ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್: ಆಡಳಿತ ಪಕ್ಷದ ಪ್ರಮುಖರಿಗೆ ಸಿಂಹಪಾಲು

ಆಯವ್ಯಯದಲ್ಲಿ
Last Updated 18 ಫೆಬ್ರುವರಿ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟವು ಸೋಮವಾರ ಮಂಡಿ ಸಿರುವ ಪಾಲಿಕೆಯ 2019–20ನೇ ಸಾಲಿನ ಆಯವ್ಯಯದಲ್ಲಿ ಆಡಳಿತ ಪಕ್ಷದ ಪ್ರಮುಖರ ವಾರ್ಡ್‌ಗಳಿಗೆ ಸಿಂಹಪಾಲು ನೀಡಲಾಗಿದೆ.

ಮೇಯರ್‌ ವಿವೇಚನಾ ನಿಧಿಗೆ ₹175 ಕೋಟಿ ಕಾಯ್ದಿರಿಸಲಾಗಿದೆ. ಅಲ್ಲದೇ ಅವರು ಪ್ರತಿನಿಧಿಸುವ ಜಯನಗರ ವಾರ್ಡ್‌ಗೆ (ನಂ.153) 14ನೇ ಹಣಕಾಸು ಆಯೋಗದ ಅನುದಾನದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ ₹50 ಕೋಟಿ ಮೀಸಲಿಡಲಾಗಿದೆ.

ಉಪಮೇಯರ್‌ ಭದ್ರೇಗೌಡ ಅವರ ವಿವೇಚನಾ ನಿಧಿಗೆ ₹50 ಕೋಟಿ ಹಾಗೂ ಅವರು ಪ್ರತಿನಿಧಿಸುವ ನಾಗಪುರ ವಾರ್ಡ್‌ಗೆ (ನಂ.67) 14ನೇ ಹಣಕಾಸು ಆಯೋಗದ ಅನುದಾನದಲ್ಲಿ ₹10 ಕೋಟಿ ಒದಗಿಸಲಾಗಿದೆ. 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್‌ಗೆ (ನಂ.33) ₹7 ಕೋಟಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿನಿಧಿಸುವ ಕಾಚರಕನಹಳ್ಳಿ (ನಂ 32) ವಾರ್ಡ್‌ಗೆ ಹಾಗೂ ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌ ಪ್ರತಿನಿಧಿಸುವ ಕಾವಲ್‌ ಭೈರಸಂದ್ರ ವಾರ್ಡ್‌ಗೆ ತಲಾ ₹5 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವರ ವಿವೇಚನೆ ಅಡಿ ವೆಚ್ಚ ಮಾಡುವುದಕ್ಕೆ ₹150 ಕೋಟಿ ಮೀಸಲಿಡಲಾಗಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಪ್ರತಿನಿಧಿಸುವ ವೃಷಭಾವತಿ ನಗರ ವಾರ್ಡ್‌ಗೆ (ನಂ 102) ಭಾರೀ ಅನುದಾನ ಹಂಚಿಕೆ ಮಾಡಲಾಗಿದೆ. 14ನೇ ಹಣಕಾಸು ಆಯೋಗದ ಅನುದಾನದಲ್ಲಿ ₹8 ಕೋಟಿ ನೀಡ ಲಾಗಿದೆ. ಇತರೆ ಮೂಲಸೌಕರ್ಯಗಳಿಗೆ ಒಟ್ಟು₹ 47 ಕೋಟಿ ನೀಡಲಾಗಿದೆ.

ಆಡಳಿತ ಸುಧಾರಣೆಗೆ ಕ್ರಮ: ಪಾಲಿಕೆ ಆಡಳಿತ ಸುಧಾರಣೆ ಸಲು ವಾಗಿ ಬಜೆಟ್‌ನಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಪ್ರಕಟಿಸಲಾಗಿದೆ. ಅಧಿಕಾರಿ ಮತ್ತು ನೌಕರರ ಹಾಜರಾತಿಯನ್ನ ಮುಖಚಹರೆ ಗುರುತಿಸುವ ತಂತ್ರಾಂಶ ಅಳವಡಿಸಿಕೊಂಡು ವೇತನ ಪಾವತಿಗೆ ಕ್ರಮ ಕೈಗೊಳ್ಳುವುದು ಹಾಗೂ ಕಡತಗಳ ಶೀಘ್ರ ವಿಲೇಗೆ ಇ-ಕಚೇರಿ ವ್ಯವಸ್ಥೆ ಜಾರಿಗೊಳಿಸುವುದು, ಏಕ ಕಡತ ನಿರ್ವಹಣೆ ಪದ್ಧತಿ ಜಾರಿ ಪ್ರಮುಖವಾದವುಗಳು.

ತಂತ್ರಾಂಶ ಉನ್ನತೀಕರಣಕ್ಕೆ ಹಾಗೂ ಹೊಸ ತಂತ್ರಾಂಶ ಅಳವಡಿಕೆಗೆ ₹7.50 ಕೋಟಿ ಮೀಸಲಿಡಲಾಗಿದೆ.

ಪಾಲಿಕೆಯು ಅಡವಿಟ್ಟ 2 ಆಸ್ತಿ ಋಣ ಮುಕ್ತಗೊಳಿಸಲಾಗುತ್ತದೆ ಎಂದು ಹೇಮಲತಾ ಹೇಳಿದ್ದಾರೆ.

ತೆರಿಗೆ ಆದಾಯ ಹೆಚ್ಚಳ: ಪಾಲಿಕೆ ವ್ಯಾಪ್ತಿಯಲ್ಲಿ ಭೌಗೋಳಿಕ ಮಾಹಿತಿ ಪದ್ಧತಿ ಅಳವಡಿಕೆಯಿಂದ ತೆರಿಗೆ ಆದಾಯ ಹೆಚ್ಚಳವಾಗಲಿದೆ. 19 ಲಕ್ಷ ಆಸ್ತಿ ಗಳಿಂದ ₹ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಮುದ್ರಾಂಕ ಶುಲ್ಕದ ಮೇಲಿನ ಶೇ2ರಷ್ಟು ಸರ್‌ಚಾರ್ಜ್‌ನಿಂದ 2008ರಿಂದ ಇದುವರೆಗೆ ₹ 500 ಕೋಟಿ ಬಾಕಿ ಇದ್ದು ಅದರಲ್ಲಿ ₹100ಕೋಟಿ ವಸೂಲಿಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಪ್ರಕಟಿಸಿದ್ದಾರೆ.

100 ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ನಡೆಸಿ ₹400 ಕೋಟಿ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಿದ್ದಾರೆ. ಈ ಹಿಂದಿನ ಎರಡು ಬಜೆಟ್‌ಗಳಲ್ಲೂ ಈ ಬಗ್ಗೆ ಪ್ರಸ್ತಾಪ ಇತ್ತಾದರೂ ಗುರಿ ಸಾಧನೆ ತೃಪ್ತಿದಾಯಕವಾಗಿರಲಿಲ್ಲ.

ಸುಧಾರಣಾ ಶುಲ್ಕ: ಹೊಸ ವಲಯಗಳಲ್ಲಿ ಭೂ-ಪರಿವರ್ತನೆ ಆಗಿರುವ ಆಸ್ತಿಗಳಿಂದ ಬಾಕಿ ಇರುವ ₹400 ಕೋಟಿ ಸುಧಾರಣಾ ಶುಲ್ಕ ವಸೂಲಿಗೆ ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷರು ಪ್ರಕಟಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳು ಬಾಕಿ ಉಳಿಸಿಕೊಂಡಿರುವ ಒಟ್ಟು ₹75 ಕೋಟಿ ಆಸ್ತಿ ತೆರಿಗೆ ಮೇಲಿನ ಸೇವಾ ಶುಲ್ಕ ಬಾಕಿ ವಸೂಲಿ ಹಾಗೂ ಶಿಕ್ಷಣ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ₹25 ಕೋಟಿ ಸೇವಾ ಶುಲ್ಕವಸೂಲಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಒ.ಎಫ್.ಸಿ. ವಿಭಾಗದಿಂದ ಶುಲ್ಕ ಮತ್ತು ಠೇವಣಿ ಮೂಲಕ ₹175 ಕೋಟಿ, ಮೊಬೈಲ್ ಟವರ್‌ ಶುಲ್ಕದಿಂದ ₹50 ಕೋಟಿ ಹಾಗೂ ನಗರ ಯೋಜನಾ ವಿಭಾಗದಿಂದ ₹841.20 ಕೋಟಿ ವರಮಾನ ನೀರೀಕ್ಷೆ ಮಾಡಿದ್ದಾರೆ.

ಸೈನಿಕರಿಗೆ ತೆರಿಗೆ ಇಲ್ಲ
ಸೈನಿಕರು, ಮಾಜಿ ಸೈನಿಕರು ಹಾಗೂ ಮೃತ ಮಾಜಿ ಸೈನಿಕರ ಕುಟುಂಬದವರು ಸ್ವಂತ ವಾಸ ಮಾಡುವ ಒಂದು ಮನೆ ಅಥವಾ ನಿವೇಶನಕ್ಕೆ ಸದ್ಯ ಶೇ 50ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಶೇ 100ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಈ ಪ್ರಸ್ತಾಪಕ್ಕೆ ಸರ್ಕಾರದ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಬಿಬಿಎಂಪಿಯ 2018–19ನೇ ಸಾಲಿನ ಕಾರ್ಯನಿರ್ವಹಣಾ ವರದಿಯಲ್ಲಿ ಹೇಳಲಾಗಿದೆ.

ಕಳೆದ ಸಾಲಿನ ಬಜೆಟ್‌ನಲ್ಲಿ ಮೇಯರ್‌ ಹಾಗೂ ಆಯುಕ್ತರ ನಿವಾಸ ನಿರ್ಮಿಸಲು ₹5 ಕೋಟಿ ಮೀಸಲಿಡಲಾಗಿತ್ತು. ಈ ಪ್ರಸ್ತಾವವನ್ನು ಕೈಬಿಡಲಾಗಿದೆ.

**

ಘನತ್ಯಾಜ್ಯ ನಿರ್ವಹಣಾ ಘಟಕಗಳ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ

ಬೊಮ್ಮನಹಳ್ಳಿ ವ್ಯಾಪ್ತಿಯ ಕೆಸಿಡಿಸಿ ಸುತ್ತಲಿನ ಪ್ರದೇಶಗಳು - ₹ 20 ಕೋಟಿ

ಮಂಡೂರು ಸುತ್ತಲಿನ ಪ್ರದೇಶಗಳು - ₹ 20 ಕೋಟಿ

ಬೆಲ್ಲಹಳ್ಳಿ ಮತ್ತು ಮಿಟಗಾನಹಳ್ಳಿ ಸುತ್ತಲಿನ ಪ್ರದೇಶಗಳು - ₹ 20 ಕೊಟಿ

ಮಾವಳ್ಳಿಪುರ ಸುತ್ತಲಿನ ಪ್ರದೇಶಗಳು - ₹ 20 ಕೋಟಿ

ದೊಡ್ಡಬಿದರಕಲ್ಲು ಸುತ್ತಲಿನ ಪ್ರದೇಶಗಳು - ₹ 15 ಕೋಟಿ

ಸುಬ್ರಹ್ಮಣ್ಯಪುರ, ಲಿಂಗಧೀರನಹಳ್ಳಿ, ಕನ್ನಳ್ಳಿ ಮತ್ತು ಸೀಗೇಹಳ್ಳಿ ಸುತ್ತಮುತ್ತಲಿನ ಪ್ರದೇಶಾಭಿವೃದ್ಧಿ - ₹ 15 ಕೋಟಿ
**

14ನೇ ಹಣಕಾಸು ಆಯೋಗದ ಕಾಮಗಾರಿಗಳು

ಕಾಮಗಾರಿ ಮೊತ್ತ(₹ಗಳಲ್ಲಿ)

ಬೀದಿ ದೀಪಗಳ ನಿರ್ವಹಣೆ 41 ಕೋಟಿ

ರುದ್ರಭೂಮಿ, ವಿದ್ಯುತ್‌ ಚಿತಾಗಾರದ ನಿರ್ವಹಣೆ 20 ಕೋಟಿ

ಸಮುದಾಯ ಆಸ್ತಿ, ಉದ್ಯಾನಗಳ ನಿರ್ವಹಣೆ 20 ಕೋಟಿ

ಕುಡಿಯುವ ನೀರು 81 ಕೋಟಿ

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ 20 ಕೋಟಿ

ಒಳಚರಂಡಿ ಕಾಮಗಾರಿಗಳು 40 ಕೋಟಿ

ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆ 61 ಕೋಟಿ

ಬೃಹತ್‌ ಮಳೆ ನೀರುಗಾಲುವೆ ಕಾಮಗಾರಿಗಳು 61 ಕೋಟಿ

ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು 61 ಕೋಟಿ

ಒಟ್ಟು 405.76 ಕೋಟಿ

**
ಅನುದಾನ ಹಂಚಿಕೆ ತಾರತಮ್ಯ ಮಾಡಿಲ್ಲ: ಮೇಯರ್‌
‘ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಇಷ್ಟು ವರ್ಷ ಅನುದಾನ ಹಂಚಿಕೆ ಮಾಡುತ್ತಿದ್ದಂತೆಯೇ ಈ ಬಾರಿಯೂ ಹಂಚಿಕೆ ಮಾಡಿದ್ದೇವೆ. ಜನಪರವಾದ ಹಾಗೂ ಎಲ್ಲ ವರ್ಗದವರನ್ನು ತಲುಪುವ ಬಜೆಟ್‌ ಮಂಡಿಸಿದ್ದೇವೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ವಿಧಾನ ಸಭಾಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವಾಗ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಆದ್ಯತೆ ಸಿಕ್ಕಿದೆ. ಬೊಮ್ಮನಹಳ್ಳಿ, ಯಲಹಂಕ ಕ್ಷೇತ್ರಗಳಿಗೂ ತಲಾ ₹20 ಕೋಟಿ ಅನುದಾನ ನೀಡಿದ್ದೇವೆ. ಅಲ್ಲಿರುವುದು ಬಿಜೆಪಿ ಶಾಸಕರಲ್ಲವೇ’ ಎಂದು ಪ್ರಶ್ನಿಸಿದರು.

ಬಜೆಟ್‌ನ ಪ್ರಮುಖ ಐದು ಕಾರ್ಯಕ್ರಮಗಳನ್ನು ತಿಳಿಸಿ ಎಂದಾಗ ಮೇಯರ್‌ ಬಜೆಟ್‌ ಪುಸ್ತಕ ಹಿಡಿದು ಹುಡುಕಲು ಶುರುಮಾಡಿದರು. ಬಳಿಕ ಮಹಾಲಕ್ಷ್ಮಿ, ಅನ್ನಪೂರ್ಣೇಶ್ವರಿ, ಡಯಾಲಿಸಿಸ್‌ ಕೇಂದ್ರಗಳ ಸ್ಥಾಪನೆ, ಹೊಸ ಸ್ಮಶಾನಗಳ ಸ್ಥಾಪನೆ,ವಾಯುಶುದ್ಧೀಕರಣ ಘಟಕ ಕಾರ್ಯಕ್ರಮಗಳ ಹೆಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT