ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಿಡಿಎ ನಿವೇಶನ ವಂಚನೆ: ₹ 44.10 ಲಕ್ಷ ದಂಡ

ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸೋಗು: 5 ವರ್ಷ ಜೈಲು
Published 18 ಮಾರ್ಚ್ 2024, 18:50 IST
Last Updated 18 ಮಾರ್ಚ್ 2024, 18:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಡಾವಣೆಗಳಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸಿದ್ದ ಅಪರಾಧಿ ಜಾನ್ ಮೈಕಲ್‌ ಎಂಬಾತನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹44.10 ಲಕ್ಷ ದಂಡ ವಿಧಿಸಿ ನಗರದ 47ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಸಿಸಿಎಚ್–48) ಆದೇಶ ಹೊರಡಿಸಿದೆ.

ರಾಮಮೂರ್ತಿನಗರದ ಟಿ.ಸಿ.ಪಾಳ್ಯ ನಿವಾಸಿ ಜಾನ್ ಮೈಕಲ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಕೆ. ಅನುಪಮಾ ಅವರು ವಾದಿಸಿದ್ದರು.

‘ನಾನು, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ’ ಎಂಬುದಾಗಿ ಅಪರಾಧಿ ಜಾನ್ ಮೈಕಲ್ ಹೇಳಿಕೊಳ್ಳುತ್ತಿದ್ದ. ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಬಿಡಿಎ ನಿವೇಶನ ಕೊಡಿಸುವುದಾಗಿ ಜನರಿಗೆ ಹೇಳುತ್ತಿದ್ದ. ಇದಕ್ಕಾಗಿ ಹಣ ಖರ್ಚಾಗುವುದೆಂದು ತಿಳಿಸುತ್ತಿದ್ದ. ಈತನ ಮಾತು ನಂಬಿದ್ದ ದೂರುದಾರ ತಪನ್ ಭಂಡಾರಿ ಸೇರಿದಂತೆ ಮೂವರು, ಹಂತ ಹಂತವಾಗಿ ₹41.87 ಲಕ್ಷ ನೀಡಿದ್ದರು.

ಬಿಡಿಎ ನಿವೇಶನ ಹೆಸರಿನಲ್ಲಿ ನಕಲಿ ಹಂಚಿಕೆ ಪ್ರಮಾಣಪತ್ರ, ನಕಲಿ ಸೇಲ್ ಡೀಡ್ ಹಾಗೂ ಇತರೆ ದಾಖಲೆಗಳನ್ನು ಅಪರಾಧಿ ಸೃಷ್ಟಿಸಿದ್ದ. ಅದೇ ದಾಖಲೆಗಳನ್ನು ಸಂತ್ರಸ್ತರಿಗೆ ನೀಡಿ ನಂಬಿಸಿದ್ದ. ಕೆಲ ದಿನಗಳ ನಂತರ, ದಾಖಲೆಗಳು ನಕಲಿ ಎಂಬುದು ಸಂತ್ರಸ್ತರಿಗೆ ಗೊತ್ತಾಗಿತ್ತು. ಹಣ ವಾಪಸು ನೀಡುವಂತೆ ಸಂತ್ರಸ್ತರು ಕೇಳಿದ್ದರು. ಅಪರಾಧಿ ಹಣ ಕೊಟ್ಟಿರಲಿಲ್ಲ. ಅವಾಗಲೇ ಸಂತ್ರಸ್ತರು ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ಸಿಐಡಿ ಅಧಿಕಾರಿಗಳು, ಅಪರಾಧಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‘ಸಂತ್ರಸ್ತರಾದ ತಪನ್ ಭಂಡಾರಿ ಅವರಿಗೆ ₹ 26 ಲಕ್ಷ, ಶ್ರೀಧರನ್ ಅವರಿಗೆ ₹ 12 ಲಕ್ಷ ಹಾಗೂ ಚಂದಾ ಭಂಡಾರಿ ಅವರಿಗೆ ₹ 6 ಲಕ್ಷ ಪರಿಹಾರ ಪಾವತಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಉಳಿದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್‌.ಕೆ. ಅನುಪಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT