ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಡಾಂಬರು ಮಿಶ್ರಣ ಘಟಕ ನಿರ್ವಹಣೆ ಟೆಂಡರ್‌ ಪ್ರಕ್ರಿಯೆ: ಅಕ್ರಮದ ವಾಸನೆ

ಕಣ್ಣೂರು: ಬಿಸಿ ಡಾಂಬರು ಮಿಶ್ರಣ ಘಟಕ ನಿರ್ವಹಣೆ
Last Updated 26 ಮೇ 2021, 21:22 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು ಕಣ್ಣೂರಿನಲ್ಲಿ ಸ್ಥಾಪಿಸಿರುವ ಜಲ್ಲಿ– ಬಿಸಿ ಡಾಂಬರು ಮಿಶ್ರಣ (ಹಾಟ್‌ ಮಿಕ್ಸ್‌) ಘಟಕದ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಅನುಮಾನ ಮೂಡಿದೆ.

ಈ ಘಟಕದ ನಿರ್ವಹಣೆಗೆ ಮತ್ತು ಬಿಬಿಎಂಪಿಯ ಸಂಪನ್ಮೂಲ ಬಳಸಿ ಬಿಸಿ ಡಾಂಬರು ಮಿಶ್ರಣ ತಯಾರಿಸುವ ಸಲುವಾಗಿ ಪಾಲಿಕೆ 2021ರ ಮಾರ್ಚ್‌ 20ರಂದು ಟೆಂಡರ್ ಕರೆದಿತ್ತು. ಇದರಲ್ಲಿ ಐವರು ಗುತ್ತಿಗೆದಾರರು ಭಾಗವಹಿಸಿದ್ದರು. ಇವರಲ್ಲಿ ಮೂವರು ಗುತ್ತಿಗೆದಾರರಿಗೆ ತಾಂತ್ರಿಕ ಪರಿಶೀಲನೆ ಸಂದರ್ಭದಲ್ಲಿ ಕೆಲವೊಂದು ಮಾನದಂಡಗಳಿಗೆ ಸೊನ್ನೆ ಅಂಕ ನೀಡಲಾಗಿದ್ದು, ಇದು ಇಡೀ ಟೆಂಡರ್‌ ಪ್ರಕ್ರಿಯೆಯ ಪಾರದರ್ಶಕತೆಯೇ ಬಗ್ಗೆಯೇ ಸಂದೇಹ ಮೂಡಿಸಿದೆ.

ನಾಲ್ಕು ಪ್ರಮುಖ ಮಾನದಂಡಗಳ ಆಧಾರದಲ್ಲಿ ಗುತ್ತಿಗೆದಾರರ ತಾಂತ್ರಿಕ ಅರ್ಹತೆಯ ಪರಿಶೀಲನೆ ನಡೆಸಲಾಗಿತ್ತು. ಒಟ್ಟು 100 ಅಂಕಗಳಲ್ಲಿ 70 ಅಂಕ ಗಳಿಸುವ ಸಂಸ್ಥೆಗಳು ಗುತ್ತಿಗೆ ಪ್ರಕ್ರಿಯೆಯಲ್ಲಿ ಮುಂದುವರಿಯುವ ಅರ್ಹತೆ ಪಡೆಯುತ್ತವೆ. ಗುತ್ತಿಗೆದಾರರ ನಿರ್ದಿಷ್ಟ ಅನುಭವದ ವಿಚಾರದಲ್ಲಿ ಎಲ್ಲ ಐವರು ಗುತ್ತಿಗೆದಾರರಿಗೆ ‍ಪೂರ್ತಿ 60 ಅಂಕಗಳನ್ನು ನೀಡಲಾಗಿದೆ. ಅರ್ಹತೆ, ಕಾರ್ಯಯೋಜನೆ ಮತ್ತು ಕಾರ್ಯವಿಧಾನಗಳ ಪ್ರಸ್ತಾವಗಳಿಗೆ ಗರಿಷ್ಠ 15 ಅಂಕ ನಿಗದಿಮಾಡಲಾಗಿತ್ತು. ಗುತ್ತಿಗೆದಾರ ಬಿ.ಎಸ್‌.ಧನಂಜಯ ಅವರಿಗೆ 2 ಅಂಕ ನೀಡಲಾಗಿದೆ. ಉಳಿದ ನಾಲ್ವರಿಗೂ ಸೊನ್ನೆ ಅಂಕಗಳನ್ನು ನೀಡಲಾಗಿದೆ. ಧನಂಜಯ ಅವರು ನಗರದ ಸಚಿವರೊಬ್ಬರಿಗೆ ಪರಮಾಪ್ತರು.

ಗುತ್ತಿಗೆದಾರರು ಹೊಂದಿರುವ ಉಪಕರಣ ಹಾಗೂ ಜ್ಞಾನ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿ 10 ಅಂಕ ನಿಗದಿಪಡಿಸಲಾಗಿತ್ತು. ಬಿ.ಬಿ.ಉಮೇಶ, ಎಂ.ವೆಂಕಟಾಚಲಪತಿ ಹಾಗೂ ಎಸ್‌.ಸತೀಶ ಅವರಿಗೆ ತಲಾ 8 ಅಂಕ, ಬಿ.ಎಸ್‌.ಧನಂಜಯ ಮತ್ತು ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ಗೆ ತಲಾ 10 ಅಂಕ ನೀಡಲಾಗಿದೆ. ವೃತ್ತಿಪರ ಸಿಬ್ಬಂದಿಯ ಅರ್ಹತೆ ಹಾಗೂ ದಕ್ಷತೆಗೆ 15 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಧನಂಜಯ ಅವರಿಗೆ ಪೂರ್ತಿ 15 ಅಂಕಗಳನ್ನು ಹಾಗೂ ಜೆಎಂಸಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗೆ 7 ಅಂಕ ನೀಡಲಾಗಿದೆ. ಉಳಿದ ಮೂವರಿಗೆ ಸೊನ್ನೆ ಅಂಕ ನೀಡಲಾಗಿದೆ.

ಧನಂಜಯ ಬಿ.ಎಸ್‌. ಅವರು ಅತಿ ಹೆಚ್ಚು ಅಂಕ ಗಳಿಸಿ (87) ಈ ಟೆಂಡರ್‌ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಎರಡನೇ ಸ್ಥಾನ ಪಡೆದ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ 77 ಅಂಕ ಪಡೆದಿದೆ. ಇನ್ನುಳಿದ ಮೂವರು ಗುತ್ತಿಗೆದಾರರಿಗೆ ಕೇವಲ 68 ಅಂಕಗಳನ್ನು ನೀಡಲಾಗಿದ್ದು, ಅವರು ತಾಂತ್ರಿಕ ಅರ್ಹತೆ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಆದರೆ, ಟೆಂಡರ್‌ನ ತಾಂತ್ರಿಕ ಪರಿಶೀಲನೆ ಈಗ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟೆಂಡರ್‌ನಲ್ಲಿ ಭಾಗವಹಿಸಿರುವ ಎಲ್ಲರೂ ತಮ್ಮಲ್ಲಿರುವ ವೃತ್ತಿಪರ ಸಿಬ್ಬಂದಿಯ ವಿವರ ನೀಡಿದ್ದರು. ಹಾಗಿದ್ದರೂ ಮೂರು ಗುತ್ತಿಗೆದಾರರಿಗೆ ಸೊನ್ನೆ ಅಂಕಗಳನ್ನು ನೀಡಿದ್ದು ಏಕೆ ಎಂದು ಅರ್ಥವಾಗದು. ವೃತ್ತಿಪರ ಸಿಬ್ಬಂದಿಯ ಅರ್ಹತೆ ಹಾಗೂ ದಕ್ಷತೆಗೆ ಸ್ವಲ್ಪವಾದರೂ ಅಂಕ ಪಡೆಯುವ ಅರ್ಹತೆ ಇದ್ದರೂ ಸೊನ್ನೆ ಅಂಕ ನೀಡಲಾಗಿದೆ. ಹಾಗಾಗಿ ಮೂವರು ಗುತ್ತಿಗೆದಾರರು ಕೇವಲ 2 ಅಂಕಗಳಿಂದಾಗಿ ತಾಂತ್ರಿಕ ಅರ್ಹತೆ ಪಡೆಯುವ ಅವಕಾಶದಿಂದಲೇ ವಂಚಿತರಾಗಿದ್ದಾರೆ. ಎಂ.ವೆಂಕಟಾಚಲಪತಿ ಅವರು ಬಿಸಿ ಡಾಂಬರು ಮಿಶ್ರಣ ಘಟಕ ನಿರ್ವಹಣೆ ಮಾಡುವುದಕ್ಕೆ ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್ಸ್‌ ಎಂಜಿನಿಯರಿಂಗ್‌ ಪದವೀಧರ ಸಿಬ್ಬಂದಿಯ ವಿವರ ನೀಡಿದ್ದರು. ಆದರೂ ಅವರಿಗೆ ಸೊನ್ನೆ ಅಂಕ ನೀಡಲಾಗಿದೆ.

ಧನಂಜಯ ಅವರ ಸಿಬ್ಬಂದಿಗೆ ವೃತ್ತಿಪರ ಸಿಬ್ಬಂದಿಯ ಅರ್ಹತೆ ವಿಭಾಗದಲ್ಲಿ ಪೂರ್ತಿ 15 ಅಂಕಗಳನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎಂಬುದನ್ನು ತಾಂತ್ರಿಕ ಪರಿಶೀಲನಾ ಸಮಿತಿಯ ಕಾರ್ಯಪಾಲಕ ಎಂಜಿನಿಯರ್‌ ವಿವರಣೆ ನೀಡಬೇಕು ಎಂದು ಅಧಿಕಾರಿಯೊಬ್ಬರು ಹೇಳಿದರು.

ಜೆಎಂಸಿ ಕನ್ಸ್ಟ್ರಕ್ಷನ್ಸ್‌ ಸಂಸ್ಥೆಯು 77 ಅಂಕ ಪಡೆದು ತಾಂತ್ರಿಕ ಪರಿಶೀಲನೆಯಲ್ಲಿ ಅರ್ಹತೆ ಗಳಿಸಿದೆ. ಆದರೂ ಈ ಸಂಸ್ಥೆ ಬೇರೊಂದು ವಿಭಾಗದ ರಸ್ತೆ ವಿಸ್ತರಣೆ ಕಾಮಗಾರಿಯ ಅನುಷ್ಠಾನದಲ್ಲಿ ವಿಳಂಬ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ತಾಂತ್ರಿಕ ಪರಿಶೀಲನೆಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಅವರು ಹೇಳಿದರು.

‘ತಾಂತ್ರಿಕ ಪರಿಶೀಲನೆ ಏನಿದ್ದರೂ ಗೊತ್ತುಪಡಿಸಿದ ಮಾನದಂಡಗಳಿಗೆ ಸಂಬಂಧಿಸಿದ ಅರ್ಹತೆಗಳ ಪರಿಶೀಲನೆಗೆ ಸೀಮಿತ. ಬೇರೊಂದು ವಿಭಾಗದಲ್ಲಿ ಕಾಮಗಾರಿ ವಿಳಂಬವಾಗಿರುವ ಅಂಶವನ್ನು ತಾಂತ್ರಿಕ ಪರಿಶೀಲನೆ ಸಂದರ್ಭದಲ್ಲಿ ಪರಿಗಣಿಸಲು ಬರುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ನಿರ್ವಹಣೆ ವೈಫಲ್ಯ– ರದ್ದಾಗಿದ್ದ ಗುತ್ತಿಗೆ
ಕಣ್ಣೂರಿನ ಜಲ್ಲಿ– ಬಿಸಿ ಡಾಂಬರು ಮಿಶ್ರಣ (ಹಾಟ್‌ ಮಿಕ್ಸ್‌) ಘಟಕದ ನಿರ್ವಹಣೆಯ ಗುತ್ತಿಗೆಯನ್ನು ಎಂ.ಎಸ್.ವೆಂಕಟೇಶ್‌ ಈ ಹಿಂದೆ ಪಡೆದುಕೊಂಡಿದ್ದರು. ಅವರಿಗೆ 2019ರ ಮಾ. 08ರಂದೇ ಕಾರ್ಯಾದೇಶ ನೀಡಿದ್ದರೂ ಕಾರ್ಯಾಚರಣೆ ಆರಂಭಿಸಿದ್ದು 2020ರ ಫೆ.06ರಂದು. ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಘಟಕದ ಕಾರ್ಯಾಚರಣೆಯನ್ನುಮತ್ತೆ ಸ್ಥಗಿತಗೊಳಿಸಲಾಗಿತ್ತು. ‌2020ರ ಜೂನ್‌ 3ರಂದು ಘಟಕವು ಪುನರಾರಂಭ ಮಾಡಿತ್ತು.

ಗುತ್ತಿಗೆ ಪಡೆಯಲು ವೆಂಕಟೇಶ್‌ ಅವರು ಟೆಂಡರ್‌ನಲ್ಲಿ ಎಸ್‌.ಆರ್‌.ದರಕ್ಕಿಂತಲೂ ಕಡಿಮೆ ಮೊತ್ತವನ್ನು ನಮೂದಿಸಿದ್ದರು. ಈ ಘಟಕದಲ್ಲಿ ತಯಾರಿಸಲಾಗುವ ಡಾಂಬರು ಮಿಶ್ರಣ ಅನೇಕ ಹಂತಗಳಲ್ಲಿ ಗುಣಮಟ್ಟದ ಪರೀಕ್ಷೆಗೆ ಒಳಪಡುತ್ತಿತ್ತು. ಹಾಗಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ಗುತ್ತಿಗೆದಾರ ನಷ್ಟ ಅನುಭವಿಸಿದ್ದರು. ಬಿಬಿಎಂಪಿಯ ಅಗತ್ಯಕ್ಕೆ ತಕ್ಕಂತೆ ಜಲ್ಲಿ–ಡಾಂಬರು ಮಿಶ್ರಣ ಪೂರೈಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ, ರಸ್ತೆಗುಂಡಿಗಳನ್ನು ಸಕಾಲದಲ್ಲಿ ಮುಚ್ಚದ ಕಾರಣಕ್ಕೆ ಬಿಬಿಎಂಪಿಯನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಈ ಕಾರಣಕ್ಕೆ ಈ ಘಟಕದ ಗುತ್ತಿಗೆ ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿ, ಹೊಸದಾಗಿ ಟೆಂಡರ್ ಕರೆದಿತ್ತು.

ಅಂಕಿ ಅಂಶ
4.5 ಎಕರೆ:
ಕಣ್ಣೂರಿನ ಡಾಂಬರು ಮಿಶ್ರಣ ಘಟಕದ ವಿಸ್ತೀರ್ಣ
₹ 7.5 ಕೋಟಿ:ಘಟಕದ ನಿರ್ಮಾಣಕ್ಕೆ ತಗುಲಿದ ವೆಚ್ಚ
120 ಟನ್‌:ಘಟಕದಲ್ಲಿ ಪ್ರತಿ ಗಂಟೆಗೆ ತಯಾರಾಗುವ ಡಾಂಬರು ಮಿಶ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT