ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಸೇವೆ ಕಡಿತದ ತೂಗುಗತ್ತಿಯಲ್ಲಿ ಹೊರಗುತ್ತಿಗೆ ಶಿಕ್ಷಕರು

ಹೊರಗುತ್ತಿಗೆ ಶಿಕ್ಷಕರ ಸೇವೆ ಮುಂದುವರಿಕೆ: ಬಿಬಿಎಂಪಿ ಮುಖ್ಯ ಆಯುಕ್ತ ಭರವಸೆ
Last Updated 31 ಮೇ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಅಧೀನದ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ಸೇವೆ ಕಡಿತಗೊಳ್ಳುವ ತೂಗುಗತ್ತಿಯ ನಡುವೆ ದಿನದೂಡುತ್ತಿದ್ದಾರೆ. ಅವರ ಸೇವೆಯನ್ನು ಜೂನ್‌ ತಿಂಗಳ ನಂತರ ಮುಂದುವರಿಸದೇ ಇರುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದ ಬಿಬಿಎಂಪಿ ಸದ್ಯಕ್ಕೆ ಅದನ್ನು ಕೈಬಿಡುವುದಾಗಿ ಭರವಸೆ ನೀಡಿದೆ.

ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ಕೇಂದ್ರಗಳವರೆಗೆ ಒಟ್ಟು 161 ಶಿಕ್ಷಣ ಸಂಸ್ಥೆಗಳು ಬಿಬಿಎಂಪಿ ಆಡಳಿತಕ್ಕೆ ಒಳಪಟ್ಟಿವೆ. ಇವುಗಳಿಗೆ 1996ರ ಬಳಿಕ ನೇಮಕಾತಿಯೇ ನಡೆದಿಲ್ಲ. ಈ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಸೇರಿ 621 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಕ್ರಿಸ್ಟಲ್‌ ಇನ್‌ಫೊ ಸಿಸ್ಟಮ್ಸ್‌ ಆ್ಯಂಡ್ ಸರ್ವಿಸಸ್ ಸಂಸ್ಥೆ ಮೂಲಕ ಬಿಬಿಎಂಪಿ ನೇಮಿಸಿಕೊಂಡಿದೆ. ಪ್ರತಿವರ್ಷವೂ ಅವರ ಗುತ್ತಿಗೆಯನ್ನು ನವೀಕರಿಸಲಾಗುತ್ತದೆ. ಅವರ ವೇತನಕ್ಕೆ ಬಿಬಿಎಂಪಿ ತಿಂಗಳಿಗೆ ₹ 1.60 ಕೋಟಿ ವ್ಯಯಿಸುತ್ತಿದೆ. ಬಿಬಿಎಂಪಿ ಆಡಳಿತಕ್ಕೊಳಪಟ್ಟ ಶಾಲಾ ಕಾಲೇಜುಗಳು ಮುಚ್ಚಿರುವ ಕಾರಣ ಹೊರಗುತ್ತಿಗೆ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ವೇತನ ನೀಡಲಾಗದು ಎಂದು ಬಿಬಿಎಂಪಿಯ ಹಣಕಾಸು ವಿಭಾಗ ಆಕ್ಷೇಪ ವ್ಯಕ್ತಪಡಿಸಿತ್ತು. ಹೊರಗುತ್ತಿಗೆ ಶಿಕ್ಷಕರ ವೇತನಕ್ಕೆ ಬಿಬಿಎಂಪಿ ತಿಂಗಳಿಗೆ ₹ 1.60 ಕೋಟಿ ವ್ಯಯಿಸುತ್ತಿದೆ.

ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರ ಸೇವೆಯನ್ನು ಜೂನ್‌ 1ರಿಂದ ಕಡಿತಗೊಳಿಸುವ ಕುರಿತು ಶಿಕ್ಷಣ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರು ಪ್ರಸ್ತಾವನೆ ಸಿದ್ಧಪಡಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರನ್ನು ಭೇಟಿಯಾಗಿ ತಮ್ಮ ಸೇವೆಯನ್ನು ಕೈಬಿಡದಂತೆ ಮನವಿ ಮಾಡಿದ್ದರು.

‘ಸದ್ಯಕ್ಕೆ ಶಿಕ್ಷಕರನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪದವಿಪೂರ್ವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಸಲುವಾಗಿ ಅವರು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಸೇವೆಯನ್ನು ಕೈಬಿಡುವುದು ಸೂಕ್ತ ಅಲ್ಲ. ಆದರೂ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅವರ ಸೇವೆ ಕೈಬಿಡುವ ಬಗ್ಗೆ ಪ್ರಸ್ತಾವನೆ ಸಿದ್ಧವಾಗಿರುವುದು ನಿಜ. ಈ ಬಗ್ಗೆ ಹಿರಿಯ ಅಧಿಕಾರಿಗಳೇ ಅಂತಿಮ ತೀರ್ಮಾನ ಕೈಗೊಳ್ಳಬೇಕು’ ಎಂದು ಎಂದು ಶಿಕ್ಷಣ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಹೊರಗುತ್ತಿಗೆ ಶಿಕ್ಷಕರ ಸೇವೆಯನ್ನು ಕೈಬಿಡುವುದು ಸಮಂಜಸ ಅಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಈ ಪ್ರಸ್ತಾಪ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದೇವೆ. ಕೋವಿಡ್‌ ನಿಯಂತ್ರಣಕ್ಕೆ ಅವರನ್ನು ಬಳಸಿಕೊಳ್ಳುತ್ತೇವೆ. ಅವರ ಸೇವೆಯನ್ನು ಮುಂದುವರಿಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಂತ್ರದಿಂದ ಕೂಡಿದ ಬದುಕು’

‘ಬಿಬಿಎಂಪಿ ಶಾಲಾ ಕಾಲೇಜುಗಳ ಶಿಕ್ಷಕರ ಬದುಕು ಅತಂತ್ರದಿಂದ ಕೂಡಿದೆ. ನಮ್ಮಲ್ಲಿ ಅನೇಕರು 13ರಿಂದ 15 ವರ್ಷಗಳಿಂದ ಬಿಬಿಎಂಪಿಯ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿದ್ದೇವೆ. ನಮಗೆ ಯಾವುದೇ ಸೇವಾ ಭದ್ರತೆಯೂ ಇಲ್ಲ. ಈ ಹಿಂದೆಯೂ ನಮ್ಮನ್ನು ದಿಢೀರ್‌ ಕೆಲಸದಿಂದ ಕಿತ್ತು ಹಾಕುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈಗ ಮತ್ತೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ನಮ್ಮ ಸೇವೆ ಕೈಬಿಡುವುದಿಲ್ಲ ಎಂದು ಬಿಬಿಎಂ‍ಪಿ ಸದ್ಯಕ್ಕೆ ಭರವಸೆ ನೀಡಿದೆ. ಆದರೆ, ನಾಳೆ ಮತ್ತೆ ಇಂತಹ ಅತಂತ್ರ ಸ್ಥಿತಿ ಬರುವುದಿಲ್ಲ ಎನ್ನಲಾಗದು’ ಎಂದು ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಲೋಕೇಶ್‌ ಬೇಸರ ವ್ಯಕ್ತಪಡಿಸಿದರು.

‘ತರಗತಿಗಳು ನಡೆಯದಿದ್ದರೂ ಕೋವಿಡ್‌ ಸೋಂಕಿತ ವಿಳಾಸ ಪತ್ತೆ ಕಾರ್ಯಕ್ಕೆ, ಮನೆಯಲ್ಲೇ ಆರೈಕೆಗೆ ಒಳಗಾಗುವವರಿಗೆ ಮಾಹಿತಿ ನೀಡುವವರಿಗೆ ಹಾಗೂ ದತ್ತಾಂಶ ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಜೊತೆಗೆ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ನಮಗೆ ಮೊದಲೇ ಸಂಬಳ ಕಡಿಮೆ. ಏಪ್ರಿಲ್‌ ಸಂಬಳ ಇನ್ನೂ ಆಗಿಲ್ಲ. ಜೀವನ ನಿರ್ವಹಣೆಯೇ ಕಷ್ಟ ಎನ್ನುವಂತಾಗಿದೆ. ಜೀತ ಮಾಡುವ ಸ್ಥಿತಿ ನಮ್ಮದು. ಬಡ ಶಿಕ್ಷಕರ ಗೋಳು ಕೇಳುವವರು ಯಾರು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜು ನೋವು ತೋಡಿಕೊಂಡರು.

***

ವಿದ್ಯಾರ್ಥಿಗಳ ಬಾಳು ಬೆಳಗುವ ಶಿಕ್ಷಣ ನೀಡುವ ಶಿಕ್ಷಕರ ಬದುಕೇ ಕತ್ತಲಿನಲ್ಲಿದೆ. ಕ್ಷಣ ಕ್ಷಣವೂ ಆತಂಕದಲ್ಲೇ ದಿನ ದೂಡುವ ಸ್ಥಿತಿ ನಮ್ಮದು. ನಮಗೂ ಸೇವಾ ಭದ್ರತೆ ಒದಗಿಸಬೇಕು

-ಎನ್‌.ಲೋಕೇಶ್‌, ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಅಧ್ಯಕ್ಷ

***

ಹೊರಗುತ್ತಿಗೆ ಶಿಕ್ಷಕರ ಸೇವೆಯನ್ನು ಬಿಬಿಎಂಪಿ ಮುಂದುವರಿಸಲಿದೆ. ಅವರು ಆತಂಕಪಡುವ ಅಗತ್ಯ ಇಲ್ಲ.

-ಗೌರವ್‌ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT