ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಿಲ್‌ ಪಾವತಿ ವಿಳಂಬ: ಕಾಮಗಾರಿ ಸ್ಥಗಿತದ ಎಚ್ಚರಿಕೆ

ಡಿಸಿಎಂ ವರದಿ ಕೇಳಿರುವುದರಿಂದ ಇನ್ನಷ್ಟು ತಡ; ಗುತ್ತಿಗೆದಾರರ ಆತಂಕ
Published 4 ಆಗಸ್ಟ್ 2023, 23:30 IST
Last Updated 4 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿ ಪೂರ್ಣಗೊಂಡಿರುವ ಬಿಲ್‌ಗಳ ಹಣ ಪಾವತಿ ಮಾಡಲು ಬಿಬಿಎಂಪಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನೂ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಬಾಕಿ ಬಿಲ್‌ ಪಾವತಿಸುವಂತೆ ಒತ್ತಾಯಿಸಿ ಜೂನ್‌ನಲ್ಲಿ ಕಾಮಗಾರಿ ನಿಲ್ಲಿಸುವುದಾಗಿ ಸಂಘ ಹೇಳಿತ್ತು. ನಂತರ ಜುಲೈ 15ರಿಂದ ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ, ಪ್ರತಿಭಟನೆ, ಕಾಮಗಾರಿ ಸ್ಥಗಿತ ಯಾವುದನ್ನೂ ಮಾಡುವುದಿಲ್ಲ ಎಂದು ಜುಲೈ 22ರಂದು ಹೇಳಿದ್ದರು. ಆದರೆ, ಡಿಸಿಎಂ ಭರವಸೆಯೂ ಈಡೇರಲಿಲ್ಲ. ಬಾಕಿ ಬಿಲ್‌ ಪಾವತಿಯಾಗದ್ದರಿಂದ ಮತ್ತೆ ಎಲ್ಲ ಕಾಮಗಾರಿಗಳನ್ನು ಆ.7ರಿಂದ ಸ್ಥಗಿತಗೊಳಿಸುವುದಾಗಿ ಸಂಘ ತಿಳಿಸಿದೆ.

‘ಬಿಬಿಎಂಪಿ ಬಾಕಿ ಬಿಲ್ ಪಾವತಿ ಮಾಡದೇ ಹಣ ಪಾವತಿ ವಿಳಂಬ ಮಾಡುತ್ತಿರುವ ಕಾರಣ ಸೋಮವಾರದಿಂದ ಎಲ್ಲ ವಿಭಾಗಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ. ಹಣ ಬಿಡುಗಡೆ ಮಾಡುವವರೆಗೂ ಎಲ್ಲಾ ಕಾಮಗಾರಿಗಳೂ ಸಂಪೂರ್ಣ ಸ್ಥಗಿತಗೊಳಿಸಲಾಗುವುದು’ ಎಂದು ‌ಬಿಬಿಎಂಪಿ ಗುತ್ತಿಗೆದಾರರ ಸಂಘದ ಪ್ರಕಟಣೆ ತಿಳಿಸಿದೆ.

ವರದಿಯಿಂದ ಇನ್ನಷ್ಟು ವಿಳಂಬ: ಬಿಬಿಎಂಪಿ ಕಾಮಗಾರಿಗಳ ಕುರಿತಂತೆ ಟೆಂಡರ್‌, ಕಾಮಗಾರಿ, ರನ್ನಿಂಗ್ ಬಿಲ್‌, ಕೆಲಸ ಪೂರ್ಣಗೊಂಡಿರುವ ಬಗ್ಗೆ 2019ರಿಂದ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಳಿದ್ದಾರೆ. ಆ.15ರೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಪ್ರತಿಯೊಂದು ಕಾಮಗಾರಿಯ 26 ಮಾಹಿತಿಯನ್ನು ಪರಿಶೀಲಿಸಿದ ನಂತರ ಬಿಲ್‌ ಪಾವತಿಯ ಪ್ರಕ್ರಿಯೆ ಆರಂಭವಾಗುತ್ತದೆ.

ಕಾಮಗಾರಿಗೆ ಶಿಫಾರಸು ಮಾಡಿದವರು ಯಾರು, ಸ್ಥಳ ಪರಿಶೀಲನೆ, ತಾಂತ್ರಿಕ ವರದಿ ದಿನಾಂಕ, ತಯಾರಿಸಿದವರು, ಯೋಜನಾ ವರದಿ ತಯಾರಿಸಿದ ಸಮಾಲೋಚಕರು, ಡಿಪಿಆರ್‌, ಟೆಂಡರ್‌ಗೆ ನೀಡಿದ ಕಾಲಾವಕಾಶ, ಪೂರಕ ನಕ್ಷೆ, ವಿವರಣೆ, ತಾಂತ್ರಿಕ ವರದಿ, ವಿನ್ಯಾಸ, ಇವುಗಳಿಗೆ ಅನುಮೋದನೆ ನೀಡಿದ ಅಧಿಕಾರಿ, ರಸ್ತೆ ಇತಿಹಾಸ ಪುಸ್ತಕದಲ್ಲಿ ಮಾಹಿತಿ ನಮೂದಿಸಿರುವುದು, ದೋಷಮುಕ್ತ ಅಥವಾ ನಿರ್ವಹಣೆ ಅವಧಿಯಲ್ಲಿರುವ ರಸ್ತೆಯ ಕಾಮಗಾರಿ, ಕಾಲುವೆಗಳಲ್ಲಿ ಹೂಳು ವಿಲೇವಾರಿ, ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಯೋಜನಾ ವರದಿ ಮೊದಲು ಕೈಗೊಂಡಿರುವ ಮಾನದಂಡಗಳು, ಐಆರ್‌ಸಿ ಪ್ರಕಾರ ನಿರ್ಮಾಣವಾಗಿರುವ ವರದಿ, ಚರಂಡಿ ವಿನ್ಯಾಸಗಳನ್ನು ತಯಾರಿಸಿದವರು, ಅದಕ್ಕೆ ಅನುಮೋದನೆ ನೀಡಿದವರ ಹೆಸರು, ಪದನಾಮವನ್ನು ದಿನಾಂಕ ಸಹಿತ ನೀಡುವಂತೆ ಡಿಸಿಎಂ ಕೇಳಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ಅವುಗಳ ಅವಧಿ, ಬಿಡ್ಡುದಾರರು, ಅನುಮೋದನೆಗಳ ವಿವರ ಪ್ರತ್ಯೇಕವಾಗಿ ಕೇಳಿದ್ಧಾರೆ. ಗುತ್ತಿಗೆದಾರರ ಅರ್ಹತೆ, ವಿನಾಯಿತಿ, ನಿಯಮಾವಳಿಯಲ್ಲಿ ಬದಲಾವಣೆ ಮಾಡಿದರುವುದು, ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ, ಕಾರ್ಯಾದೇಶ, ಕಾಮಗಾರಿ ಪ್ರಾರಂಭ, ಪೂರ್ಣಗೊಳಿಸಿದ ದಿನ, ಅಂತಿಮ ಬಿಲ್ಲು ನೀಡಿದ ವಿವರವನ್ನು ಕೇಳಿದ್ದಾರೆ.

ಕಾಮಗಾರಿಯ ಗುಣಮಟ್ಟವನ್ನು ಯಾವಾಗ, ಯಾವ ಅಧಿಕಾರಿ ಮಾಡಿದ್ದಾರೆ, ಅದರ ವರದಿ, ನಿಯಮಾವಳಿಗಳನ್ನು ಪಾಲಿಸಲಾಗಿದೆಯೇ, ಸ್ಥಳ ಪರಿಶೀಲನೆ ಫೋಟೊ, ವಿಡಿಯೊ, ಡಾಂಬರು ಉಷ್ಣಾಂಶ ಪರೀಕ್ಷೆ ಮಾಡಿದವರು ಯಾರು, ಕಾಮಗಾರಿಗಳ ಆರಂಭದಿಂದ ಕೊನೆಯವರೆಗೆ ನಿರ್ವಹಣೆ ಮಾಡಿದ ಅಧಿಕಾರಿಗಳ ಹೆಸರು ಹಾಗೂ ವಿವರ ನೀಡುವಂತೆ ಡಿಸಿಎಂ ಸೂಚಿಸಿದ್ದಾರೆ.

‘ಈ ಎಲ್ಲ ಮಾಹಿತಿಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಆ.15ರೊಳಗೆ ನೀಡುವುದು ಅನುಮಾನ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಬಿಲ್‌ ಪಾವತಿಸುವುದಿಲ್ಲ. ಹೀಗಾಗಿ ನಾವು ಹೋರಾಟ ಮಾಡಲೇಬೇಕಿದೆ’ ಎಂದು ಗುತ್ತಿಗೆದಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT