ಶುಕ್ರವಾರ, ಫೆಬ್ರವರಿ 21, 2020
16 °C
ಕಾಮಗಾರಿ ನಡೆಸಿದ್ದು ಯಾರೋ, ಹಣ ಸೇರಿದ್ದು ಯಾರಿಗೋ * ಇಬ್ಬರು ಲೆಕ್ಕ ಅಧೀಕ್ಷಕರ ಸಹಿತ ಮೂವರು ಅಮಾನತು

ಬಿಬಿಎಂಪಿ: ₹4.15 ಕೋಟಿ ಅವ್ಯವಹಾರ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಮಗಾರಿ ನಡೆಸಿದ ಗುತ್ತಿಗೆದಾರ ಖಾತೆಗೆ ಹಣ ಪಾವತಿ ಮಾಡುವ ಬದಲು, ಬಿಬಿಎಂಪಿ ಅಧಿಕಾರಿಗಳು ಅವರದೇ ಹೆಸರಿನಲ್ಲಿ ಬೇರೆ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಅಕ್ರಮವಾಗಿ ₹4.15 ಕೋಟಿ ಹಣ ವರ್ಗಾವಣೆ ಮಾಡುವ ಮೂಲಕ ಭಾರಿ ಅಕ್ರಮ ನಡೆಸಿದ್ದಾರೆ.

ಈ ಅಕ್ರಮದಲ್ಲಿ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ, ಅನಿತಾ ಹಾಗೂ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರು ಭಾಗಿಯಾಗಿರುವುದಾಗಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ಮುಖ್ಯ ಲೆಕ್ಕಾಧಿಕಾರಿ ವರದಿ ನೀಡಿದ್ದಾರೆ. ಅದರ ಆಧಾರದಲ್ಲಿ ಈ ಮೂವರನ್ನು ಅಮಾನತು ಮಾಡಿದ್ದೇವೆ. ನಕಲಿ ಖಾತೆ ತೆರೆಯಲು ಸಹಕರಿಸಿದ ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್‌) ದೂರು ದಾಖಲಿಸಿದ್ದೇವೆ ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣವೇನು?

ಸಿಜಿಸಿ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು 2018–19ನೇ ಸಾಲಿನಲ್ಲಿ ಮಹದೇವಪುರ ವಿಭಾಗದ ಹೊರಮಾವು ವಾರ್ಡ್‌ನ ಸಿಎಂಆರ್‌ ಬಡಾವಣೆ, ಚಳ್ಕೆರೆ, ಮಂಗನಪಾಳ್ಯ, ಆಂಧ್ರಮುನ್ಯಾಲಪ್ಪ ಬಡಾವಣೆ, ಪಿಳ್ಳಪ್ಪ ಬಡಾವಣೆ, ವಡ್ಡರಪಾಳ್ಯ ಪ್ರದೇಶಗಳಲ್ಲಿ ಒಳಚರಂಡಿ ಕೊಳವೆ ಅಳವಡಿಸಲು ಅಗೆದಿದ್ದ ರಸ್ತೆಗಳ ದುರಸ್ತಿ ಕಾಮಗಾರಿ ನಿರ್ವಹಿಸಿತ್ತು. ಇನ್ನೊಂದು ಪ್ಯಾಕೇಜ್‌ನಲ್ಲಿ ಇದೇ ವಾರ್ಡ್‌ನ ಬಾಬೂಸಾಪಾಳ್ಯ, ದೊಡ್ಡಯ್ಯ ಬಡವಣೆ, ಮಲ್ಲಪ್ಪ ಬಡಾವಣೆ, ನಂಜಪ್ಪ ಗಾರ್ಡನ್‌, ಫ್ಲವರ್‌ ಗಾರ್ಡನ್‌, ಎಂ.ಎಂ.ಗಾರ್ಡನ್‌, ಶಿವಾರೆಡ್ಡಿ, ಪ್ರಕೃತಿ ಟೌನ್‌ಷಿಪ್‌ ಪ್ರದೇಶಗಳಲ್ಲಿ ಒಳಚರಂಡಿ ಕೊಳವೆ ಅಳವಡಿಸಲು ಅಗೆದಿದ್ದ ರಸ್ತೆಗಳ ದುರಸ್ತಿ ಕಾಮಗಾರಿ ನಡೆಸಿತ್ತು.

ಕಂಪನಿಯ ನಿರ್ದೇಶಕ ಸಿ.ಜಿ.ಚಂದ್ರಪ್ಪ ಅವರು ಕಾಮಗಾರಿ ಸಂಬಂಧ ₹4.43 ಕೋಟಿ (ಪ್ಯಾಕೇಜ್‌–1ರ ಸಂಬಂಧ ₹2.21 ಕೋಟಿ ಹಾಗೂ ಪ್ಯಾಕೇಜ್‌–2ರ ಸಂಬಂಧ ₹2.21 ಕೋಟಿ) ಬಿಲ್ಲನ್ನು ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಯೂನಿಯನ್‌ ಬ್ಯಾಂಕ್‌ನ ಶಾಖೆಗೆ ಜಮೆ ಮಾಡುವಂತೆ ಕೋರಿದ್ದರು. ಲೆಕ್ಕ ಪರಿಶೀಲನೆ ಬಳಿಕ ಬಿಬಿಎಂಪಿ ಪ್ಯಾಕೇಜ್‌–1ಕ್ಕೆ ₹2.08 ಕೋಟಿ ಹಾಗೂ ಪ್ಯಾಕೇಜ್‌–2ಕ್ಕೆ 2.07 ಕೋಟಿ ಪಾವತಿಸುವಂತೆ ಕಾರ್ಯಪಾಲಕ ಎಂಜಿನಿಯರ್‌ ಅವರು ಶಿಫಾರಸು ಮಾಡಿದ್ದರು.

ಆದರೆ, ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳು ಈ ಕಾಮಗಾರಿಗಳ ಸಂಬಂಧ ಹಂಪಿನಗರದ ಜನತಾ ಸೇವಾ ಕೋ–ಆಪರೇಟಿವ್‌ ಸೊಸೈಟಿ ಶಾಖೆಯಲ್ಲಿ ಸಿ.ಜಿ.ಚಂದ್ರಪ್ಪ ಎಂಬ ಹೆಸರಿನ ಖಾತೆಗೆ ಇದೇ ಫೆ 4ರಂದು ₹4.15 ಕೋಟಿ ಬಿಲ್‌ ಜಮೆ ಮಾಡಿದ್ದಾರೆ. ಬಿಲ್‌ ಪಾವತಿ ಸಲುವಾಗಿಯೇ ಹೊಸ ಖಾತೆಯನ್ನು ಇತ್ತೀಚೆಗೆ ತೆರೆಯಲಾಗಿತ್ತು. ಜಮೆಯಾದ ತಕ್ಷಣವೇ ಹಣವನ್ನು ಡ್ರಾ ಮಾಡಲಾಗಿದೆ.

‘ನಾನು ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲ. ನಾನು ಬಿಲ್‌ನಲ್ಲಿ ನಮೂದಿಸಿದ ಯೂನಿಯನ್‌ ಬ್ಯಾಂಕ್‌ ಖಾತೆ ಬದಲು ನಕಲಿ ಖಾತೆಗೆ ಬಿಲ್‌ ಪಾವತಿ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು. ನನ್ನ ಹಣವನ್ನು

ಪ್ರಾಥಮಿಕ ತನಿಖಾ ವರದಿಯಲ್ಲೇನಿದೆ?

ಪ್ರಕರಣದ ಪ್ರಾಥಮಿಕ ತನಿಕೆ ನಡೆಸಿರುವ ಮುಖ್ಯಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರು ಈ ಕುರಿತು ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ವಿಭಾಗೀಯ ಕಚೇರಿಯ ಅಧಿಕಾರಿಗಳು ಗುತ್ತಿಗೆದಾರರು ಖಾತೆ ಹೊಂದಿರುವ ಬ್ಯಾಂಕ್‌ನ ಹೆಸರು, ಖಾತೆ ಸಂಖ್ಯೆ ಮ್ತು ಐಎಫ್‌ಎಸ್ಸಿ ಕೋಡ್‌ಗಳನ್ನು ಸರಿಯಾಗಿಯೇ ನಮೂದಿಸಿದ್ದಾರೆ. ಆದರೆ, ಕೇಂದ್ರ ಕಚೇರಿಯ ಲೆಕ್ಕ ಅಧೀಕ್ಷಕ ರಾಮಮೂರ್ತಿ ಆರ್‌. ಅವರ ಹಂತದಲ್ಲಿ ದುರುದ್ದೇಶದಿಂದಲೇ ದಾಖಲೆಗಳನ್ನು ತಿದ್ದಿರುವುದು ಐಎಫ್‌ಎಂಎಸ್‌ ತಂತ್ರಾಂಶದಲ್ಲಿ ಸಾಬೀತಾಗಿದೆ ಎಂದು ವಿಚಾರಣಾ ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಈ ಅಕ್ರಮದ ಕುರಿತು ಕಾರಣ ಕೇಳಿ ಮುಖ್ಯ ಲೆಕ್ಕಾಧಿಕಾರಿ ನೀಡಿರುವ ನೋಟಿಸ್‌ಗೆ ಉತ್ತರಿಸಿರುವ ರಾಮಮೂರ್ತಿ, ‘ನಾನು ಜ.29 ಮತ್ತು 30ರಂದು ರಜೆಯಲ್ಲಿ ತೆರಳಿದ್ದಾಗ ನನಗೆ ಹಂಚಿಕೆಯಾದ ರಹಸ್ಯ ಸಂಖ್ಯೆಯನ್ನು ಲೆಕ್ಕಧೀಕ್ಷಕಿ ಅನಿತಾ ಅವರಿಗೆ ನೀಡಿದ್ದೆ. ಅವರು ಈ ಪಾಸ್‌ವರ್ಡ್‌ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.’

‘ರಾಮಮೂರ್ತಿ ಅವರು ರಹಸ್ಯ ಸಂಖ್ಯೆಯನ್ನು ಅನಿತಾ ಅವರಿಗೆ ನೀಡಿ ಕರ್ತವ್ಯಲೋಪ ಎಸಗಿದ್ದಾರೆ. ಅಲ್ಲದೇ ಕಡತಗಳಿಗೆ ಸಂಬಂಧಿಸಿದ ಹಾಳೆಗಳಲ್ಲಿ ಅವರೇ ಸಹಿ ಮಾಡಿದ್ದಾರೆ. ಅನಿತಾ ಅವರು ಪಾಸ್‌ವರ್ಡ್‌ ದುರ್ಬಳಕೆ ಮಾಡಿರುವುದು ಮೆ. ವಲ್ಲಭ್‌ ಸಾಫ್ಟ್‌ವೇರ್‌ ಸಂಸ್ಥೆಯ ವರದಿಯಲ್ಲಿ ಸಾಬೀತಾಗಿದೆ. ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರು ಹಣ ಆರ್‌ಟಿಜಿಎಸ್‌ ಮಾಡಲು ಸಹಕರಿಸಿದ್ದಾರೆ. ನಕಲಿ ಖಾತೆ ತೆರೆಯಲು ಹಂಪಿನಗರದ ಜನತಾ ಸೇವಾ ಕೋ–ಆಪರೇಟಿವ್‌ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕರು ಸಹಕರಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗೋವಿಂದರಾಜು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಿಎಂಟಿಎಫ್‌ನಲ್ಲಿ ಮೊಕದ್ದಮೆ ದಾಖಲು

ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರು ಲೆಕ್ಕಅಧೀಕ್ಷಕ ರಾಮಮೂರ್ತಿ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಗೆ (ಬಿಎಂಟಿಎಫ್‌) ದೂರು ನೀಡಿದ್ದಾರೆ.

ಹಣ ಪಾವತಿ– ಕ್ರಮ ಹೇಗೆ?

ಬಿಲ್‌ ಪಾವತಿಯ ಮೊದಲ ಹಂತದಲ್ಲಿ ವಿಭಾಗೀಯ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಹಾಗೂ ಅವರ ಅಧೀನದ ಲೆಕ್ಕಶಾಖೆಯ ಲೆಕ್ಕ ಅಧೀಕ್ಷಕರು ಬಿಲ್‌ನ ಪೂರ್ಣ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಗುತ್ತಿಗೆದಾರರ ಖಾತೆಯನ್ನು ಖಾತರಿ ಪಡಿಸಿಕೊಳ್ಳಲು  ರದ್ದುಗೊಳಿಸಿದ ಚೆಕ್‌ಗಳನ್ನು ಅವರಿಂದ ಪಡೆದು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ನಂತರ ಬಿಲ್‌ ಪಾವತಿಗಾಗಿ ಕೇಂದ್ರ ಕಚೇರಿಗೆ ಕಳುಹಿಸುತ್ತಾರೆ.

ಎರಡನೇ ಹಂತದಲ್ಲಿ ವಿಭಾಗೀಯ ಕಚೇರಿಯಿಂದ ಬಂದ ಬಿಲ್‌ನ ದಾಖಲೆಗಳನ್ನು (ಹಾರ್ಡ್‌ಕಾಪಿ) ಹಾಗೂ ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗಿರುವ ವಿವರಗಳನ್ನು ಕೇಂದ್ರ ಕಚೇರಿಯ ಲೆಕ್ಕ ಅಧೀಕ್ಷಕರು ತಾಳೆ ಮಾಡಿ, ಅದು ಸಮಪರ್ಕವಾಗಿದೆ ಎಂದು ದೃಢಪಟ್ಟ ಬಳಿಕ ನಿಗದಿತ ಸಂಖ್ಯೆ (ಸಿಬಿಆರ್‌)ನೀಡುತ್ತಾರೆ. ಇದಕ್ಕೆ ಹಣಕಾಸು ವಿಭಾಗದ ಉಪನಿಯಂತ್ರಕರ (ಡಿಸಿಎಫ್‌) ಹಾಗೂ ಮುಖ್ಯ ಲೆಕ್ಕಾಧಿಕಾರಿಗೆ (ಸಿಎಒ) ಅನುಮೋದನೆ ಪಡೆಯುತ್ತಾರೆ. ಬಿಲ್‌ ಮೊತ್ತದ ಆರ್‌ಟಿಜಿಎಸ್‌ನ ಮುದ್ರಿತ ಪ್ರತಿ ಪಡೆದು ಧನಾದೇಶ ಸಿದ್ಧಪಡಿಸಿ ಡಿಸಿಎಫ್ ಹಾಗೂ ಸಿಎಒ ಅವರ ಸಹಿ ಪಡೆದು ಗುತ್ತಿಗೆದಾರರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಾರೆ. ಈ ಹಂತದಲ್ಲಿ ಲೆಕ್ಕ ಅಧೀಕ್ಷಕರು ಅಕ್ರಮ ನಡೆಸಿದ್ದಾರೆ. 

ಅಕ್ರಮ ಪತ್ತೆಯಾಗಿದ್ದು ಹೇಗೆ?

‘ನಾನು 2019ರ ಮಾರ್ಚ್‌ನಲ್ಲೇ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸಿ  ಬಿಬಿಎಂಪಿಗೆ ಬಿಲ್‌ ಸಲ್ಲಿಸಿದ್ದೆ. ಜ್ಯೇಷ್ಠತೆ ಪ್ರಕಾರ ನನಗೆ ಬಿಲ್‌ ಪಾವತಿಯಾಗಬೇಕಿತ್ತು. ಇದಕ್ಕಾಗಿ ಕಾಯುತ್ತಿದ್ದೆ. ಕಾಮಗಾರಿ ಸಲುವಾಗಿ ಕೆಲವರಿಗೆ ನಾನು ಹಣ ನೀಡುವುದು ಬಾಕಿ ಇತ್ತು. ಅವರು ನಿನ್ನೆ ಏಕಾಏಕಿ ಬಿಲ್‌ ಪಾವತಿಯಾದ ಬಳಿಕವೂ ಏಕೆ ಹಣ ನೀಡಿಲ್ಲ ಎಂದು ತಗಾದೆ ತೆಗೆದರು. ನನ್ನ ಗುತ್ತಿಗೆದಾರ ಗೆಳೆಯರು ನನ್ನ ಬಿಲ್‌‌ ಪಾವತಿ ಆಗಿರುವುದನ್ನು ಗಮನಕ್ಕೆ ತಂದರು. ಈ ಬಗ್ಗೆ ಬಿಬಿಎಂಪಿ ಕಚೇರಿಯಲ್ಲಿ ವಿಚಾರಿಸಿದಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂತು’ ಎಂದು ಸಿ.ಜಿ.ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧಿಕಾರಿಗಳು ಶಾಮಿಲಾಗಿಯೇ ಈ ಅಕ್ರಮ ನಡೆಸಿದ್ದಾರೆ. ಇಲ್ಲದಿದ್ದರೆ ನಾನು ನೀಡಿದ ಬ್ಯಾಂಕ್‌ ಖಾತೆಯ ಬದಲು ಬೇರೆ ಖಾತೆಗೆ ಹಣ ಜಮೆ ಮಾಡಲು ಸಾಧ್ಯವೇ ಇಲ್ಲ. ನಾನು ಸಾಲ ಮಾಡಿ ಕಾಮಗಾರಿ ನಡೆಸಿದ್ದೇನೆ. ಬಿಬಿಎಂಪಿ ನನ್ನ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು