ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ ಮರುವಿಂಗಡಣೆ: 26 ಹೊಸ ವಾರ್ಡ್‌

ರಾಜ್ಯಪತ್ರದಲ್ಲಿ ಅಂತಿಮ ಅಧಿಸೂಚನೆ ಪ್ರಕಟ
Last Updated 24 ಜೂನ್ 2020, 22:01 IST
ಅಕ್ಷರ ಗಾತ್ರ

ಬೆಂಗಳೂರು: 2011ರ ಜನಗಣತಿ ಆಧರಿಸಿ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಮಾಡಿರುವ ನಗರಾಭಿವೃದ್ಧಿ ಇಲಾಖೆ, ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಒಟ್ಟು ವಾರ್ಡ್‌ಗಳ ಸಂಖ್ಯೆ(198) ಬದಲಾಗಿಲ್ಲ. ಆದರೆ, ಬಹುತೇಕವಾರ್ಡ್‌ಗಳು ಕಲಸು ಮೇಲೋಗರ ಆಗಿದ್ದು, ಗಡಿಗಳು ಮತ್ತು ವಾರ್ಡ್‌ ಸಂಖ್ಯೆ ಅದಲು–ಬದಲು ಆಗಿವೆ.

ಮಾ.2ರಂದು ಕರಡು ಅಧಿಸೂಚನೆ ‍ಪ್ರಕಟಿಸಲಾಗಿತ್ತು.ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಆಕ್ಷೇಪಣೆಗಳನ್ನು ಆಧರಿಸಿ ಸಣ್ಣಪುಟ್ಟ ಬದಲಾವಣೆಯನ್ನಷ್ಟೇ ಮಾಡಿ ಅಂತಿಮ ಅಧಿಸೂಚನೆ ಪ್ರಕಟಿಸಿದೆ.

ಅಧಿಸೂಚನೆ ಪ್ರಕಾರ,ನಗರದ ಹೊರವಲಯದ ವಿಧಾನಸಭಾ ಕ್ಷೇತ್ರಗಳಲ್ಲಿವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿದ್ದರೆ, ನಗರದೊಳಗಿನ ಕ್ಷೇತ್ರಗಳಲ್ಲಿವಾರ್ಡ್‌ಗಳೇ ಕಣ್ಮರೆಯಾಗಿವೆ. ಈ ಹಿಂದಿನ ಮೇಯರ್‌ಗಳಾದ ಗಂಗಾಂಬಿಕೆ ಮತ್ತು ಜಿ. ಪದ್ಮಾವತಿ ಪ್ರತಿನಿಧಿಸುತ್ತಿದ್ದ ವಾರ್ಡ್‌ಗಳೇ ಮಾಯವಾಗಿವೆ.

ನಗರಕ್ಕೆ ಹೊಸತಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ 26 ಹೊಸ ವಾರ್ಡ್‌ಗಳನ್ನು ರೂಪಿಸಲಾಗಿದೆ. ಕೈಬಿಟ್ಟಿರುವ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರತಿನಿಧಿಸುವ 13, ಬಿಜೆಪಿ ಸದಸ್ಯರು ಪ್ರತಿನಿಧಿಸುವ 12 ಹಾಗೂ ಜೆಡಿಎಸ್‌ ಪ್ರತಿನಿಧಿಸುತ್ತಿರುವ ಒಂದು ವಾರ್ಡ್‌ ಸೇರಿದೆ. ಕೆಲವು ವಾರ್ಡ್‌ಗಳ ಹೆಸರನ್ನೂ ಬದಲಿಸಲಾಗಿದೆ.

ಜನಸಂಖ್ಯೆ (ಸರಾಸರಿ 42,645) ಆಧಾರದಲ್ಲಿ ಮರುವಿಂಗಡಣೆ ನಡೆಸಲಾಗಿದೆ. ಹೆಚ್ಚು ಜನಸಂಖ್ಯೆ ಹೊಂದಿದ್ದ ವಾರ್ಡ್‌ಗಳ ವಿಸ್ತೀರ್ಣ ಬದಲಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಅಸ್ತಿತ್ವದಲ್ಲಿದ್ದಾಗ ಒಟ್ಟು 100 ವಾರ್ಡ್‌ಗಳಿದ್ದವು. 7 ನಗರಸಭೆಗಳು, 1 ಪಟ್ಟಣ ಪಂಚಾಯಿತಿಗಳು ಹಾಗೂ 110 ಹಳ್ಳಿಗಳನ್ನು ಸೇರ್ಪಡೆಗೊಳಿಸಿ 2007ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ರಚಿಸಿದಾಗ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಯಿತು.

ಆ ಬಳಿಕ, 2015ರ ಬಿಬಿಎಂಪಿ ಚುನಾವಣೆಗೆ ಮುನ್ನ 2011ರ ಜನಸಂಖ್ಯೆ ಆಧರಿಸಿ ವಾರ್ಡ್‌ಗಳ ಮರುವಿಂಗಡಣೆ ಆಗಬೇಕಿತ್ತು. ಆದರೆ, ಪಾಲಿಕೆ ಪೂರ್ವಸಿದ್ಧತೆ ಮಾಡಿಕೊಂಡಿರದ ಕಾರಣ ಮರುವಿಂಗಡಣೆ ನಡೆದಿರಲಿಲ್ಲ.ಈಗಿನ ಚುನಾಯಿತ ಸದಸ್ಯರ ಅವಧಿ 2020ರ ಸೆಪ್ಟೆಂಬರ್ 10ಕ್ಕೆ ಮುಗಿಯಲಿದ್ದು, ಹೊಸ ಅಧಿಸೂಚನೆಯ ಪ್ರಕಾರ ಚುನಾವಣೆ ನಡೆಯಲಿದೆ.

‘ಅಧಿಸೂಚನೆ ವಾಟ್ಸ್‌ಆ್ಯಪ್‌ನಲ್ಲಿ ದೊರೆತಿದ್ದು, ಕರಡಿನಲ್ಲಿದ್ದ ಅಂಶಗಳಲ್ಲಿ ಸಣ್ಣಪುಟ್ಟ ಬದಲಾವಣೆ ಆಗಿದೆ ಎಂಬ ಮಾಹಿತಿ ಇದೆ. ಎಲ್ಲಾ ವಾರ್ಡ್‌ಗಳನ್ನು ಪರಿಶೀಲಿಸಲು ಸಮಯಾವಕಾಶ ಬೇಕು. ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT