ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ಸಿದ್ಧತೆ; ಸಂಸದರು, ಪರಿಷತ್‌ ಸದಸ್ಯರಿಗೂ ಹೊಣೆ

Last Updated 1 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆ ಹಿಡಿಯಲು ತಮ್ಮ ಪಕ್ಷದ ಶಾಸಕರಿಲ್ಲದ ಕ್ಷೇತ್ರಗಳಿಗೆ ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೂ ಚುನಾವಣಾ ಉಸ್ತುವಾರಿ ನೀಡಲು ಬಿಜೆಪಿ ನಿರ್ಧರಿಸಿದೆ.

ಪಾಲಿಕೆ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವುದರಿಂದ ಬಿಜೆಪಿ ಚುನಾವಣಾ ಸಿದ್ಧತೆಯನ್ನು ಚುರುಕುಗೊಳಿಸಿದೆ. ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಬೆಂಗಳೂರು ನಗರವನ್ನು ಪ್ರತಿನಿಧಿಸುವ ಸಚಿವರು, ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರ ಜತೆ ಸೋಮವಾರ ಸಭೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಚುನಾವಣಾ ಸಿದ್ಧತೆ ಕುರಿತು ಚರ್ಚಿಸಿದರು.

ಸಚಿವರಾದ ಆರ್‌. ಅಶೋಕ, ವಿ. ಸೋಮಣ್ಣ, ಅಶ್ವತ್ಥನಾರಾಯಣ, ಸಂಸದರಾದ ಡಿ.ವಿ. ಸದಾನಂದ ಗೌಡ, ಪಿ.ಸಿ. ಮೋಹನ್‌ ಮತ್ತು ತೇಜಸ್ವಿ ಸೂರ್ಯ ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ಮಹಾನಗರ ವ್ಯಾಪ್ತಿಯ ಮೂರು ಘಟಕಗಳ ಪದಾಧಿಕಾರಿಗಳೂ ಸಭೆಯಲ್ಲಿದ್ದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇದಕ್ಕಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಲವು ಸೂಚನೆಗಳನ್ನು ನೀಡಿದ್ದಾರೆ.
ಈ ಚುನಾವಣೆಯನ್ನೂ ಯುದ್ಧೋಪಾದಿ ಯಲ್ಲಿ ನಮ್ಮ ಪಕ್ಷ ಎದುರಿಸಲಿದೆ’ ಎಂದರು.

ಶಾಸಕರಿಗೆ ಆಯಾ ಕ್ಷೇತ್ರಗಳಸಂಪೂರ್ಣ ಉಸ್ತುವಾರಿ ಇರಲಿದೆ. ಬಿಜೆಪಿ ಶಾಸಕರಿಲ್ಲದ ಕ್ಷೇತ್ರಗಳಿಗೆ ಪಕ್ಷದ ಸಂಸದರು ಮತ್ತು ವಿಧಾನ ಪರಿಷತ್‌ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗುವುದು. ಹೊಣೆಗಾರಿಕೆ ವಹಿಸಿದ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ನೀಡಲಾಗುವುದು ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೀಸಲಾತಿ ನಿಗದಿ ಸಂಬಂಧ ಅಧಿಕಾರಿ ಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರು ಸೂಕ್ತ ತೀರ್ಮಾನ ಕೈಗೊಳ್ಳುವರು. ಅದರ ಜತೆ ಯಲ್ಲೇ ಪಕ್ಷವೂ ಚುನಾವಣಾ ತಯಾರಿ ಆರಂಭಿಸಿದೆ. ಆಪ್‌, ಎಸ್‌ಡಿಪಿಐ, ಕೆಆರ್‌ ಎಸ್‌ ಪಕ್ಷಗಳನ್ನು ಬಿಜೆಪಿ ಸುಲಭವಾಗಿ ಎದುರಿಸಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಲಾಗಿದೆ. ಅದನ್ನು ಪರಿಗಣಿಸಿ ಜನರು ಬೆಂಬಲ ನೀಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT