ಮಂಗಳವಾರ, ನವೆಂಬರ್ 19, 2019
29 °C
ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ಗೆ ದಿಢೀರ್‌ ಭೇಟಿ ನೀಡಿ ತಪಾಸಣೆ

ಹಾಜರಾತಿಗೆ ಸಹಿ ಹಾಕದವರ ವಿರುದ್ಧ ಮೇಯರ್‌ ಗರಂ

Published:
Updated:

ಬೆಂಗಳೂರು: ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮೇಯರ್ ಎಂ. ಗೌತಮ್‌ಕುಮಾರ್ ಗರಂ ಆದರು.

ಜಯನಗರದ ಕಂದಾಯ ಹಾಗೂ ಮಾರುಕಟ್ಟೆ ವಿಭಾಗ, ಆರೋಗ್ಯಾಧಿಕಾರಿ ಕಚೇರಿಗೆ ಬುಧವಾರ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಿದ ಅವರು, ಬಹುತೇಕರು ಸಹಿ ಮಾಡದೇ ಇರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಸಹಿ ಹಾಕದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಸಹಿ ಹಾಕದಿರುವುದನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರ ಜೊತೆಗೆ ಇನ್ನೂ ಕೆಲ ಸಿಬ್ಬಂದಿ ಸಹಿ ಹಾಕಿರಲಿಲ್ಲ. ಸಹಿ ಹಾಕದವರಿಗೆ ಗೈರು ಹಾಜರಿ ಎಂದು ನಮೂದಿಸಿ ವೇತನ ಕಡಿತಗೊಳಿಸುವಂತೆ ಕಚೇರಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಅಲ್ಲದೆ, ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಲೋಕೇಶ್ ಅವರಿಗೆ ಕರೆ ಮಾಡಿ, ‘ಸಹಿ ಹಾಕದ ಎಲ್ಲಾ ಸಿಬ್ಬಂದಿಯ ಒಂದು ವಾರದ ವೇತನ ಕಡಿತಗೊಳಿಸಿ’ ಎಂದು ಸೂಚಿಸಿದರು.

ಇಲ್ಲಿನ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದರು. ಕಸದ ರಾಶಿ ಕಂಡು ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆ ಕಾಪಾಡದ ವ್ಯಾಪಾರಿಗಳಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಮಳಿಗೆಗಳಿಗೆ ಬೀಗ ಹಾಕುವಂತೆ ನಿರ್ದೇಶನ ನೀಡಿದರು.

ಪ್ರತಿಕ್ರಿಯಿಸಿ (+)