರು, ನಕಲಿ ದಾಖಲೆ ಸೃಷ್ಟಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಇವರ ವಿರುದ್ಧ ಅನ್ನಪೂರ್ಣೇಶ್ವರಿನಗರ, ಜಯನಗರ, ಡಿ.ಜೆ.ಹಳ್ಳಿ, ಪುಲಿಕೇಶಿನಗರ, ಭಾರತಿ ನಗರ, ಸಿಟಿ ಮಾರ್ಕೆಟ್ ಹಾಗೂ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣಗಳೂ ದಾಖಲಾಗಿದ್ದವು. ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದರು’ ಎಂದು ಮೂಲಗಳು ಹೇಳಿವೆ.

ನಕಲಿ ದಾಖಲೆ ಸೃಷ್ಟಿಗೆ ಎಂಜಿನಿಯರ್ ಸಹಕಾರ: ‘ಪಾಸ್‌ಪೋರ್ಟ್ ಅಗತ್ಯವಿರುವವರನ್ನು ಸಂಪರ್ಕಿಸುತ್ತಿದ್ದ ಪ್ರಮುಖ ಆರೋಪಿಗಳು, ಮುಂಗಡವಾಗಿ ಹಣ ಪಡೆಯುತ್ತಿದ್ದರು. ಅಂಕಪಟ್ಟಿ, ಆಧಾರ್, ಮತದಾನ ಗುರುತಿನ ಚೀಟಿ, ಶಾಲಾ ವರ್ಗಾವಣಾ ಪ್ರಮಾಣ ಪತ್ರ, ಚಾಲನಾ ಪರವಾನಗಿ ಪತ್ರ, ವಿಳಾಸ ದೃಢೀಕರಣ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಈ ಕೃತ್ಯಕ್ಕೆ ಸಾಫ್ಟ್‌ವೇರ್‌ ಎಂಜಿನಿಯರೊಬ್ಬ ಸಹಕಾರ ನೀಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪರಿಶೀಲನೆ ವೇಳೆ ನಿರ್ಲಕ್ಷ್ಯ: ಇಬ್ಬರು ಪೊಲೀಸರು ಅಮಾನತು

ಪಾಸ್‌ಪೋರ್ಟ್ ಪರಿಶೀಲನೆ ವೇಳೆ ನಿರ್ಲಕ್ಷ್ಯ ವಹಿಸಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಬಸವನಗುಡಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಮಧು ಹಾಗೂ ಕಾನ್‌ಸ್ಟೆಬಲ್‌ ಜೆ. ವಸಂತ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
‘ಆರೋಪಿಗಳು ನಕಲಿ ದಾಖಲೆ ಬಳಸಿಕೊಂಡು ಪಾಸ್‌ಪೋರ್ಟ್ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ನಿಗದಿತ ದಿನದಂದು ಪರಿಶೀಲನೆ ನಡೆಸಲೆಂದು ಪೊಲೀಸರು, ಅರ್ಜಿದಾರರ ವಿಳಾಸಕ್ಕೆ ಹೋಗುತ್ತಿದ್ದರು. ಪೊಲೀಸರನ್ನು ಭೇಟಿಯಾಗುತ್ತಿದ್ದ ಆರೋಪಿಗಳು, ಯಾರದ್ದೂ ಮನೆ ತೋರಿಸಿ ತಮ್ಮದೇ ಮನೆ ಎನ್ನುತ್ತಿದ್ದರು. ಕೆಲ ನಕಲಿ ದಾಖಲೆಗಳನ್ನೂ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ಸೂಕ್ತ ರೀತಿಯಲ್ಲಿ ದಾಖಲೆ ಪರಿಶೀಲನೆ ಹಾಗೂ ಅಕ್ಕ–ಪಕ್ಕದ ಮನೆಯವರನ್ನು ವಿಚಾರಿಸದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಯಾರದ್ದೂ ಮನೆ ಮುಂದೆ ಆರೋಪಿಗಳನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವಿಳಾಸ ತಪ್ಪಿದ್ದರೂ ಸರಿ ಎಂಬುದಾಗಿ ಟ್ಯಾಬ್‌ನಲ್ಲಿ ನಮೂದಿಸುತ್ತಿದ್ದರು. ಅದು ನಿಜವೆಂದು ನಂಬಿ ಪಾಸ್‌ಪೋರ್ಟ್ ಅಧಿಕಾರಿಗಳು, ಆರೋಪಿಗಳಿಗೆ ಪಾಸ್‌ಪೋರ್ಟ್ ಮಂಜೂರು ಮಾಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

’ತಪ್ಪು ಗೊತ್ತಾದ ಮೇಲೆ ದೂರು ದಾಖಲಿಸಿದ್ದ ಕಾನ್‌ಸ್ಟೆಬಲ್‘

‘ಆರೋಪಿ ಸಾದಿಕ್ ಪಾಷಾ ಹೆಸರನ್ನು ಮೊಹಮ್ಮದ್ ಕರೀಂ ಎಂಬುದಾಗಿ ಬದಲಾಯಿಸಿದ್ದ ಆರೋಪಿಗಳು, ಅದೇ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಪಾಸ್‌ಪೋರ್ಟ್ ಕೋರಿ ಪ್ರಾದೇಶಿಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಸೇವಾ ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಿದ್ದ ಕೇಂದ್ರದ ಅಧಿಕಾರಿಗಳು, ಅರ್ಜಿದಾರರ ಹಿನ್ನೆಲೆ ಹಾಗೂ ವಿಳಾಸ ಪರಿಶೀಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದರು‘ ಎಂದು ಪೊಲೀಸ್ ಅಧಿಕಾರಿ ಹೇಳಿದರು.

’ಪರಿಶೀಲನೆ ಜವಾಬ್ದಾರಿ ವಹಿಸಿಕೊಂಡಿದ್ದ ಕಾನ್‌ಸ್ಟೆಬಲ್ ಮಧುಸೂದನ್, ಅರ್ಜಿದಾರರ ವಿಳಾಸಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಪ್ರಮುಖ ಆರೋಪಿ ಅಮಿನ್, ನವಾಬ್ ಹಾಗೂ ಹೈದರ್, ಪಕ್ಕದ ನಿವಾಸಿಗಳೆಂದು ಪರಿಚಯಿಸಿಕೊಂಡಿದ್ದರು. ಮೊಹಮ್ಮದ್ ಕರೀಂ ತಮಗೆ ಪರಿಚಯವೆಂದು ಹೇಳಿದ್ದರು. ಅದನ್ನು ನಿಜವೆಂದು ತಿಳಿದ ಮಧುಸೂದನ್, ಪಾಸ್‌ಪೋರ್ಟ್ ಮಂಜೂರು ಮಾಡಬಹುದೆಂದು ತಂತ್ರಾಂಶ ನಮೂದಿಸಿದ್ದರು. ನಂತರವೇ ಆರೋಪಿಗೆ ಪಾಸ್‌ಪೋರ್ಟ್ ಬಂದಿತ್ತು.‘

’ಹಾಸನ ಪೊಲೀಸರು ಠಾಣೆಗೆ ಬಂದು ಸಾದಿಕ್ ಪಾಷಾ ತೋರಿಸಿದಾಗ, ಕಾನ್‌ಸ್ಟೆಬಲ್‌ಗೆ ತಪ್ಪು ಅರಿವಾಗಿತ್ತು. ಕೂಡಲೇ ಅವರು ಎಫ್‌ಐಆರ್ ದಾಖಲಿಸಿದ್ದರು. ತನಿಖೆ ಕೈಗೊಂಡಾಗ, ಕಾನ್‌ಸ್ಟೆಬಲ್ ನಿರ್ಲಕ್ಷ್ಯವೂ ಎದ್ದು ಕಂಡಿತು. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT