ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ರಸ್ತೆ ಕಾಮಗಾರಿ ಅಧ್ವಾನ– ಬಿಬಿಎಂಪಿ ಅಸಮಾಧಾನ

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದ ಬಿಬಿಎಂಪಿ ಮುಖ್ಯ ಆಯುಕ್ತ
Last Updated 20 ಅಕ್ಟೋಬರ್ 2021, 17:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಸಂಸ್ಥೆಯು ನಿರ್ವಹಿಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅಧ್ವಾನಗಳ ಬಗ್ಗೆ ಬಿಬಿಎಂಪಿ ಅಸಮಾಧಾನ ವ್ಯಕ್ತಪಡಿಸಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ಎಲ್ಲ ರಸ್ತೆಗಳು ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿವೆ. ಈ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಸಂಸ್ಥೆಯು 36 ರಸ್ತೆಗಳನ್ನು ಟೆ೦ಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಒಟ್ಟು 58 ಕಿ.ಮೀ ಉದ್ದದ ರಸ್ತೆಗಳು ಈ ಯೋಜನೆ ಅಡಿ ಮೇಲ್ದರ್ಜೆಗೇರುತ್ತಿವೆ. ಇವುಗಳಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ.

‘ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಕೆಲವು ರಸ್ತೆಗಳ ಮೇಲ್ಪದರ ಇತ್ತೀಚಿನ ಮಳೆಯಿ೦ದಾಗಿ ಹಾಳಾಗಿದೆ. ಅನೇಕ ಕಡೆ ಈ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯದೆಯೇ ವಾಹನ ಸ೦ಚಾರಕ್ಕೆ ತೊ೦ದರೆ ಉಂಟಾಗುತ್ತಿದೆ. ಕೆಲವು ರಸ್ತೆಗಳ ತಳಮಟ್ಟದ ಜಲ್ಲಿ–ಡಾಂಬರಿನ ದಟ್ಟ ಮಿಶ್ರಣವು ಡಾಂಬರೀಕರಣ ಕಾಮಗಾರಿ ವಿಳ೦ಬದಿಂದಾಗಿ ಕಿತ್ತು ಹೋಗುತ್ತಿದೆ. ಇದನ್ನು ಸರಿಪಡಿಸಿ ಕೂಡಲೇ ಮೇಲ್ಪದರದ ಡಾಂಬರೀಕರಣ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ರಸ್ತೆ ಬದಿಯ ಚರಂಡಿಗೆ ಮಳೆನೀರು ಹರಿಯಲು ಅಳವಡಿಸಿರುವ ಜಾಲರಿಗಳು (ಗ್ರೇಟಿಂಗ್‌) ರಸ್ತೆಮಟ್ಟಕ್ಕಿ೦ತ ಎತ್ತರದಲ್ಲಿವೆ. ಇದರಿ೦ದಾಗಿ ನೀರು ಸರಾಗವಾಗಿ ಚರಂಡಿಗೆ ಹರಿಯದೆ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದರಿಂದಲೂ ವಾಹನ ಸಂಚಾರಕ್ಕೆ ತೊಂದರೆ ಉ೦ಟಾಗುತ್ತಿದೆ. ರಸ್ತೆ ಮೇಲ್ಪದರವೂ ಹಾಳಾಗಿರುತ್ತದೆ. ಇಂತಹ ಜಾಲರಿಗಳನ್ನು ಗುರುತಿಸಿ ಲೋಪವನ್ನು ಸರಿಪಡಿಸಬೇಕು ಎಂದೂ ಅವರು ಸೂಚಿಸಿದ್ದಾರೆ.

ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ನೀರು ಮತ್ತು ಒಳಚರ೦ಡಿ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ. ಕೆಲವೆಡೆ ಎರಡು ರಸ್ತೆಗಳು ಪರಸ್ಪರ ಜೋಡುವಲ್ಲಿ ಕೊಳವೆಗಳ ಮತ್ತು ನಾಳಗಳ (ಡಕ್ಟ್‌) ಕಾಮಗಾರಿ ಪೂರ್ಣಗೊಂಡಿಲ್ಲ. ಜಲಮಂಡಳಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಅ೦ತಹ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ.

ಹಳೆಯ ವಿದ್ಯುತ್‌ ಕ೦ಬಗಳನ್ನು ತೆರವುಗೊಳಿಸಿ ನೆಲದಡಿಯಲ್ಲಿ ಪ್ರತ್ಯೇಕ ನಾಳಗಳಲ್ಲಿ ವಿದ್ಯುತ್‌ ಸರಬರಾಜು ಕೇಬಲ್‌ ಅಳವಡಿಸಲು ಕ್ರಮವಹಿಸಬೇಕು. ಕೆಲವು ರಸ್ತೆಗಳ ಪಾದಚಾರಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಇಂತಹ ರಸ್ತೆಗಳ ಅಂತಿಮ ಹಂತದ ಡಾ೦ಬರೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮಳೆಯ ಬಳಿಕ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಂಡ ರಸ್ತೆ ಕಾಮಗಾರಿಗಳ ಬಣ್ಣ ಬಯಲಾಗಿರುವ ಬಗ್ಗೆ ‘ಪ್ರಜಾವಾಣಿ’ಯು ಇದೇ 19ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT