ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಟೆಂಡರ್‌ ಶ್ಯೂರ್‌ ರಸ್ತೆ ಶೀಘ್ರ ಸಂಚಾರಕ್ಕೆ ಮುಕ್ತ

ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ರಸ್ತೆ ಪ್ರಗತಿ ಪರಿಶೀಲಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ
Last Updated 26 ಫೆಬ್ರುವರಿ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇವುಗಳ ಪೈಕಿ ಶೀಘ್ರವೇ ಇನ್ನೂ 9 ರಸ್ತೆಗಳು ಸಂಚಾರಕ್ಕೆ ಮುಕ್ತಗೊಳ್ಳಲಿವೆ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಹೇಳಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಸ್ತೆಗಳ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ಅವರು, ‘ಈಗಾಗಲೇ ಮುಖ್ಯಮಂತ್ರಿಯವರು ಇಂತಹ ಐದು ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ’ ಎಂದರು.

ರಾಜಭವನ ರಸ್ತೆ, ನೆಹರು ತಾರಾಲಯ ರಸ್ತೆ, ಕಂಟೋನ್ ಮೆಂಟ್ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರ್ ಬಾ ರಸ್ತೆ ಹಾಗೂ ರಾಜಾರಾಮ್ ಮೋಹನ್ ರಾಯ್ ರಸ್ತೆಗಳಿಗೆ ಭೇಟಿ ನೀಡಿ ಪ್ರಗತಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಬಾಕಿಯಿರುವ ಕಾಮಗಾರಿಗಳನ್ನುತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಳಸೇತುವೆ ತೆರವಿಗೆ ಸೂಚನೆ

ರಾಜಭವನ ರಸ್ತೆ ಮಾರ್ಗದಲ್ಲಿ ಪಾದಚಾರಿ ಕೆಳಸೇತುವೆಯನ್ನು ಪರಿಶೀಲಿಸಿದ ಗೌರವ್ ಗುಪ್ತ, ’ಇದನ್ನು ಯಾರೂ ಬಳಕೆ ಮಾಡುತ್ತಿಲ್ಲ. ಅದನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು‘ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾದಚಾರಿ ಮಾರ್ಗದಲ್ಲಿ ಮರಗಳಲ್ಲಿ ತೂಗಾಡುತ್ತಿರುವ ಒಎಫ್‌ಸಿ ಕೇಬಲ್‌ಗಳನ್ನು ಕಂಡು ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದರು.

ಏಕ ಮಾದರಿ ವಿನ್ಯಾಸವಿರಲಿ

ಪಾದಚಾರಿ ಮಾರ್ಗದಲ್ಲಿ ಮರಗಳ ಸುತ್ತಲೂ ಕಟ್ಟೆಗಳನ್ನು ನಿರ್ಮಿಸಿರುವುದರಿಂದ ಪಾದಚಾರಿ ಮಾರ್ಗದ ಮಟ್ಟವು ಏರುಪೇರಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ. ಇತರೆ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಮಟ್ಟ ಮತ್ತು ಮರಗಳ ಸುತ್ತಲಿನ ಮಣ್ಣಿನ ಹೊದಿಕೆಯ ಮಟ್ಟ ಏಕರೂಪದಲ್ಲಿರುವಂತೆ ಸ್ಮಾರ್ಟ್ ಸಿಟಿ ರಸ್ತೆಗಳಲ್ಲೂ ಇದೇ ಮಾದರಿಯನ್ನು ಅಳವಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ತಂತಿ ನೆಲದಡಿಯಿರಲಿ

ಕಂಟೋನ್ಮೆಂಟ್ ರಸ್ತೆ ಹಾಗೂ ಕ್ವೀನ್ಸ್ ರಸ್ತೆ ತಪಾಸಣೆ ನಡೆಸಿದ ಆಡಳಿತಾಧಿಕಾರಿ, ಪಾದಚಾರಿ ಮಾರ್ಗದಲ್ಲಿ ಆರ್.ಸಿ.ಸಿ ವಿದ್ಯುತ್ ಕಂಬಗಳಿರುವುದನ್ನು ಗಮನಿಸಿದರು. ತಕ್ಷಣ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ, ’ಪಾದಚಾರಿ ಮಾರ್ಗಗಳಲ್ಲಿರುವ ಆರ್.ಸಿ.ಸಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ತಂತಿಗಳನ್ನು ನೆಲದಡಿ ಅಳವಡಿಸಲು ಕ್ರಮ ವಹಿಸಬೇಕು‘ ಎಂದು ತಿಳಿಸಿದರು. ಕಾಮಗಾರಿ ಮುಗಿದಿರುವ ಕಡೆ ಕೂಡಲೇ ಡಾಂಬರೀಕರಣ ಮಾಡುವಂತೆಯೂ ತಿಳಿಸಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಮುಖ್ಯ ಎಂಜಿನಿಯರ್‌ ರಂಗನಾಥ್ ನಾಯ್ಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT