ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಬೆಂಬಲಕ್ಕೆ ನಿಂತ ಕಾರ್ಪೊರೇಟರ್‌ಗಳು

ವಾರ್ಡ್‌ವಾರು ಮೀಸಲಾತಿ ಬದಲಾವಣೆ ಆತಂಕ
Last Updated 13 ನವೆಂಬರ್ 2019, 23:26 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಮತ್ತೆ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆಯೇ ಅವರ ಬೆಂಬಲಿಗರಾಗಿದ್ದ ಕಾರ್ಪೊರೇಟರ್‌ಗಳು ಬಹಿರಂಗವಾಗಿಯೇ ಅವರ ಪರ ಪ್ರಚಾರಕ್ಕೆ ಸಜ್ಜಾಗಿದ್ದಾರೆ.

ಪಾಲಿಕೆ ಚುನಾವಣೆ ಸಂದರ್ಭದಲ್ಲಿ ವಾರ್ಡ್‌ವಾರು ಮೀಸಲಾತಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಜೊತೆಗೆ ನಿಂತರೆ ಹೆಚ್ಚು ಅನುಕೂಲ. ಅಲ್ಲದೇ, ಆಡಳಿತ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದರಿಂದ ವಾರ್ಡ್‌ ಅಭಿವೃದ್ಧಿಗೆ ಹೆಚ್ಚಿನ ಅನುದಾನವ‌ನ್ನೂ ಪಡೆಯಬಹುದು ಎಂಬುದು ಅನರ್ಹ ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳ ಲೆಕ್ಕಾಚಾರ.

ಯಶವಂತ‍ಪುರ ಕ್ಷೇತ್ರದಲ್ಲಿ ಐವರು ಕಾರ್ಪೊರೇಟರ್‌ಗಳಲ್ಲಿ ಮೂವರು ಕಾಂಗ್ರೆಸ್‌ನವರು. ಅವರೆಲ್ಲರೂ ಎಸ್‌.ಟಿ.ಸೋಮಶೇಖರ್‌ ಪರ ವಹಿಸಲು ನಿರ್ಧರಿಸಿದ್ದಾರೆ.

‘ನಮ್ಮ ಗೆಲುವಿಗೆ ಕಾರಣವಾಗಿದ್ದು ಸೋಮಶೇಖರ್‌. ಹಾಗಾಗಿ ನಾವೂ ಅವರನ್ನು ಬೆಂಬಲಿಸಲಿದ್ದೇವೆ’ ಎಂದು ಹೆರೋಹಳ್ಳಿ ವಾರ್ಡ್‌ನ ರಾಜಣ್ಣ ತಿಳಿಸಿದರು. ಕೆ.ಆರ್‌.ಪುರ ಕ್ಷೇತ್ರದಲ್ಲಿ ಪಾಲಿಕೆಯ ಒಂಬತ್ತು ಸದಸ್ಯರಲ್ಲಿ ಆರು ಮಂದಿ ಕಾಂಗ್ರೆಸ್‌ನವರು. ಇವರಲ್ಲಿ ಎಚ್‌.ಎ.ಎಲ್‌ ವಾರ್ಡ್‌ನ ಎನ್‌.ಮಂಜುನಾಥ್‌ ಹೊರತಾಗಿ ಉಳಿದ ಐವರೂ ಬೈರತಿ ಬಸವರಾಜು ಅವರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿವಾಜಿನಗರ ಕ್ಷೇತ್ರದ ಏಳು ಪಾಲಿಕೆ ಸದಸ್ಯರಲ್ಲಿ ಐವರು ಕಾಂಗ್ರೆಸ್‌ನವರು. ಇವರಲ್ಲಿ ಎಷ್ಟು ಮಂದಿ ರೋಷನ್‌ ಬೇಗ್ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬುದು ಇನ್ನೂ ನಿಗೂಢ.

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಏಳು ಕಾರ್ಪೊರೇಟರ್‌ಗಳ ಪೈಕಿ ನಾಲ್ವರು ಜೆಡಿಎಸ್‌ನವರು. ಇವರಲ್ಲಿ ಎಸ್‌.ಪಿಹೇಮಲತಾ ಹಾಗೂ ಎಂ.ಮಹದೇವ ಅವರು ಕೆ.ಗೋಪಾಲಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಮೂವರು ನಾಮಪತ್ರ ಸಲ್ಲಿಕೆ
ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಕೆ.ಆರ್‌.ಪುರಕ್ಷೇತ್ರದಲ್ಲಿ ವೆಂಕಟೇಶ ಶೆಟ್ಟಿ, ಪಿ.ರಾಜಣ್ಣ, ಯಶವಂತಪುರ ಕ್ಷೇತ್ರದಲ್ಲಿ ಸಿ.ಆರ್‌.ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT