ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ: ಸ್ಥಳ ಪರಿಶೀಲನೆ ವೇಳೆ ಬೆಚ್ಚಿ ಬಿದ್ದ ಸಮಿತಿ

ಕಾಮಗಾರಿ ನಡೆದ ಸ್ಥಳ ಗುರುತಿಸಲೂ ಪರದಾಡಿದ್ದ ಅಧಿಕಾರಿಗಳು, ಕಡತದ ಅಂಶಗಳಿಗೂ ವಾಸ್ತವಕ್ಕೂ ಅಜಗಜಾಂತರ
Last Updated 17 ಸೆಪ್ಟೆಂಬರ್ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ಮೂಲಸೌಕರ್ಯ ಕಾಮಗಾರಿಯ ಅಂದಾಜುಪಟ್ಟಿಯಲ್ಲಿ ಉಲ್ಲೇಖಿಸಿದ ಸ್ಥಳವೇ ಬೇರೆ, ಕಾಮಗಾರಿ ಅನುಷ್ಠಾನಗೊಳಿಸಿದ ಸ್ಥಳವೇ ಬೇರೆ. ಅಂದಾಜುಪಟ್ಟಿಯಲ್ಲಿ ನಮೂದಿಸಿದ್ದ ನೀಡಿದ ಪರಿಕರಗಳ ಬದಲು ಬೇರೆ ಪರಿಕರಗಳ ಬಳಕೆ...

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಸಮಿತಿ ಕಾಮಗಾರಿ ನಡೆದ ಸ್ಥಳಗಳ ಪರಿಶೀಲನೆಗೆ ತೆರಳಿದಾಗ ಕಂಡು ಬಂದ ಅಂಶಗಳಿವು.

ಸಮಿತಿಯು ಮೂರು ವಿಭಾಗಗಳಲ್ಲಿ ಒಟ್ಟು 4,958 ಕಡತ ಪರಿಶೀಲನೆ ನಡೆಸಿತ್ತು. ಈ ಪೈಕಿ ರಾಜರಾಜೇಶ್ವರಿ ನಗರ ಹಾಗೂ ಮಲ್ಲೇಶ್ವರ ವಿಭಾಗಗಳಲ್ಲಿ ಕಾಮಗಾರಿಗಳು ನಡೆದ ಒಟ್ಟು 40 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕಡತದಲ್ಲಿರುವ ಅಂಶಗಳಿಗೂ ಅಲ್ಲಿನ ವಾಸ್ತವಕ್ಕೂ ಅಜಗಜಾಂತರವಿತ್ತು. ಈ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳನ್ನು ಕಂಡು ಸಮಿತಿ ಸದಸ್ಯರು ದಂಗಾಗಿ ಹೋಗಿದ್ದರು.

ಒಪ್ಪಂದದಲ್ಲಿ ನಮೂದಾಗಿದ್ದ ಕಾಮಗಾರಿಯ ಬದಲು ಬೇರಾವುದೋ ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸಿರುವುದು ಹಾಗೂ ಕೂಲಂಕಷವಾಗಿ ಪರಿಶೀಲಿಸದೆಯೇ ಕಡತಗಳಿಗೆ ಮೇಲಧಿಕಾರಿಗಳು ಸಹಿ ಹಾಕಿದ್ದು ಸ್ಥಳ ತಪಾಸಣೆ ವೇಳೆ ಕಂಡುಬಂದಿತ್ತು. ಒಳಚರಂಡಿ ಅಭಿವೃದ್ಧಿಗೆ ಮಂಜೂರಾತಿ ಪಡೆದ ಕಡೆ ಡಾಂಬರೀಕರಣ ನಡೆಸಿದ್ದೂ ಪತ್ತೆಯಾಗಿತ್ತು.

ಅನೇಕ ಕಡೆ ಯಾವ ಸ್ಥಳದಲ್ಲಿ ಕಾಮಗಾರಿ ನಡೆದಿದೆ ಎಂಬುದನ್ನು ತೋರಿಸಲು ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದರು. ಕೆಲವೊಮ್ಮೆ ‌‌‌‌ಯಾವುದೇ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಲು ಸಾಧ್ಯವಾಗದೆ ಸಮಿತಿ ಸದಸ್ಯರು ದಿನವಿಡೀ ಸುತ್ತಾಡಿ ಬರಿಗೈಯಲ್ಲಿ ಹಿಂತಿರುಗಬೇಕಾಯಿತು. ಅಧಿಕಾರಿಗಳು ಏನಾದರೂ ಸಬೂಬು ಹೇಳಿ ಸ್ಥಳ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದೂ ಸಮಿತಿ ವರದಿಯಲ್ಲಿ ತಿಳಿಸಿದೆ.

ಸ್ಥಳ ತನಿಖೆ ನಡೆಸಲು ಪಾಲಿಕೆ ಆರಂಭದಲ್ಲಿ ವಾಹನ ವ್ಯವಸ್ಥೆ ಮಾಡಿತ್ತು. 2017ರ ನವೆಂಬರ್‌ನಲ್ಲಿ ಅದನ್ನೂ ಹಿಂಪಡೆಯಲಾಯಿತು ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ.

ಪಾಲಿಕೆ ಅಸಹಕಾರ– ಸಮಿತಿ ಅಸಮಾಧಾನ

ತನಿಖೆಗೆ ಪಾಲಿಕೆ ಅಧಿಕಾರಿಗಳು ಸಹಕಾರ ನೀಡದ ಬಗ್ಗೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಹೇಗೆ ನಡೆದುಕೊಂಡರು ಎಂಬ ಬಗ್ಗೆ ವರದಿಯಲ್ಲೂ ವಿವರವಾಗಿ ಉಲ್ಲೇಖಿಸಿದೆ.

ತನಿಖೆ ವೇಳೆ ಸಮನ್ವಯ ಸಾಧಿಸುವ ಸಲುವಾಗಿ ಪೂರ್ಣಾವಧಿ ನೋಡಲ್‌ ಅಧಿಕಾರಿಯನ್ನು ನಿಯೋಜಿಸುವಂತೆ 2016ರ ನ.15 ಹಾಗೂ ಡಿ 22ರಂದು ಪಾಲಿಕೆ ಆಯುಕ್ತರನ್ನು ಕೋರಿದ್ದೆವು. ಅವರು ನಿಯೋಜಿಸಿದ ನೋಡಲ್‌ ಅಧಿಕಾರಿ ಸಮಿತಿಯ ಸಲಹೆ ಸೂಚನೆಗಳನ್ನು ಪಾಲಿಸಲಿಲ್ಲ ಎಂದು ಸಮಿತಿ ಹೇಳಿಕೊಂಡಿದೆ.

ತನಿಖೆ ವೇಳೆ ಸಮಿತಿ ಅಳತೆ ಪುಸ್ತಕ, ಟೆಂಡರ್‌ ಅಧಿಸೂಚನೆಯ ದಾಖಲೆ, ಬಿಲ್‌ ಪುಸ್ತಕಗಳನ್ನು ಹಾಗೂ ಕಾಮಗಾರಿಗೆ ಬಳಸಿದ ಪರಿಕರಗಳ ಕುರಿತ ಮಾಹಿತಿಯನ್ನು ಕೋರಿದರೂ ಸಕಾಲದಲ್ಲಿ ಒದಗಿಸಲಿಲ್ಲ. ಈ ಬಗ್ಗೆ ಅನೇಕ ಪತ್ರಗಳನ್ನು ಬರೆದರೂ ಬಿಬಿಎಂಪಿ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಪಾಲಿಕೆ ಅಧಿಕಾರಿಗಳ ಜೊತೆ ಸಮಿತಿ 19 ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ನೀಡಿದ ಬಹುತೇಕ ಸೂಚನೆಗಳನ್ನು ಪಾಲಿಕೆ ಅಧಿಕಾರಿಗಳು ಪಾಲಿಸಿಲ್ಲ. ಈ ಸಭೆಗಳಿಗೆ ಪ್ರತಿ ಬಾರಿಯೂ ಕಾಮಗಾರಿಯ ಮಾಹಿತಿ ಇಲ್ಲದ ಹೊಸ ಅಧಿಕಾರಿಗಳನ್ನೇ ಕಳುಹಿಸ ಲಾಗುತ್ತಿತ್ತು ಎಂದೂ ಸಮಿತಿ ದೂರಿದೆ.

***

ಮಹಾನಗರ ಪಾಲಿಕೆಯ ‘ಬ್ರಹ್ಮಾಂಡ ಭ್ರಷ್ಟಾಚಾರ’ ಸರಣಿಗೆ ಓದುಗರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿ ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ

‘ಸ್ವಚ್ಛವಾಗಲಿ ಪಾಲಿಕೆ’

ನಗರವನ್ನು ಅಭಿವೃದ್ಧಿ ಮಾಡಬೇಕಾದ ಪವಿತ್ರ ಸ್ಥಾನದಲ್ಲಿರುವ ಪಾಲಿಕೆಯು ಇಂದು ಕಾಮಗಾರಿ ಹೆಸರಲ್ಲಿ ಅಕ್ರಮ, ಲೂಟಿ, ವಂಚನೆಕೋರರ ತಾಣವಾಗಿ ಮಾರ್ಪಟ್ಟಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಇಂತಹವರಿಂದ ಮಲಿನಗೊಂಡಿರುವ ಪಾಲಿಕೆ ಮೊದಲು ಸ್ವಚ್ಛವಾಗಲಿ.

ಮಂಜುನಾಥ್‌,ಯಲಹಂಕ

***

‘ಗುಣಮಟ್ಟ ದೃಢೀಕರಿಸಲಿ’

ಪಾಲಿಕೆಯಿಂದ ನಡೆಯುವ ಕಾಮಗಾರಿಗಳ ಬಾಳಿಕೆ ಅವಧಿ ಹಾಗೂ ಗುಣಮಟ್ಟವನ್ನು ಅದರ ಜವಾಬ್ದಾರಿ ಹೊತ್ತ ಎಂಜಿನಿಯರ್‌ ಮತ್ತು ಗುತ್ತಿಗೆದಾರರೇ ದೃಢೀಕರಿಸಬೇಕು. ಒಂದು ನಿಗದಿತ ಅವಧಿಗೂ ಮುನ್ನ ಕಾಮಗಾರಿ ಹಾಳಾ
ದರೆ ಅದಕ್ಕೆ ಗುತ್ತಿಗೆದಾರರನ್ನೇ ನೇರ ಹೊಣೆ ಮಾಡಬೇಕು. ಈ ಭಯದಲ್ಲಾದರೂ ಲೂಟಿ ಕಡಿಮೆ ಆಗಲಿದೆ.

ಗಂಗಾಧರ್‌, ಹೆಣ್ಣೂರು

***

‘ಪರಿಶೀಲನೆಗೂ ಬನ್ನಿ’

ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಕಾಮಗಾರಿಯ ಉದ್ಘಾಟನೆಗೆ ಮಾತ್ರ ಬರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು, ಕಾಮಗಾರಿ ನಡೆಯುವಾಗಲೇ ಏಕೆ ಒಮ್ಮೆಯೂ ಅತ್ತ ಸುಳಿಯುವುದಿಲ್ಲ?

ರಾಮಕೃಷ್ಣ, ಬೆಂಗಳೂರು

***

‘ಇನ್ನಷ್ಟು ತನಿಖೆಯಾಗಲಿ’

ಪಾಲಿಕೆಯಲ್ಲಿ ತುಂಬಿ ತುಳುಕುತ್ತಿರುವ ಅಕ್ರಮಗಳ ಮಟ್ಟ ಹಾಕಲು ಇನ್ನಷ್ಟು ಆಳವಾಗಿ ತನಿಖೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಬೇಕು. ಇಲ್ಲದಿದ್ದರೆ ಅಭಿವೃದ್ಧಿ ಹೆಸರಲ್ಲಿ ಅಧಿಕಾರಿಗಳು ಹಣ ವೃದ್ಧಿ ಮಾಡಿಕೊಳ್ಳುತ್ತಾರೆ.

ಶಾಮ್ ರಾವ್‌, ರಾಮಮೂರ್ತಿನಗರ

***

‘ಕಳ್ಳರ ಸಂತೆಯೇ’

ಸಮಸ್ಯೆಗಳನ್ನು ಬಗೆಹರಿಸುವ ಸ್ಥಾನದಲ್ಲಿ ಕೂತವರು ಈ ಮಟ್ಟದ ಭ್ರಷ್ಟಾಚಾರಗಳಲ್ಲಿ ತೊಡಗಿದರೆ ಇಲ್ಲಿ ಜನನಾಯಕರಿಗಿಂತ ಕಳ್ಳರು, ಖದೀಮರು, ಲೂಟಿಕೋರರೇ ಹೆಚ್ಚಾಗಿ ಇರುವಂತಿದೆ. ಇದನ್ನು ಗಮನಿಸಿದರೆ ಪಾಲಿಕೆ ಕಳ್ಳರ ಸಂತೆಯಾಗಿದೆಯಾ? ಎಂಬ ಅನುಮಾನ ಮೂಡುತ್ತಿದೆ. ಸರ್ಕಾರದ ಅಧೀನ ಸಂಸ್ಥೆಯಲ್ಲೇ ಈ ಅವ್ಯವಸ್ಥೆ
ಇರುವುದು ದುರಂತ.

ಗಿ.ಚ. ಸ್ವಾಮಿ, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT