ಶುಕ್ರವಾರ, ಸೆಪ್ಟೆಂಬರ್ 17, 2021
24 °C
ರಸ್ತೆ, ಚರಂಡಿ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿ 21 ತಿಂಗಳು ಪೂರ್ಣ l ಮರುಟೆಂಡರ್‌ ಕರೆದರೆ ಮತ್ತಷ್ಟು ವಿಳಂಬ

ಕಾರಣವಿಲ್ಲದೆಯೇ ಟೆಂಡರ್‌ ರದ್ದತಿಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ವಿ.ರಾಮನ್‌ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯವರ ನವನಗರೋತ್ಥಾನ ಯೋಜನೆಯಡಿ ಕೈಗೊಳ್ಳುವ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯ ನಾಲ್ಕು ಪ್ಯಾಕೇ ಜ್‌ಗಳ ಟೆಂಡರ್‌ಗಳನ್ನು ರದ್ದುಪಡಿಸಿ ಅಲ್ಪಾವಧಿ ಮರುಟೆಂಡರ್‌ ಕರೆಯುವ ಕುರಿತು ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಿದೆ. ವಿಶೇಷವೆಂದರೆ, ಈ ಟೆಂಡರ್‌ಗಳ ರದ್ದತಿಗೆ ಬಿಬಿಎಂಪಿ ಯಾವುದೇ ಬಲವಾದ ಕಾರಣಗಳನ್ನು ನೀಡಿಲ್ಲ.

ಬೆನ್ನಿಗಾನಗಳ್ಳಿ ವಾರ್ಡ್‌ನ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್‌–3), ಸಿ.ವಿ.ರಾಮನ್‌ನಗರ ವಾರ್ಡ್‌ನ ಭುವನೇಶ್ವರಿ ನಗರದ ಕಗ್ಗದಾ ಸಪುರ, ಸುದ್ದಗುಂಟೆಪಾಳ್ಯ ಪ್ರದೇಶದ ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿ ವೃದ್ಧಿ (ಪ್ಯಾಕೇಜ್‌–1), ಹೊಸ ತಿಪ್ಪಸಂದ್ರ ವಾರ್ಡ್‌ನ ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್‌ 4) ಹಾಗೂ ಜೀವನ್‌ಬಿಮಾನಗರದ ತಿಪ್ಪಸಂದ್ರ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಗಳಿಗೆ ಬಿಬಿಎಂಪಿ 2019ರ ನ.8ರಂದು ಟೆಂಡರ್ ಕರೆದಿತ್ತು.

ಟೆಂಡರ್‌ ಮೊತ್ತಕ್ಕಿಂತಲೂ ಕಡಿಮೆ ಮೊತ್ತ ನಮೂದಿಸಿದ್ದ ಎಂಎಸ್‌ವಿ ಕನ್‌ಸ್ಟ್ರಕ್ಷನ್ಸ್‌ ಕಂಪನಿ ಎಲ್‌–1 ಗುತ್ತಿಗೆದಾರರಾಗಿ ಹೊರಹೊಮ್ಮಿತ್ತು. ಈ ಕಂಪನಿಗೆ ಟೆಂಡರ್‌ ನೀಡುವ ಪ್ರಸ್ತಾವಗಳಿಗೆ ನಗರಾಭಿವೃದ್ಧಿ ಇಲಾಖೆಯು 2021ರ ಮಾರ್ಚ್‌ನಲ್ಲಿ ಅನುಮೋದನೆ ನೀಡಿದೆ. ಬಿಬಿಎಂಪಿಯು ಮೂರು ಪ್ಯಾಕೇಜ್‌ಗಳ ಅನುಷ್ಠಾನಕ್ಕೆ 2021ರ ಮಾರ್ಚ್ 30 ಹಾಗೂ ಇನ್ನೊಂದು ಕಾಮಗಾರಿಗೆ ಅನುಷ್ಠಾನಕ್ಕೆ 2021ರ ಏ.01ರಂದು ಗುತ್ತಿಗೆದಾರ ಸಂಸ್ಥೆಗೆ ಟೆಂಡರ್ ಸ್ವೀಕಾರ ಪತ್ರಗಳನ್ನೂ ನೀಡಿದೆ. ಗುತ್ತಿಗೆದಾರರು ಟೆಂಡರ್‌ ಭದ್ರತಾ ಠೇವಣಿ ಸಲ್ಲಿಸಿದ್ದು, ಕರಾರು ಮಾಡಿಕೊಂಡು ಕಾರ್ಯಾದೇಶ ಪತ್ರವನ್ನು ಪಡೆಯಬೇಕಿದೆ. 

ಗುತ್ತಿಗೆದಾರರು ನಾಲ್ಕು ದಿನ ತಡವಾಗಿ ಬ್ಯಾಂಕ್‌ ಗ್ಯಾರಂಟಿ ಒದಗಿಸಿದ್ದನ್ನೇ ನೆಪವಾಗಿಟ್ಟುಕೊಂಡು ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್ ಟೆಂಡರ್‌ ರದ್ದುಪಡಿಸಲು ಕ್ರಮಕೈಗೊಂಡಿದ್ದಾರೆ. ‘ಗುತ್ತಿಗೆದಾರರು ಕ್ರಮಬದ್ಧ ಅವಧಿಯೊಳಗೆ ಬ್ಯಾಂಕ್‌ ಗ್ಯಾರಂಟಿ ಸಲ್ಲಿಸಿಲ್ಲ ಹಾಗೂ ಬ್ಯಾಂಕ್‌ ಗ್ಯಾರಂಟಿ ಬಗ್ಗೆ ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿ 21 ತಿಂಗಳುಗಳು ಕಳೆದಿವೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳ ಬೇಕಿದ್ದು, ಅಲ್ಪಾವಧಿ ಮರು ಟೆಂಡರ್‌ ಕರೆ ಯಲು ಆದೇಶ ನೀಡಬೇಕು’ ಎಂದು ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ಬ್ಯಾಂಕ್‌ ಗ್ಯಾರಂಟಿ ಸಲ್ಲಿ ಸಿಲ್ಲ ಎನ್ನುವ ಇಇ ಯಾವ ಕಾರಣಕ್ಕೆ ಈ ಬಗ್ಗೆ ಬ್ಯಾಂಕ್‌ನಿಂದ ದೃಢೀಕರಣ ಬಯಸಿ ದ್ದಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ’ನಗರದ ಸಚಿವರೊಬ್ಬರ ಸಂಬಂಧಿಯಾಗಿರುವ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಅಲ್ಪಾವಧಿ ಟೆಂಡರ್‌ ಕರೆಯಲು ಸಿದ್ಧತೆ ನಡೆದಿದೆ‘ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

‘ಬಲವಾದ ಕಾರಣವಿಲ್ಲದೆಯೇ ಮರು ಟೆಂಡರ್‌ ಕರೆದರೆ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಅಲ್ಲದೇ ಬ್ಯಾಂಕ್‌ ಗ್ಯಾರಂಟಿ ನೀಡುವಾಗ ನಾಲ್ಕು ದಿನ ತಡವಾಗಿರುವುದು ಟೆಂಡರ್‌ ರದ್ದುಪಡಿಸಲು ಬಲವಾದ ಕಾರಣವಲ್ಲ. ಈ ನೆಪದಲ್ಲಿ ಟೆಂಡರ್‌ ರದ್ದುಪಡಿಸುವುದಾದರೆ ಬಿಬಿಎಂಪಿಯಲ್ಲಿ ನೂರಾರು ಟೆಂಡರ್‌ಗಳನ್ನು ರದ್ದುಪಡಿಸಬೇಕಾಗುತ್ತದೆ. ಬ್ಯಾಂಕ್‌ ಗ್ಯಾರಂಟಿ ಪಡೆಯಲು ನೀಡಿದ್ದ ಗಡುವಿನ ಅವಧಿಯಲ್ಲಿ ಕೋವಿಡ್‌ ಲಾಕ್‌ಡೌನ್‌ ಕೂಡಾ ಜಾರಿಯಲ್ಲಿತ್ತು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಒಂದು ವೇಳೆ ಈ ಹಂತದಲ್ಲಿ ಟೆಂಡರ್‌ ರದ್ದುಪಡಿಸುವುದೇ ಆದರೆ ಗುತ್ತಿಗೆ ಮೊತ್ತದ ಶೇ 5ರಷ್ಟನ್ನು ಮತ್ತು ಟೆಂಡರ್‌ ಮೊತ್ತದ ವ್ಯತ್ಯಾಸದ ಪ್ರಮಾಣಕ್ಕನುಗುಣವಾಗಿ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡಿ ಖಾತರಿ ಹಣವನ್ನು ಗುತ್ತಿಗೆದಾರರಿಗೆ ಹಿಂತಿರುಗಿಸಬೇಕಾಗುತ್ತದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ. ಅದನ್ನು ಗುತ್ತಿಗೆದಾರರು ನ್ಯಾಯಾಲಯದಲ್ಲಿ ‍ಪ್ರಶ್ನಿಸಬಹುದು. ಇದರಿಂದ ಕಾಮಗಾರಿ ಮತ್ತಷ್ಟು ತಡವಾಗಬಹುದು’ ಎಂದರು.

‘ಪ್ರಸ್ತುತ ಕಾಮಗಾರಿಗಳ ಗುತ್ತಿಗೆ ಪಡೆದ ಸಂಸ್ಥೆಯು ಟೆಂಡರ್‌ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಕಾಮಗಾರಿ ಅನುಷ್ಠಾನಕ್ಕೆ ಒಪ್ಪಿದೆ. ಅಲ್ಪಾವಧಿ ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಇಷ್ಟು ಕಡಿಮೆ ಮೊತ್ತಕ್ಕೆ ಕಾಮಗಾರಿ ನಡೆಸಲು ಒಪ್ಪದಿದ್ದರೆ ಸರ್ಕಾರಕ್ಕೆ ನಷ್ಟವಾಗಲಿದೆ’ ಎಂದೂ ಅವರು ತಿಳಿಸಿದರು.

ಸಿ.ವಿ.ರಾಮನ್‌ನಗರ ಕ್ಷೇತ್ರ: ಕಾಮಗಾರಿಗಳ ಟೆಂಡರ್‌ ವಿವರ

ಕಾಮಗಾರಿ- ಟೆಂಡರ್‌ ಮೊತ್ತ (₹ ಕೋಟಿಗಳಲ್ಲಿ)- ಗುತ್ತಿಗೆ ಮೊತ್ತ (₹ ಕೋಟಿಗಳಲ್ಲಿ)

ಬೆನ್ನಿಗಾನಗಳ್ಳಿ ವಾರ್ಡ್‌ನ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್‌–3); 30.00; 23.83

ಸಿ.ವಿ.ರಾಮನ್‌ನಗರ ವಾರ್ಡ್‌ನ ಭುವನೇಶ್ವರಿ ನಗರದ ಕಗ್ಗದಾಸಪುರ, ಸುದ್ದಗುಂಟೆಪಾಳ್ಯ ಪ್ರದೇಶದ ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್‌–1);15.30; 12.85

ಹೊಸ ತಿಪ್ಪಸಂದ್ರ ವಾರ್ಡ್‌ನ ರಸ್ತೆ ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್‌ 4); 30.00;23.83

ಜೀವನಬಿಮಾನಗರದಲ್ಲಿ ತಿಪ್ಪಸಂದ್ರ ಮುಖ್ಯ ರಸ್ತೆಯ ಡಾಂಬರೀಕರಣ; 5.00; 3.97

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು