ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Budget| ಬಿಬಿಎಂಪಿ ಬಜೆಟ್‌ನಲ್ಲಿ ಬಾಕಿ ಬಿಲ್‌ಗಳ ಹೊರೆ

ವಿಶೇಷ ಮೂಲ ಸೌಕರ್ಯ ಯೋಜನೆ: ಒಟ್ಟು ₹2,673 ಕೋಟಿ ಅನುದಾನ ನಿಗದಿ
Last Updated 1 ಏಪ್ರಿಲ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ರಾತ್ರೋರಾತ್ರಿ ಮಂಡಿಸಿದ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗಿಂತ ಬಾಕಿ ಬಿಲ್‌ಗಳ ಹೊರೆಯೇ ದೊಡ್ಡದಾಗಿದೆ.

ವಿಶೇಷ ಮೂಲ ಸೌಕರ್ಯ ಯೋಜನೆ ಯಲ್ಲಿ ಒಟ್ಟು ₹2,673 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಇದರಲ್ಲಿ ₹1,557 ಕೋಟಿಯನ್ನು ಬಾಕಿ ಬಿಲ್‌ಗಳ ಪಾವತಿಗೆ ನಿಗದಿ ಮಾಡಿದ್ದರೆ, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ₹1,116 ಕೋಟಿ ನಿಗದಿ ಮಾಡಲಾಗಿದೆ. ಹೊಸ ಕಾಮಗಾರಿಗಳ ಪಟ್ಟಿಯಲ್ಲಿ ಮೂರು ಸೊನ್ನೆಗಳನ್ನು ಸುತ್ತಲಾಗಿದೆ.

ಮುಖ್ಯ ರಸ್ತೆಗಳ ನಿರ್ಮಾಣ, ನಗರೋತ್ಥಾನ ಕಾಮಗಾರಿ, 110 ಹಳ್ಳಿ ಯೋಜನೆ, ಹಳೇ ವಿಮಾನ ನಿಲ್ದಾಣ ರಸ್ತೆ ಸಿಗ್ನಲ್ ರಹಿತ ಕಾರಿಡಾರ್‌, ಮೇಖ್ರಿ ವೃತ್ತದಿಂದ ಹಳೆ ಮದ್ರಾಸ್ ರಸ್ತೆ ಮಾರ್ಗ
ವಾಗಿ ವೈಟ್‌ಫೀಲ್ಡ್‌ ಹೋಪ್ ಫಾರಂ ಜಂಕ್ಷನ್‌ ತನಕ ಸಿಗ್ನಲ್‌ ರಹಿತ ಕಾರಿಡಾರ್ ನಿರ್ಮಾಣ, ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ ಮತ್ತು ನವ ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗಳು ಸೇರಿ ಒಟ್ಟು 41 ಕಾಮಗಾರಿಗಳುವಿಶೇಷ ಮೂಲ ಸೌಕರ್ಯ ಯೋಜನೆಯ ಪಟ್ಟಿಯಲ್ಲಿವೆ.

41 ಕಾಮಗಾರಿಯಲ್ಲಿ ಒಂದೇ ಒಂದು ಹೊಸ ಕಾಮಗಾರಿ ಇಲ್ಲ. ಬಾಕಿ ಬಿಲ್‌ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ನಿರ್ವಹಣೆಗೇ ಅಷ್ಟೂ ಅನುದಾನ ಮೀಸಲಿರಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆಯಲ್ಲೂ ಬಾಕಿ ಬಿಲ್‌ಗಳ ಪಾವತಿಗೆ ₹92 ಕೋಟಿ ನಿಗದಿ ಮಾಡಿದ್ದರೆ, ಪ್ರಗತಿಯಲ್ಲಿರುವ ಕಾಮಗಾರಿಗೆ ₹1 ಕೋಟಿ ನಿಗದಿ ಮಾಡಲಾಗಿದೆ. ಹೊಸ ಕಾಮಗಾರಿಗಳಿಗೆ ಬಿಡಿಗಾಸನ್ನೂ ನಿಗದಿ ಮಾಡಿಲ್ಲ.

ಕಣ್ಣೂರಿನ ಸರ್ವೆ ನಂಬರ್ 50ರಲ್ಲಿ ವೈಜ್ಞಾನಿಕ ಭೂಭರ್ತಿ ಘಟಕ ಸ್ಥಾಪನೆ ಮತ್ತುಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ₹50 ಕೋಟಿ ನಿಗದಿ ಮಾಡಲಾಗಿದೆ. ಅದನ್ನು ಬಿಟ್ಟರೆ ಕಸ ನಿರ್ವಹಣೆಗೂ ಸಂಬಂಧಿಸಿದಂತೆ ಹೊಸ ಯೋಜನೆ ಯಾವುದೂ ಇಲ್ಲ. ದೊಡ್ಡಬಿದರ
ಕಲ್ಲು ಘನತಾಜ್ಯ ಘಟಕದ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯ ಬಾಕಿ ಬಿಲ್‌ಗಳ ಪಾವತಿಗೆ ₹3.87 ಕೋಟಿ, ಸುಬ್ಬರಾಯನಪಾಳ್ಯ, ಲಿಂಗದೀರನಹಳ್ಳಿ, ಕನ್ನಹಳ್ಳಿ, ಸೀಗೆಹಳ್ಳಿ ಪ್ರದೇಶಗಳ ಅಭಿವೃದ್ಧಿಯ ಬಾಕಿ ಬಿಲ್‌ಗಳಿಗೆ ₹7.27 ಕೋಟಿ, ಮಂಡೂರು ಮತ್ತು ಮಾವಳ್ಳಿಪುರ ಸುತ್ತ
ಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ಬಾಕಿ ಬಿಲ್‌ಗಳಿಗೆ ₹14.88 ಕೋಟಿ ನಿಗದಿ ಮಾಡಲಾಗಿದೆ.

ಉಳಿದಂತೆಯೂ ಬಜೆಟ್ ಪುಸ್ತಕದಲ್ಲಿ ಯಾವುದೇ ವಿಭಾಗ ತೆರೆದರೂ ಬಾಕಿ ಬಿಲ್‌ ಪಟ್ಟಿಯೇ ದೊಡ್ಡದಾಗಿ ಕಾಣಿಸುತ್ತಿದೆ.

ವಿವೇಚನಾ ಕೋಟಾಕ್ಕೆ ₹400 ಕೋಟಿ

ವಿವೇಚನಾ ಕೋಟಾದ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹400 ಮೀಟಿ ನಿಗದಿ ಮಾಡಿಕೊಳ್ಳಲಾಗಿದೆ.

ಮುಖ್ಯಮಂತ್ರಿಯೇ ಇಟ್ಟುಕೊಂಡಿರುವ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನೆಗೆ ₹250 ಕೋಟಿ ನಿಗದಿ ಮಾಡಿಕೊಳ್ಳಲಾಗಿದೆ. ಮೇಯರ್ ಮತ್ತು ಮುಖ್ಯ ಆಯುಕ್ತರ ವಿವೇಚನೆಗೆ ತಲಾ ₹50 ಕೋಟಿ, ಉಪ ಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ತಲಾ ₹25 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಸಾರ್ವಜನಿಕ ಕಾಮಗಾರಿಗೆ ₹6,911 ಕೋಟಿ

*ವಾರ್ಡ್‌ ಕಾಮಗಾರಿಗಳಿಗೆ ಒಟ್ಟು ₹924 ಕೋಟಿ– ಹಳೆ ವಲಯದಲ್ಲಿನ ಪ್ರತಿ ವಾರ್ಡ್‌ಗೆ ₹4 ಕೋಟಿ, ಹೊಸ ವಲಯದಲ್ಲಿನ ಪ್ರತಿ ವಾರ್ಡ್‌ಗೆ ₹6 ಕೋಟಿ.

*ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗೆ ₹60 ಕೋಟಿ

*ಬೃಹತ್‌ ಮಳೆನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗೆ ₹40 ಕೋಟಿ

....

ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ ₹1,460 ಕೋಟಿ

*ಘನತ್ಯಾಜ್ಯ ಸ್ವಚ್ಛತೆ ಹಾಗೂ ಸಾಗಣೆಗೆ ₹600 ಕೋಟಿ

*ಎನ್‌ಜಿಟಿ ಆದೇಶದಂತೆ ವೈಜ್ಞಾನಿಕ ಭೂಭರ್ತಿ ಘಟಕಗಳ ವಿ‌ನ್ಯಾಸ (ಕಣ್ಣೂರಿನಲ್ಲಿ ಹೊಸ ಘಟಕಕ್ಕೆ ₹50 ಕೋಟಿ), ಸ್ಥಾಪನೆ ಹಾಗೂ ಕಾರ್ಯಾಚರಣೆಗೆ ₹100 ಕೋಟಿ

*ಮಿಟ್ಟಗಾನಹಳ್ಳಿಯಲ್ಲಿ ಕಸ ಭೂಭರ್ತಿ ಪ್ರದೇಶದ ಅಭಿವೃದ್ಧಿಗೆ ₹75 ಕೋಟಿ

*ಕಸ ಭೂಭರ್ತಿ ಘಟಕದ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ₹125 ಕೋಟಿ

.....

ಸಮಾಜ ಕಲ್ಯಾಣ ಇಲಾಖೆಗೆ ₹374 ಕೋಟಿ

*ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ ವಿತರಣೆಗೆ ₹40 ಕೋಟಿ

*ಒಂಟಿ ಮನೆಗಳಿಗೆ ₹138 ಕೋಟಿ (ಇದರಲ್ಲಿ ಪೌರಕಾರ್ಮಿಕರ ಒಂಟಿಮನೆಗಳಿಗೆ ₹28 ಕೋಟಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹55 ಕೋಟಿ ಮೀಸಲಿಡಲಾಗಿದೆ)

*ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ₹31.90 ಕೋಟಿ

*ತೃತೀಯಲಿಂಗಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ₹6 ಕೋಟಿ

***

ಪ್ರಜಾಪ್ರಭುತ್ವದ ಕೊಗ್ಗಲೆ

ರಾತ್ರೋರಾತ್ರಿ ಬಜೆಟ್ ಮಂಡಿಸುವ ಮೂಲಕ ಪ್ರಜಾಪ್ರಭುತ್ವದ ಕೊಗ್ಗಲೆಯನ್ನು ಬಿಬಿಎಂಪಿ ಮಾಡಿದೆ. ಪಾಲಿಕೆ ಇತಿಹಾಸದಲ್ಲೇ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಮಂಡಿಸುವ ಅಗತ್ಯ ಮತ್ತು ತುರ್ತು ಏನಿತ್ತು? ಎಲ್ಲವನ್ನು ಮುಚ್ಚಿಟ್ಟು ಬಜೆಟ್‌ ಪ್ರಕಟಿಸುವ ಹೊಸ ಪರಿಪಾಟವನ್ನು ಬಿಜೆಪಿ ಹಾಕಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ. ಇನ್ನೊಂದೆಡೆ ಪಾಲಿಕೆ ಜಾರಿಗೆ ತಂದಿರುವ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ನಿಯಮಗಳು 2021ರ ಆಧಾರದಲ್ಲಿಯೇ ಬಜೆಟ್ ರೂಪಿಸಬೇಕಿತ್ತು. ಹಿಂದಿನ ವರ್ಷ ವಾಸ್ತವದಲ್ಲಿ ಎಷ್ಟು ವರಮಾನ ಬಂದಿದೆ ಎಂಬುದನ್ನು ನೋಡಿಕೊಂಡು ಬಜೆಟ್ ಗಾತ್ರ ನಿರ್ಧರಿಸಬೇಕು. ಆದರೆ, ಬಜೆಟ್ ಗಾತ್ರ ನೋಡಿದರೆ ತಮ್ಮದೇ ಸರ್ಕಾರ ರೂಪಿಸಿರುವ ಕಾಯ್ದೆಯನ್ನು ತಾವೇ ಪಾಲಿಸಿಲ್ಲ. ₹10,480 ಕೋಟಿ ಮೊತ್ತದ ಬಜೆಟ್‌ ಮಂಡಿಸಲು ಬಿಬಿಎಂಪಿಗೆ ಅಧಿಕಾರವೇ ಇಲ್ಲ. ಸರ್ಕಾರದ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿದಿದ್ದಾರೆ. ಪ್ರಜಾಪ್ರಭುತ್ವಕ್ಕೆ ಆಗಿರುವ ಮೋಸದ ವಿರುದ್ಧ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ.

–ಗಂಗಾಂಬಿಕೆ, ಮಾಜಿ ಮೇಯರ್

***


‌ಜನರ ಸಮಸ್ಯೆ ಒಳಗೊಳ್ಳದ ಬಜೆಟ್

ಅರ್ಥವಾಗದ ಮತ್ತು ಅಪೂರ್ಣವಾದ ಮತ್ತೊಂದು ಬಜೆಟ್‌ ಅನ್ನು ಬಿಬಿಎಂಪಿ ಮಂಡಿಸಿದೆ. ಸಮಸ್ಯೆಗಳ ಮೂಲವನ್ನೇ ಪಾಲಿಕೆ ಅರ್ಥ ಮಾಡಿಕೊಂಡಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರವನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ ಕರೆದೊಯ್ಯುವ ಹೆಜ್ಜೆಯನ್ನು ಮುಖ್ಯ ಆಯುಕ್ತರು ಇಟ್ಟಿದ್ದಾರೆ. ಪ್ರತಿ ವಾರ್ಡ್‌ಗೆ ₹35 ಕೋಟಿಯಂತೆ ₹6,911.5 ಕೋಟಿಯನ್ನು ಸಾರ್ವಜನಿಕ ಕೆಲಸಗಳಿಗೆ ಮೀಸಲಿಡಲಾಗಿದೆ. ಸಾರ್ವಜನಿಕರನ್ನು ಒಳಗೊಳ್ಳದ ಸಾರ್ವಜನಿಕ ಕಾಮಗಾರಿಗಳಿಗೆ ಅನುದಾನ ನಿಗದಿ ಮಾಡುವುದರಲ್ಲಿ ಅರ್ಥವೇ ಇಲ್ಲ. ತಮ್ಮ ವಾರ್ಡ್‌ನಲ್ಲಿ ಏನೆಲ್ಲ ಕಾಮಗಾರಿ ಬೇಕು ಎಂಬುದನ್ನು ಸಾರ್ವಜನಿಕರಿಂದಲೇ ಮಾಹಿತಿ ಪಡೆದುಕೊಳ್ಳಬೇಕು. ಜನ ಪ್ರತಿನಿಧಿಗಳು ಜನರಿಗೆ ಉಪಯೋಗಕ್ಕೆ ಬಾರದ ಕೆಲಸಗಳನ್ನು ಅನುಷ್ಠಾನ ಮಾಡಿಸುತ್ತಾರೆ. ಇದರಿಂದ ನಗರಕ್ಕೆ ಉಪಯೋಗ ಆಗುವುದಿಲ್ಲ.

ಶ್ರೀಕಾಂತ್ ನರಸಿಂಹನ್, ಬೆಂಗಳೂರು ನವ ನಿರ್ಮಾಣ ಪಕ್ಷದ (ಬಿಎನ್‌ಪಿ) ಪ್ರಧಾನ ಕಾರ್ಯದರ್ಶಿ

***

ಕಾಟಾಚಾರದ ಅವಾಸ್ತವಿಕ ಬಜೆಟ್

ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಯಾವುದೇ ದಿಕ್ಕು ದೆಸೆಯಿಲ್ಲದ ಬಜೆಟ್ ಇದಾಗಿದೆ. ಜನರ ಆಶೋತ್ತರಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸದ ಕೇವಲ ಸಂಖ್ಯೆಗಳಿಂದ ಕೂಡಿದ ಬಜೆಟ್. ಕೇವಲ ನಿರ್ವಹಣಾ ಬಜೆಟ್ ಅಗಿದ್ದು, ವಾಸ್ತವಿಕ ನೆಲೆಗಟ್ಟೇ ಇಲ್ಲದಿರುವುದು ಪಾಲಿಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜ್ಞಾನದ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಬಜೆಟ್ ಕೆಲವೇ ಕೆಲವು ಪ್ರಭಾವಿ ಶಾಸಕರ ಕ್ಷೇತ್ರಗಳಿಗೆ ಸೀಮಿತವಾದಂತೆ ಕಾಣಿಸುತ್ತದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ಜಾರಿಗೆ ತಂದಿದ್ದರೂ, ಅವಾಸ್ತವಿಕವಾಗಿ ಬಜೆಟ್ ಮಂಡಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಕಾನೂನಿಗೆ ಯಾವ ರೀತಿಯ ಬೆಲೆ ಇದೆ ಎಂಬುದಕ್ಕೆ ಬಜೆಟ್ ಉದಾಹರಣೆಯಾಗಿದೆ. ನಾಗರಿಕರ ಭಾಗವಹಿಸುವಿಕೆ ಎನ್ನುವುದು ಪಾಲಿಕೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಕೇವಲ ತೋರಿಕೆಗೆ ಮಾತ್ರ ಇರುವುದನ್ನು ಬಜೆಟ್ ಮತ್ತೊಮ್ಮೆ ಸಾಬೀತುಪಡಿಸಿದೆ.

ಎಸ್‌.ಮಂಜುನಾಥ್, ಕೆಆರ್‌ಎಸ್ ಪಕ್ಷದ ಬೆಂಗಳೂರು ನಗರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT