ಶುಕ್ರವಾರ, ನವೆಂಬರ್ 22, 2019
22 °C
ಡಿಪಿಆರ್‌ ಸಿದ್ಧಪಡಿಸಲು ಶೀಘ್ರವೇ ಟೆಂಡರ್‌: ಮುಖ್ಯ ಎಂಜಿನಿಯರ್‌

ಮೇಲ್ಸೇತುವೆಗಳ ದೃಢತೆ ಪರಿಶೀಲನೆ ನನೆಗುದಿಗೆ

Published:
Updated:

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಮೇಲ್ಸೇತುವೆಗಳ ದೃಢತೆ ಖಾತರಿಪಡಿಸಿಕೊಳ್ಳಲು ಅವುಗಳ ಸಂರಚನೆ ಪರಿಶೀಲನೆಗೆ ಒಳಪಡಿಸಬೇಕು ಎಂದು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಎರಡು ವರ್ಷಗಳ ಹಿಂದೆಯೇ ನಿರ್ಣಯಿಸಲಾಗಿತ್ತು. ಮೇಲ್ಸೇತುವೆಗಳ ನಿರ್ವಹಣೆಗಾಗಿ ಪಾಲಿಕೆ ಬಜೆಟ್‌ನಲ್ಲಿ ಅನುದಾನವನ್ನೂ ಕಾಯ್ದಿರಿಸಿದ್ದರೂ ಅವುಗಳ ದೃಢತೆ ಪರಿಶೀಲನೆ ನಡೆದಿಲ್ಲ.

ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅವರು ಮೇಲ್ಸೇತುವೆಗಳ ದುಸ್ಥಿತಿ ಬಗ್ಗೆ ಗಮನ ಸೆಳೆದಿದ್ದರು. ಅವುಗಳ ಸಂರಚನೆಯನ್ನು ತಜ್ಞರಿಂದ ಪರಿಶೀಲಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು. ಬಳಿಕ ಪಾಲಿಕೆ ಬಜೆಟ್‌ನಲ್ಲೂ ಮೇಲ್ಸೇತುವೆಗಳ ನಿರ್ವಹಣೆಗಾಗಿಯೇ ₹ 50 ಕೋಟಿ ಅನುದಾನ ಒದಗಿಸಲಾಗಿತ್ತು. ಮೇಲ್ಸೇತುವೆಗಳ ದೃಢತೆ ಪರಿಶೀಲನೆಗೆ ಡಿಪಿಆರ್‌ ಸಿದ್ಧಪಡಿಸಲು ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡುವ ಸಲುವಾಗಿ ಪಾಲಿಕೆ ಇನ್ನೂ ಟೆಂಡರ್‌ ಆಹ್ವಾನಿಸಿಲ್ಲ.

ಮೇಲ್ಸೇತುವೆಗಳ ರಸ್ತೆಗಳಲ್ಲಿ ಗುಂಡಿ ಬಿದ್ದರೆ ಅದನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಅವುಗಳ ಬೇರಿಂಗ್‌ಗಳನ್ನು, ವಿಕಸನ ಕೊಂಡಿಗಳನ್ನು (ಎಕ್ಸ್‌ಪಾನ್ಷನ್‌ ಜಾಯಿಂಟ್‌) ಆಗಾಗ್ಗೆ ತಪಾಸಣೆ ನಡೆಸುತ್ತಿರಬೇಕು. ಆಗ ಅವುಗಳಲ್ಲಿ ಸಣ್ಣಪುಟ್ಟ ಲೋಪ ಕಾಣಿಸಿಕೊಂಡರೆ ಸರಿಪಡಿಸಬಹುದು. ಬಿರುಕುಗಳು ಕಾಣಿಸಿಕೊಂಡಿವೆಯೇ, ನೀರು ಹರಿಯುವ ವ್ಯವಸ್ಥೆ ಸರಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಈ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸಕಾಲದಲ್ಲಿ ಎಚ್ಚೆತ್ತು ಲೋಪ ಸರಿಪಡಿಸದಿದ್ದರೆ ಅವುಗಳೇ ದೊಡ್ಡದಾಗಿ ಇಡೀ ಸೇತುವೆ ರಚನೆಗೇ ಧಕ್ಕೆ ಉಂಟಾಗುವ ಅಪಾಯ ಇದೆ. ಬೇರಿಂಗ್‌ನಲ್ಲಿ ಲೋಪವನ್ನು ಸಕಾಲದಲ್ಲಿ ಪತ್ತೆ ಹಚ್ಚದಿದ್ದರೆ ಸೇತುವೆ ಕುಸಿಯುವ ಸಾಧ್ಯತೆಯೂ ಇದೆ ಎನ್ನುತ್ತಾರೆ ತಜ್ಞರು.

ಸುಮನಹಳ್ಳಿ ಮೇಲ್ಸೇತುವೆಯ ಕಾಂಕ್ರಿಟ್‌ ಕುಸಿತದ ಬಳಿಕ ಇತರ ಮೇಲ್ಸೇತುವೆಗಳ ಸಾಮರ್ಥ್ಯದ ಬಗ್ಗೆಯೂ ಸಂದೇಹಗಳು ವ್ಯಕ್ತವಾಗಿದ್ದರಿಂದ ಪಾಲಿಕೆ ಎಚ್ಚೆತ್ತುಕೊಂಡಿದೆ. ನಗರದ ಹಳೆಯ ಮೇಲ್ಸೇತುವೆಗಳ ದೃಢತೆಯನ್ನು ತಜ್ಞರಿಂದ ಪರಿಶೀಲನೆಗೆ ಒಳಪಡಿಸಲು ಮುಂದಾಗಿದೆ.

‘ಮೇಲ್ಸೇತುವೆಗಳ ದೃಢತೆ ಪರಿಶೀಲನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಸಲಹಾ ಸಂಸ್ಥೆ ಆಯ್ಕೆಗೆ ಶೀಘ್ರವೇ ಟೆಂಡರ್‌ ಆಹ್ವಾನಿಸಲಿದ್ದೇವೆ’ ಎಂದು ಬಿಬಿಎಂಪಿ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ತಿಳಿಸಿದರು.

‘ಡಿಪಿಆರ್‌ ಸಿದ್ಧಪಡಿಸಲು ₹5 ಕೋಟಿ ಕಾಯ್ದಿರಿಸಿದ್ದೇವೆ. ಸಲಹಾ ಸಂಸ್ಥೆಯು ಮೇಲ್ಸೇತುವೆಗಳ ನಾನ್‌ ಡಿಸ್ಟ್ರಕ್ಟಿವ್‌ ಟೆಸ್ಟ್‌ (ಎನ್‌ಡಿಟಿ) ನಡೆಸಲಿದ್ದಾರೆ. ಅವುಗಳ ಬೇರಿಂಗ್‌ ಸರಿಯಾಗಿದೆಯೇ, ಬಿರುಕು ಕಾಣಿಸಿಕೊಂಡಿದೆಯೇ, ವಿಸ್ತರಣಾ ಕೊಂಡಿಗಳು (ಎಕ್ಸ್‌ಟೆನ್ಷನ್‌ ಜಾಯಿಂಟ್‌) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬ ಅಂಶಗಳ ಪರಿಶೀಲನೆ ನಡೆಸಲಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)