ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ದಾಖಲೆಯಂತೆ ಕಟ್ಟಡ ನಕ್ಷೆ- ಎಚ್ಚೆತ್ತುಕೊಂಡ ಬಿಬಿಎಂಪಿ

ಅತಿಕ್ರಮವಾದರೆ ಸಿಬ್ಬಂದಿ ಮೇಲೆ ಕಾನೂನು ಕ್ರಮ
Last Updated 7 ಅಕ್ಟೋಬರ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ–ಕಟ್ಟೆ, ರಾಜಕಾಲುವೆ, ಹಳ್ಳ, ಕಾಲುದಾರಿ, ಬಫರ್‌ ಝೋನ್‌ ಹಾಗೂ ಖರಾಬು ಜಾಗಗಳ ಮೇಲೆ ಕಟ್ಟಡ ಕಟ್ಟಲು ನಕ್ಷೆ ಅನುಮೋದನೆ ನೀಡುತ್ತಿದ್ದ ಬಿಬಿಎಂಪಿ ಕೊನೆಗೂ
ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಸರ್ವೆ ನಕ್ಷೆ, ಗ್ರಾಮ ನಕ್ಷೆ ಹಾಗೂ ಸಂಬಂಧಪಟ್ಟ ಕಂದಾಯ ದಾಖಲೆಯನ್ನು ಪರಿಶೀಲಿಸಿಯೇ ಕಟ್ಟಡ ನಕ್ಷೆಗೆ ಅನು ಮೋದನೆ ನೀಡಲಿದೆ.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸ್ವತ್ತಿನ ಸುತ್ತಮುತ್ತ ಯಾವುದೇ ರೀತಿಯ ಕೆರೆ–ಕಟ್ಟೆಗಳು, ಖರಾಬು, ಕಾಲುವೆಗಳು ಕಂಡುಬಂದರೆ ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಅಭಿಪ್ರಾಯ ಪಡೆದು ಕೊಳ್ಳಬೇಕು. ಬಫರ್‌ ಕಾಯ್ದಿರಿಸಿ ವಲಯ ನಿಯಮಾವಳಿಯಂತೆ ನಕ್ಷೆಗಳನ್ನು ಪರಿಶೀಲಿಸಿದ ನಂತರವಷ್ಟೇ ಅನುಮೋದನೆಗೆ ಮಂಡಿಸಬೇಕು. ಇದೆಲ್ಲವನ್ನು ಪರಿ ಗಣಿಸದೆ ನಕ್ಷೆ ಮಂಜೂರು ನೀಡಿದರೆ ಅದಕ್ಕೆ ಕಾರಣವಾದ ಎಲ್ಲ ಅಧಿಕಾರಿ–ಸಿಬ್ಬಂದಿ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದ್ದಾರೆ.

ಕಂದಾಯ ದಾಖಲೆಗಳಲ್ಲಿ ಕಂಡು ಬರುವ ಹಳ್ಳ/ ಕಾಲುವೆ, ಕೆರೆ /ಕಟ್ಟೆಗಳು, ಕಾಲುದಾರಿಗಳು, ಖರಾಬುಗಳ ಮೇಲೆ ಯಾವುದೇ ರೀತಿಯ ನಿರ್ಮಾಣಗಳಿಗೆ ಅನುಮತಿ ನೀಡುವಂತಿಲ್ಲ. ವಲಯಗಳ ಜಂಟಿ ಆಯುಕ್ತರಿಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಸ್ತಾವ ಗಳನ್ನು ಪರಿಶೀಲಿಸಲು ಜವಾಬ್ದಾರಿ ನೀಡ ಲಾಗಿದೆ. ಜಂಟಿ ಆಯುಕ್ತರು ಕಂದಾಯ ಇಲಾಖೆಯ ಅಧಿಕಾರಿಗಳಾಗಿರುತ್ತಾರೆ. ಹೀಗಾಗಿ, ಸಹಾಯಕ ನಿರ್ದೇಶಕರು ನಕ್ಷೆ ಮಂಜೂರು ಕೋರಿ ಅನುಮೋದನೆಗೆ ಮಂಡಿಸಿದಾಗ, ಕಂದಾಯ ಇಲಾಖೆಯ ಎಲ್ಲ ರೀತಿಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸರ್ಕಾರದ ಯಾವ ಜಾಗವೂ ಅತಿಕ್ರಮವಾಗದಂತೆ ದೃಢೀಕರಿಸಿಕೊಂಡು ಅನುಮೋದನೆ ಅಥವಾ ಶಿಫಾರಸು ನೀಡಬೇಕು.

ಖರಾಬು ಹಾಗೂ ಬಫರ್‌ ಝೋನ್‌ಗಳನ್ನು ಕಾಯ್ದಿರಿಸದೆ ಕಟ್ಟಡ ನಕ್ಷೆಗೆ ಅನುಮೋದನೆ ನೀಡಿರುವುದು ಕಂಡುಬಂದರೆ ಇದಕ್ಕೆ ಕಾರಣವಾದ ಎಲ್ಲ ಸಿಬ್ಬಂದಿ ಮೇಲೂ ಕಾನೂನು ರೀತಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದೂರಿನ ಮೇಲೆ ಕ್ರಮ

ಬಿಬಿಎಂಪಿ ವ್ಯಾ‍ಪ್ತಿಯ ಸ್ವತ್ತುಗಳಲ್ಲಿ ಗ್ರಾಮ ನಕ್ಷೆ, ಸರ್ವೆ ನಕ್ಷೆ ಹಾಗೂ ಕಂದಾಯ ದಾಖಲಾತಿಗಳ ಅನುಸಾರ ಇರುವ ಹಳ್ಳ/ ಕಾಲುವೆ, ಕೆರೆ/ ಕಟ್ಟೆ ಹಾಗೂ ಖರಾಬು ಜಾಗಗಳನ್ನು ಮುಚ್ಚಿ, ಅವುಗಳ ಮೇಲೆ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಇತ್ತೀಚೆಗೆ ಹಲವು ದೂರುಗಳು ಬಂದಿವೆ. ಇದರಿಂದಾಗಿ ಮಳೆ ನೀರುಗಾಲುವೆಗಳು ಮುಚ್ಚಿಹೋಗಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಕಟ್ಟಡಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗಿದೆ. ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಇದರಿಂದ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.


ಸಿಸಿ, ಒಸಿಗೂ ಇದೇ ನಿಯಮ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿಗೆ ಸಂಬಂಧಿಸಿದಂತೆ ಹೊರಡಿಸ ಲಾಗಿರುವ ಹೊಸ ನಿಯಮಗಳನ್ನು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ನೀಡುವಾಗಲೂ ಅನುಸರಿಸಬೇಕು. ಕೆರೆ–ಕಟ್ಟೆ, ರಾಜಕಾಲುವೆ, ಖರಾಬುಇತ್ಯಾದಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಈಪ್ರಮಾಣಪತ್ರಗಳನ್ನು ನೀಡಬಾರದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT