ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ನಿಯಮ ಮತ್ತೆ ಕಟ್ಟುನಿಟ್ಟು

ನರ್ಸಿಂಗ್‌ ಕಾಲೇಜಿನಲ್ಲಿ 40 ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಬೊಮ್ಮನಹಳ್ಳಿಯಲ್ಲಿ 28 ಮಂದಿಗೆ ಸೋಂಕು
Last Updated 15 ಫೆಬ್ರುವರಿ 2021, 16:00 IST
ಅಕ್ಷರ ಗಾತ್ರ

ಬೆಂಗಳೂರು: ಕಾವಲ್‌ ಬೈರಸಂದ್ರದಲ್ಲಿ ಮಂಜುಶ್ರೀ ನರ್ಸಿಂಗ್‌ ಕಾಲೇಜಿನ 40 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟ ಬೆನ್ನಲ್ಲೇ ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯ ಎಸ್ಎನ್ಎನ್ ರಾಜ್ ಲೇಕ್ ವ್ಯೂವ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ಸಮುಚ್ಚಯದ 28 ಮಂದಿಯಲ್ಲಿ ಕೊರೊಣ ಸೋಂಕು ಹೊಂದಿರುವುದು ಪತ್ತೆಯಾಗಿದೆ.

ನಿರ್ದಿಷ್ಟ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿರುವುದು ಹಾಗೂ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಬಿಬಿಎಂಪಿ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಸೋಂಕು ಹಬ್ಬುವುದನ್ನು ತಡೆಯಲು ನಿಯಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ಸಲುವಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತರು, ‘ಈ ಎರಡು ಘಟನೆಗಳು ಸೋಂಕನ್ನು ಕ್ಷಿಪ್ರಗತಿಯಲ್ಲಿ ಹರಡುವ ಸಾಧ್ಯತೆ ಇದೆ. ಹಾಗಾಗಿ ಕೋವಿಡ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನರ್ಸಿಂಗ್‌ ಕಾಲೇಜಿನ 210 ವಿದ್ಯಾರ್ಥಿಗಳಿಗೂ ಕೋವಿಒಡ್‌ ಪರೀಕ್ಷೆ ನಡೆಸಲಾಗಿದೆ. ಎಸ್ಎನ್ಎನ್ ರಾಜ್ ಲೇಕ್ ವ್ಯೂವ್ ರೆಸಿಡೆನ್ಸಿಯಲ್ಲಿ 500 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ್ದೇವೆ. ಇನ್ನೂ ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ಈ ಸಲುವಾಗಿಯೇ ಆರು ಶಿಬಿರಗಳನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

‘ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದೆ. ಅಲ್ಲಿಂದ ಬಂದಿರುವ ವಿದ್ಯಾರ್ಥಿಗಳಿಂದ ಮಂಜುಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಸೋಂಕು ಹರಡಿದೆ. ಬೊಮ್ಮನಹಳ್ಳಿ ವಲಯದ ಎಸ್ಎನ್ಎನ್ ರೆಸಿಡೆನ್ಸಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಿರು ಸಭಾಂಗಣದಲ್ಲಿ ಹೆಚ್ಚು ಜನ ಸೇರಿದ್ದರು. ಕೋವಿಡ್ ನಿಯಂತ್ರಣ ನಿಯಮಗಳನ್ನು‌ ಕಡೆಗಣಿಸಿದ್ದರಿಂದ ಅಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ’ ಎಂದು ತಿಳಿಸಿದರು.

‘ಕೇರಳದಿಂದ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಆ ರಾಜ್ಯದಿಂದ ಬರುವ ವ್ಯಕ್ತಿಗಳು ತಮಗೆ ಸೋಂಕು ಇಲ್ಲ ಎಂಬುದನ್ನು ಸಾಬೀತುಪಡಿಸಲು 72 ಗಂಟೆಗಳಿಂದ ಈಚೆಗೆ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯನ್ನು ಹೊಂದಿರಬೇಕು. ಈ ನಿಯಮ ಉಲ್ಲಂಘಿಸಿದರೆ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಚ್ಚರಿಸಿದರು.

ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ:

‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಡೆ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲು ಸೂಚಿಸಿದ್ದೇನೆ. ಪಾಲಿಕೆ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 200 ಹೆಚ್ಚುವರಿ ತಂಡಗಳು ಸೇರಿದಂತೆ ಒಟ್ಟು 341 ಕೋವಿಡ್‌ ಪರೀಕ್ಷಾ ತಂಡಗಳಿವೆ. ಪರೀಕ್ಷೆ ನಡೆಸುವುದಕ್ಕೆ ಅಗತ್ಯ ಸಿಬ್ಬಂದಿಯನ್ನೂ ನಿಯೋಜಿಸಿದ್ದೇವೆ. ಇವರು ನಿತ್ಯ 100 ಪರೀಕ್ಷೆಗಳನ್ನು ನಡೆಸಲಿದ್ದಾರೆ. ದಿನವೊಂದರಲ್ಲಿ 34 ಸಾವಿರ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಪಾಲಿಕೆ ಹೊಂದಿದೆ. ಸದ್ಯ ನಿತ್ಯ 20 ಸಾವಿರದಿಂದ 22 ಸಾವಿರ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದು ಆಯುಕ್ತರು ವಿವರಿಸಿದರು.

‘ಕೋವಿಡ್‌ ಪರೀಕ್ಷೆಗಳು ಸಾಮಗವಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲ ವಲಯಗಳ ಜಂಟಿ ಆಯುಕ್ತರು ನಿತ್ಯವೂ ಹಾಗೂ ವಲಯದ ವಿಶೇಷ ಆಯುಕ್ತರು ಎರಡು ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಬೇಕು. ಹೆಚ್ಚು ಪ್ರಕರಣಗಳು ಕಂಡುಬರುವ ಕಡೆ ಸೋಂಕಿತರನ್ನು ಪ್ರತ್ಯೇಕಪಡಿಸಲು ಕ್ರಮವಹಿಸಬೇಕು. ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಬೇಕು. ಅವರನ್ನೂ ಪ್ರತ್ಯೇಕಪಡಿಸಬೇಕು ಎಂದು ಸೂಚನೆ ನೀಡಲಾಗಿದೆ. ೀ ಕಾರ್ಯಕ್ಕೆ ಆರೋಗ್ಯ, ಕಂದಾಯ ವಿಭಾಗದ ಹಾಗೂ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳ ಬಳಸಿಕೊಳ್ಳುಬಹುದು’ ಎಂದು ತಿಳಿಸಿದರು.

ಆರ್‌ಡಬ್ಲ್ಯುಎ ಜೊತೆ ಸಂಪರ್ಕದಲ್ಲಿರಿ: ಕೋವಿಡ್ ನಿಯಂತ್ರಣಕ್ಕೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಅಥವಾ ಬಡಾವಣೆಗಳಲ್ಲಿರುವ ನಿವಾಸಿಗಳ ಕ್ಷೇಮಾಭೀವೃದ್ಧಿ ಸಂಘಗಳ ನೆರವನ್ನು ಪಡೆಯಬೇಕು ಎಂದು ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ಸೋಂಕು ಲಕ್ಷಣಗಳಿರುವವರನ್ನು ಪ್ರತ್ಯೇಕಪಡಿಸಿ ಚಿಕಿತ್ಸೆ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಆರ್‌ಡಬ್ಲ್ಯುಎ ಪ್ರತಿನಿಧಿಗಳ ಜೊತೆ ಆಯುಕ್ತರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡಸಲಿದ್ದಾರೆ. ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವುದಕ್ಕೂ ಈ ಸಂಘಗಳ ಸಹಕಾರ ಕೋರಲಿದ್ದಾರೆ.

‘ಹೆಚ್ಚು ಜನ ಸೇರಿಸಿ ಯಾವುದಾದರು ಕಾರ್ಯಕ್ರಮ ಆಯೋಜಿಸುವುದಾದರೇ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು’ ಎಂದೂ ಆಯುಕ್ತರು ಸಲಹೆ ನೀಡಿದ್ದಾರೆ.

ಕೋವಿಡ್ ನಿಯಮ ಜಾರಿಗೆ ಮಾರ್ಷಲ್ ನಿಯೋಜನೆ:

ನಗರದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದೆ. ಅದರ ಜೊತೆಗೇ ನಾಗರಿಕರು ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಬಿಬಿಎಂಪಿಯ ಕಳವಳಕ್ಕೆ ಕಾಣವಾಗಿದೆ.

‘ಮಾರ್ಷಲ್‌ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಬಸವರಾಜು, ಡಿ.ರಂದೀಪ್, ರೆಡ್ಡಿ ಶಂಕರ ಬಾಬು, ರವೀಂದ್ರ, ರಾಜೇಂದ್ರ ಚೋಳನ್ ಹಾಗೂ ಎಲ್ಲಾ ವಲಯಗಳ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT