ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಬಿಬಿಎಂಪಿ ಎಂಜಿನಿಯರ್‌ ದೇವೇಂದ್ರ‍ಪ್ಪ ಖುಲಾಸೆ

ಅಭಿಯೋಜನಾ ಮಂಜೂರಾತಿಯಲ್ಲಿ ಲೋಪ
Published 25 ಡಿಸೆಂಬರ್ 2023, 16:07 IST
Last Updated 25 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ಆರೋಪಪಟ್ಟಿ ಸಲ್ಲಿಸಲು ಅಭಿಯೋಜನಾ ಮಂಜೂರಾತಿ ನೀಡುವಲ್ಲಿನ ಲೋಪದ ಕಾರಣದಿಂದ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ವಿಭಾಗದ ಹಿಂದಿನ ಸಹಾಯಕ ನಿರ್ದೇಶಕ ಎಸ್‌.ಎನ್‌. ದೇವೇಂದ್ರಪ್ಪ ಅವರನ್ನು ಲಂಚ ಪ್ರಕರಣದಲ್ಲಿ ಖುಲಾಸೆಗೊಳಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಟ್ಟಡವೊಂದರ ಸ್ವಾಧೀನತಾ ಪ್ರಮಾಣಪತ್ರ (ಒ.ಸಿ) ನೀಡಲು ₹ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನಲ್ಲಿ ₹ 20 ಲಕ್ಷ ಪಡೆಯುತ್ತಿದ್ದಾಗ 2021 ರ ಫೆಬ್ರುವರಿ 5 ರಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದೇವೇಂದ್ರಪ್ಪ ಅವರನ್ನು ಬಂಧಿಸಿದ್ದರು. ನಂತರ ಅವರ ಮನೆಯಲ್ಲಿ ಶೋಧ ನಡೆಸಿದಾಗ ಬಿಬಿಎಂಪಿಯ 480 ಕಡತಗಳು, ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳ ಹೆಸರಿನಲ್ಲಿದ್ದ 80 ಮೊಹರುಗಳು ಹಾಗೂ 120 ಲೀಟರ್‌ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು.

ತನಿಖೆಯನ್ನು ಪೂರ್ಣಗೊಳಿಸಿದ್ದ ಎಸಿಬಿ ಪೊಲೀಸರು, ಆರೋಪಿ ಅಧಿಕಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿದ್ದರು. 2021ರ ಮಾರ್ಚ್‌ 17 ರಂದು ಬಿಬಿಎಂಪಿ ಆಯುಕ್ತರು ಆರೋಪಪಟ್ಟಿ ಸಲ್ಲಿಕೆಗೆ ಅಭಿಯೋಜನಾ ಮಂಜೂರಾತಿ ನೀಡಿದ್ದರು. ನಂತರ ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಭ್ರಷ್ಟಾಚಾರ ಪ್ರಕರಣಗಳ ವಿಶೇಷ (ಲೋಕಾಯುಕ್ತ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದೇವೇಂದ್ರಪ್ಪ, ಅಭಿಯೋಜನಾ ಮಂಜೂರಾತಿ ನೀಡಿರುವುದರಲ್ಲೇ ದೋಷವಿದೆ ಎಂದು ತಕರಾರು ಎತ್ತಿದ್ದರು.

ಅಧಿಕೃತವಾಗಿ ಸಹಾಯಕ ಎಂಜಿನಿಯರ್‌ ಹುದ್ದೆಯಲ್ಲಿದ್ದ ಆರೋಪಿಯು, ‘ಬಿ’ ಗುಂಪಿನ ‘ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ‘ಅಧಿಕಾರಿಯನ್ನು ನೇಮಿಸುವ ಮತ್ತು ಸೇವೆಯಿಂದ ತೆಗೆದುಹಾಕುವ ಅಧಿಕಾರ ಹೊಂದಿರುವವರು ಮಾತ್ರ ಅಭಿಯೋಜನಾ ಮಂಜೂರಾತಿ ನೀಡಲು ಅಧಿಕಾರವಿದೆ. ‘ಬಿ’ ಗುಂಪಿನ ಅಧಿಕಾರಿಯನ್ನು ನೇಮಿಸುವ ಅಥವಾ ತೆಗೆದುಹಾಕುವ ಅಧಿಕಾರ ಬಿಬಿಎಂಪಿ ಆಯುಕ್ತರಿಗೆ ಇಲ್ಲ. ಆದ್ದರಿಂದ ಅಭಿಯೋಜನಾ ಮಂಜೂರಾತಿಯೇ ಕಾನೂನುಬಾಹಿರ’ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.

‘ಬಿ’ ಗುಂಪಿನ ಅಧಿಕಾರಿಗಳನ್ನು ಸೇವೆಯಿಂದ ತೆಗೆದುಹಾಕಲು ಬಿಬಿಎಂಪಿ ಆಯುಕ್ತರಿಗೆ ಅಧಿಕಾರ ನೀಡಿ 2014ರಲ್ಲಿ ಹೊರಡಿಸಿದ್ದ ಆದೇಶದ ಪ್ರತಿಯನ್ನು ಲೋಕಾಯಕ್ತದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಭಿಯೋಜನಾ ಮಂಜೂರಾತಿ ನೀಡಲು ಅಧಿಕಾರವಿದೆ ಎಂದೂ ಪ್ರತಿವಾದ ಮಂಡಿಸಿದ್ದರು.

‘ಬಿ ಗುಂಪಿನ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದೆ’ ಎಂದಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ, ಪ್ರಕರಣದಿಂದ ದೇವೇಂದ್ರಪ್ಪ ಅವರನ್ನು ಬಿಡುಗಡೆಗೊಳಿಸಿ ಡಿಸೆಂಬರ್‌ 18 ರಂದು ಆದೇಶ ಹೊರಡಿಸಿದ್ದಾರೆ.

ಪುನಃ ಆರೋಪಪಟ್ಟಿ ಸಲ್ಲಿಸಲು ಅವಕಾಶ

ಎಸಿಬಿ ಅಧಿಕಾರಿಗಳು ಸಲ್ಲಿಸಿದ್ದ ಆರೋಪಪಟ್ಟಿಯಿಂದ ದೇವೇಂದ್ರಪ್ಪ ಅವರನ್ನು ಬಿಡುಗಡೆಗೊಳಿಸಿದ್ದರೂ ತನಿಖಾ ಸಂಸ್ಥೆಯು ಕಾನೂನಿನ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಅಭಿಯೋಜನಾ ಮಂಜೂರಾತಿ ಪಡೆದು ಮತ್ತೆ ಆರೋಪಪಟ್ಟಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT