ಜಾಗೃತಿಗಾಗಿ ಬಿಬಿಎಂಪಿಯಿಂದ ಪರಿಸರಸ್ನೇಹಿ ಗಣೇಶ ವಿತರಣೆ

7

ಜಾಗೃತಿಗಾಗಿ ಬಿಬಿಎಂಪಿಯಿಂದ ಪರಿಸರಸ್ನೇಹಿ ಗಣೇಶ ವಿತರಣೆ

Published:
Updated:
Deccan Herald

ಬೆಂಗಳೂರು: ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಬ್ಬನ್‌ ಉದ್ಯಾನದಲ್ಲಿ ಭಾನುವಾರ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್‌ ಆರ್‌.ಸಂಪತ್‌ರಾಜ್‌ ಹಾಗೂ ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ ಅವರು ಸಾರ್ವಜನಿಕರಿಗೆ ಮಣ್ಣಿನಿಂದ ತಯಾರಿಸಿದ 300ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿತರಿಸಿದರು. 

ಸಂಪತ್‌ರಾಜ್‌ ಮಾತನಾಡಿ, ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣಪನ ಮೂರ್ತಿಗಳನ್ನು ಪೂಜೆಗೆ ಬಳಸಬಾರದು. ಇವುಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇಂಥಹ ಮೂರ್ತಿಗಳನ್ನು ಮಾರಾಟ ಮಾಡದಂತೆಯೂ ಜಾಗೃತಿ ಮೂಡಿಸಿದ್ದೇವೆ’ ಎಂದರು. 

ಪದ್ಮಾವತಿ ನರಸಿಂಹ ಮೂರ್ತಿ ಮಾತನಾಡಿ, ‘ಪಿಒಪಿಯಿಂದ ತಯಾರಿಸಿರುವ ಗಣೇಶನ ಮೂರ್ತಿಗಳು ಬಣ್ಣಬಣ್ಣಗಳಿಂದ ಕೂಡಿರುತ್ತವೆ. ಇಂತಹ ವಿಗ್ರಹಗಳ ಬಗ್ಗೆ ಆಕರ್ಷಿತರಾಗುವ ಮಕ್ಕಳು ಅದನ್ನೇ ಖರೀದಿಸುವಂತೆ ಪೋಷಕರನ್ನು ಒತ್ತಾಯಿಸುತ್ತಾರೆ. ಪಿಒಪಿ ಮೂರ್ತಿಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು’ ಎಂದು ಕಿವಿಮಾತು ಹೇಳಿದರು.

‘ಪಾಲಿಕೆ ಕೇಂದ್ರ ಕಚೇರಿ ಪ್ರಾಂಗಣದಲ್ಲಿರುವ ಗಾಜಿನ ಮನೆಯಲ್ಲಿ ನಾಳೆಯಿಂದ ಪರಿಸರ ಸ್ನೇಹಿ ಗಣಪ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಿದ್ದೇವೆ’ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದರು.

ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಮಹತ್ವ ಸಾರುವ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಾಗೃತಿ ಓಟ ನಡೆಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !